ಹೊಸದಿಲ್ಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅವರನ್ನು ಔಟ್ ಮಾಡಿದ ಬಳಿಕ ಫುಟ್ಬಾಲ್ ಆಟಗಾರ ಮಾರ್ಕಸ್ ರಾಶ್‌ಫೋರ್ಡ್ ಅವರ ಪ್ರಸಿದ್ಧ ‘ಟೆಂಪಲ್ ಪಾಯಿಂಟ್’ ಆಚರಣೆಯನ್ನು ಅನುಕರಿಸಿದರು. ಬುಮ್ರಾ ಅವರ ಸಂಭ್ರಮಾಚರಣೆಯು ಶೀಘ್ರವಾಗಿ ವೈರಲಾಗಿದೆ.
ವಿಕೆಟ್ ಪಡೆದ ನಂತರ, ಬುಮ್ರಾ ಅವರು ತಲೆಯ ಭಾಗಕ್ಕೆ ಬೆರಳು ಹಿಡಿದು ಫುಟ್ಬಾಲ್ ಆಟಗಾರನ ಪ್ರಸಿದ್ಧ ‘ಟೆಂಪಲ್ ಪಾಯಿಂಟ್’ ಆಚರಣೆಯನ್ನು ಅನುಕರಿಸಿದರು. ಈ ವಿಶಿಷ್ಟ ಮತ್ತು ಕುತೂಹಲಕಾರಿ ಆಚರಣೆಯು ಶೀಘ್ರದಲ್ಲೇ ಚರ್ಚೆಗೆ ಕಾರಣವಾಯಿತು. ಜಗತ್ತಿನಾದ್ಯಂತ ಅಭಿಮಾನಿಗಳು ಬುಮ್ರಾ ಅವರ ಆಚರಣೆ ಬಗ್ಗೆ ಚರ್ಚಿಸಿದರು. ಅವರ ಸಂಭ್ರಮಾಚರಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅಫ್ಘಾನ್ ವಿರುದ್ಧ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಹತ್ತು ಓವರ್ ಎಸೆದ ಬುಮ್ರಾ 39 ರನ್ ನೀಡಿ ನಾಲ್ವರು ಅಫ್ಘಾನ್ ಬ್ಯಾಟರ್ ಗಳನ್ನು ಔಟ್ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಎಂಟು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ನಾಯಕ ಹಶ್ಮತುಲ್ಲಾಹ್ ಶಾಹಿದಿ 80 ರನ್ ಗಳಿಸಿದರೆ, ಅಜ್ಮತುಲ್ಲಾಹ್ ಒಮಾರ್ ಝೈ ಅವರು ನಾಲ್ಕು ಸಿಕ್ಸರ್ ನೆರವಿನಿಂದ 62 ರನ್ ಮಾಡಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಕಿತ್ತರು.