Advertisement

World Cup 2023: ಲಂಕಾ ವಿರುದ್ಧ ಏಡನ್ ಮಾರ್ಕ್ರಮ್ ಸ್ಪೋಟಕ ಶತಕ; ವಿಶ್ವಕಪ್ ದಾಖಲೆ ಪತನ

06:16 PM Oct 07, 2023 | Team Udayavani |

ಹೊಸದಿಲ್ಲಿ: ವಿಶ್ವಕಪ್ ಅಭಿಯಾನ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು ಮೊದಲ ಎದುರಾಳಿ ಶ್ರೀಲಂಕಾಗೆ ತನ್ನ ಬ್ಯಾಟಿಂಗ್ ವೈಭವ ಪ್ರದರ್ಶಿಸಿದೆ. ಲಂಕಾ ಬೌಲರ್ ಗಳ ಬೆವರಿಳಿಸಿದ ಹರಿಣಗಳ ಬ್ಯಾಟರ್ ಗಳು ಬೌಂಡರಿ ಸಿಕ್ಸರ್ ಗಳ ಹೊಳೆ ಹರಿಸಿದ್ದಾರೆ.

Advertisement

ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಮೂವರು ಶತಕ ಸಿಡಿಸಿದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್, ವನ್ ಡೌನ್ ಆಟಗಾರ ವ್ಯಾನ್ ಡರ್ ಡ್ಯೂಸನ್ ಮತ್ತು ಏಡನ್ ಮಾರ್ಕ್ರಮ್ ನೂರರ ಗಡಿ ದಾಟಿದರು.

ಡಿಕಾಕ್ ಔಟಾಗುತ್ತಿದ್ದಂತೆ ಕ್ರೀಸ್ ಗೆ ಬಂದ ಮಾರ್ಕ್ರಮ್ ಲಂಕಾ ಬೌಲರ್ ಗಳನ್ನು ಅಟ್ಟಾಡಿಸಿದರು. ಆರಂಭದಿಂದಲೇ ಹೊಡಿಬಡಿ ಆಟದತ್ತ ಮನ ಮಾಡಿದ ಏಡಮ್ ಮಾರ್ಕ್ರಮ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟು 54 ಎಸೆತ ಎದುರಿಸಿದ ಮಾರ್ಕ್ರಮ್ 14 ಫೋರ್ ಮತ್ತು ಮೂರು ಸಿಕ್ಸರ್ ನೆರವಿನಿಂದ 106 ರನ್ ಗಳಿಸಿ ಔಟಾದರು.

ಇದೇ ವೇಳೆ ಏಡನ್ ಮಾರ್ಕ್ರಮ್ ಅವರು ಏಕದಿನ ವಿಶ್ವಕಪ್ ನಲ್ಲಿ ಅತೀ ವೇಗದ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ ಈ ದಾಖಲೆ ಐರ್ಲೆಂಡ್ ಆಟಗಾರ ಕೆವಿನ್ ಒಬ್ರಿಯಾನ್ ಹೆಸರಿನಲ್ಲಿತ್ತು. ಅವರು 2011ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ 50 ಎಸೆತದಲ್ಲಿ ಶತಕ ಪೂರೈಸಿದ್ದರು.

ಇದನ್ನೂ ಓದಿ:Israel War: ಇಸ್ರೇಲ್‌ ಮೇಲೆ ಹಮಾಸ್‌ 5 ಸಾವಿರ ರಾಕೆಟ್‌ ದಾಳಿ; ಸಿಡಿದೆದ್ದ ಇಸ್ರೇಲ್

Advertisement

ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ ಶತಕ ಬಾರಿಸಿದವರ ಪಟ್ಟಿಯಲ್ಲಿ ಏಡನ್ ಮಾರ್ಕ್ರಮ್ ಮೂರನೇ ಸ್ಥಾನಕ್ಕೇರಿದರು. 31 ಎಸೆತದಲ್ಲಿ ಶತಕ ಬಾರಿಸಿರುವ ಡಿವಿಲಿಯರ್ಸ್ ಮೊದಲ ಸ್ಥಾನ ಮತ್ತು 44 ಎಸೆತಗಳಲ್ಲಿ ಶತಕ ಪೂರೈಸಿದ್ದ ಮಾರ್ಕ್ ಬೌಚರ್ ಎರಡನೇ ಸ್ಥಾನದಲ್ಲಿದ್ದಾರೆ.

ಮಾರ್ಕ್ರಮ್ ಶತಕಕ್ಕೂ ಮೊದಲು ಕ್ವಿಂಟನ್ ಡಿಕಾಕ್ ಮತ್ತು ರಸ್ಸಿ ವ್ಯಾನ್ ಡರ್ ಡ್ಯೂಸನ್ ಶತಕ ಗಳಿಸಿದರು. ಡಿಕಾಕ್ 84 ಎಸೆತಗಳಲ್ಲಿ 100 ರನ್ ಗಳಿಸಿದರೆ, ಡ್ಯೂಸನ್ 110 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು.

ಏಕದಿನ ಕ್ರಿಕೆಟ್ ನಲ್ಲಿ ಒಂದೇ ಇನ್ನಿಂಗ್ಸ್ ನಲ್ಲಿ ಮೂವರು ಬ್ಯಾಟರ್ ಗಳು ಶತಕ ಬಾರಿಸಿರುವ ನಾಲ್ಕನೇ ನಿದರ್ಶನ ಇದಾಗಿದೆ. ವಿಂಡೀಸ್ ವಿರುದ್ದ ಜೋಹಾನ್ಸ್ ಬರ್ಗ್ ಮತ್ತು ಭಾರತದ ವಿರುದ್ಧ ಮುಂಬೈನಲ್ಲಿ 2015ರಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿತ್ತು. ಉಳಿದಂತೆ 2022ರಲ್ಲಿ ನೆದರ್ಲ್ಯಾಂಡ್ ವಿರುದ್ಧ ಇಂಗ್ಲೆಂಡ್ ನ ಮೂವರು ಒಂದೇ ಇನ್ನಿಂಗ್ಸ್ ನಲ್ಲಿ ಶತಕ ಹೊಡೆದಿದ್ದರು.

ಅತೀ ಹೆಚ್ಚು ಮೊತ್ತ: 50 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ಐದು ವಿಕೆಟ್ ನಷ್ಟಕ್ಕೆ 428 ರನ್ ಗಳಿಸಿದೆ. ಇದು ವಿಶ್ವಕಪ್ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ ಅತಿ ಹೆಚ್ಚು ರನ್ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next