Advertisement

ಚೋಕರ್ ಆಗದೇ ಆಟ ಮುಗಿಸೀತೇ ದಕ್ಷಿಣ ಆಫ್ರಿಕಾ?

11:35 PM Jun 20, 2019 | Sriram |

ಬರ್ಮಿಂಗ್‌ಹ್ಯಾಮ್‌: ಯಾವತ್ತೂ ಅಮೋಘ ಹೋರಾಟ ಪ್ರದರ್ಶಿಸಿ, ಇನ್ನೇನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರ ಹೊಮ್ಮಲಿದೆ ಎನ್ನುವಾಗಲೇ ಯಾರೂ ಕಲ್ಪಿಸಲಾಗದ ರೀತಿಯಲ್ಲಿ ವಿಶ್ವಕಪ್‌ನಿಂದ ಹೊರಬಿದ್ದು ಎಲ್ಲರಿಂದಲೂ ಅನುಕಂಪ ಗಿಟ್ಟಿಸುತ್ತಿದ್ದ ದಕ್ಷಿಣ ಆಫ್ರಿಕಾ ಈ ಬಾರಿ ತನ್ನ ನಿರ್ಗಮನ ಹಾದಿಯನ್ನು ಬದಲಿಸಿದೆ. “ಚೋಕರ್’ ಹಣೆಪಟ್ಟಿಯನ್ನು ಕಿತ್ತೆಸೆದು ಸತತವಾಗಿ ಸೋಲುಂಡೇ ಹೊರಬೀಳುವ ಯೋಜನೆಯೊಂದನ್ನು ಹಾಕಿಕೊಂಡಿದೆ. ನ್ಯೂಜಿ ಲ್ಯಾಂಡ್‌ ಎದುರಿನ ಬುಧವಾರದ ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಳ್ಳುವ ಮೂಲಕ ಡು ಪ್ಲೆಸಿಸ್‌ ಪಡೆಯ ಸೆಮಿಫೈನಲ್‌ ಸಾಧ್ಯತೆ ಬಹುತೇಕ ದೂರಾಗಿದೆ.

ಇದು 6 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಅನುಭವಿಸಿದ 4ನೇ ಸೋಲು. ಒಂದರಲ್ಲಷ್ಟೇ ಗೆದ್ದಿರುವ ಹರಿಣಗಳ ಪಡೆ, ಇನ್ನೊಂದರಲ್ಲಿ ಅಂಕ ಹಂಚಿಕೊಂಡಿದೆ.
Advertisement

ಲೆಕ್ಕಾಚಾರ ಸುಲಭವಲ್ಲ
ಉಳಿದ 3 ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದರೆ ದಕ್ಷಿಣ ಆಫ್ರಿಕಾಕ್ಕೂ ನಾಕೌಟ್‌ ಟಿಕೆಟ್‌ ಸಿಗುವ ಸಾಧ್ಯತೆ ಇದೆ ಎನ್ನುತ್ತದೆ ನಾನಾ ಲೆಕ್ಕಾಚಾರ. ಆದರೆ ಇದು ಅಷ್ಟು ಸುಲಭವಲ್ಲ. ಪಾಕಿಸ್ಥಾನ, ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಆಫ್ರಿಕಾ ಎದುರಿಸಬೇಕಿದೆ. ಇಲ್ಲಿ ಲೆಕ್ಕಾಚಾರದ ಆಟ ಸುಲಭವಲ್ಲ. ಅಲ್ಲದೇ ಹರಿಣಗಳ ರನ್‌ರೇಟ್‌ ಕೂಡ ಪಾತಾಳದಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 49 ಓವರ್‌ಗಳಲ್ಲಿ 6 ವಿಕೆಟಿಗೆ ಕೇವಲ 241 ರನ್‌ ಪೇರಿಸಿದರೆ, ನ್ಯೂಜಿಲ್ಯಾಂಡ್‌ 3 ಎಸೆತ ಬಾಕಿ ಇರುವಾಗ 6 ವಿಕೆಟಿಗೆ 245 ರನ್‌ ಬಾರಿಸಿ ತನ್ನ 4ನೇ ಗೆಲುವು ಸಾಧಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.

ನಾಯಕ ಕೇನ್‌ ರಿಚರ್ಡ್‌ಸನ್‌ ಅವರ ಅಜೇಯ 106 ರನ್‌ (138 ಎಸೆತ, 9 ಬೌಂಡರಿ, 1 ಸಿಕ್ಸರ್‌) ನ್ಯೂಜಿಲ್ಯಾಂಡನ್ನು ಸುರಕ್ಷಿತವಾಗಿ ದಡ ಮುಟ್ಟಿಸಿತು.

ಆಫ್ರಿಕಾವನ್ನು ಕಾಡಿದೆ
“ಎಬಿಡಿ ಫ್ಯಾಕ್ಟರ್‌’
ಬಲಿಷ್ಠವಾಗಿಯೇ ಗೋಚರಿಸುತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಇಂಥ ಅವಸ್ಥೆ ಯಾಕೆ ಎದುರಾಯಿತು? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ಇದಕ್ಕೆ ಸೂಕ್ತ ಉತ್ತರ “ಎಬಿಡಿ ಫ್ಯಾಕ್ಟರ್‌’. ಡಿ ವಿಲಿಯರ್ ಅವರ ಅಕಾಲಿಕ ನಿವೃತ್ತಿಯಿಂದ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಆಟ ಕಂಡುಬರುತ್ತಿಲ್ಲ, ಸ್ಥಿರತೆಯೂ ಗೋಚರಿಸುತ್ತಿಲ್ಲ.

Advertisement

ಮೊದಲ ಪಂದ್ಯದಲ್ಲೇ ಎದುರಾದ ಸೋಲಿ ನಿಂದ ತಂಡದ ಆತ್ಮವಿಶ್ವಾಸವೇ ಹೊರಟು ಹೋಗಿದೆ. ದೊಡ್ಡ ಮೊತ್ತ ಗಳಿಸುವುದು, ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಎರಡೂ ಸಾಧ್ಯವಾಗುತ್ತಿಲ್ಲ. ಓಪನಿಂಗ್‌ ನಿರೀಕ್ಷಿತ ಮಟ್ಟದಲ್ಲಿಲ್ಲ. ಆಲ್‌ರೌಂಡರ್‌ಗಳ ಕೊರತೆ ತೀವ್ರವಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಡೇಲ್‌ ಸ್ಟೇನ್‌ ಗೈರು ತೀವ್ರವಾಗಿ ಕಾಡಿದೆ.
ವಿಶ್ವಕಪ್‌ನಂಥ ಪ್ರತಿಷ್ಠಿತ ಕೂಟದಲ್ಲೇ ಇಷ್ಟೊಂದು ಸಮಸ್ಯೆಗಳು ಹರಿಣಗಳ ಮೇಲೆ ಸವಾರಿ ಮಾಡಿರುವುದು ನಿಜಕ್ಕೂ ವಿಪರ್ಯಾಸ. ಆಫ್ರಿಕಾ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡಿದ್ದೇ ಆದರೆ ಈ ಕೂಟದ ರೋಮಾಂಚನವೇ ಬೇರೆ ಇರುತ್ತಿತ್ತು!

ಕುತೂಹಲ ಕಾಯ್ದುಕೊಳ್ಳದ ಲೀಗ್‌
ಮೊನ್ನೆ ಅಫ್ಘಾನಿಸ್ಥಾನ, ನಿನ್ನೆ ದಕ್ಷಿಣ ಆಫ್ರಿಕಾ, ನಾಳೆ ಬಹುಶಃ ಶ್ರೀಲಂಕಾ, ನಾಡಿದ್ದು ವೆಸ್ಟ್‌ ಇಂಡೀಸ್‌… ಈ ರೀತಿಯಾಗಿ ಒಂದೊಂದೇ ತಂಡಗಳು ಕೆಲವೇ ದಿನಗಳ ಅಂತರದಲ್ಲಿ ವಿಶ್ವಕಪ್‌ನಿಂದ ಹೊರಬೀಳುವ ಸೂಚನೆ ಕಂಡಾಗ ಇದು “ಏಕಪಕ್ಷೀಯ ಟೂರ್ನಿ’ ಎಂಬುದು ಸಾಬೀತಾಗತೊಡಗಿದೆ. 10 ಬಲಿಷ್ಠ ತಂಡಗಳ ನಡುವಿನ ರೌಂಡ್‌ ರಾಬಿನ್‌ ಲೀಗ್‌ ಮಾದರಿಯನ್ನು ಏರ್ಪಡಿಸಿಯೂ ಈ ವಿಶ್ವಕಪ್‌ ತನ್ನ ಕುತೂಹಲವನ್ನು ಕಾಯ್ದುಕೊಳ್ಳಲು ವಿಫ‌ಲವಾಗಿರುವುದು ಸುಳ್ಳಲ್ಲ.

ಈ ನಡುವೆ ಬಾಂಗ್ಲಾದೇಶ ಮಾತ್ರ ದಿಟ್ಟ ಹೋರಾಟ ನಡೆಸುತ್ತಿದೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಮಣಿಸಿದರಷ್ಟೇ ಬಾಂಗ್ಲಾವನ್ನು ನಾಕೌಟ್‌ ರೇಸ್‌ಗೆ ಪರಿಗಣಿಸಬಹುದು. ಈ ಸಾಲು ಓದುವಾಗ ಫ‌ಲಿತಾಂಶ ಬಂದಿರುತ್ತದೆ.

ಈಗಿನ ಸಾಧ್ಯತೆ ಪ್ರಕಾರ ಇಂಗ್ಲೆಂಡ್‌, ಆಸ್ಟ್ರೇಲಿಯ, ಭಾರತ, ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌:ನ್ಯೂಜಿಲ್ಯಾಂಡ್‌-ದ. ಆಫ್ರಿಕಾ
· ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಸತತ 5ನೇ ಜಯ ದಾಖಲಿಸಿತು. ದಕ್ಷಿಣ ಆಫ್ರಿಕಾ ಕೊನೆಯ ಸಲ ನ್ಯೂಜಿಲ್ಯಾಂಡಿಗೆ ಸೋಲುಣಿಸಿದ್ದು 1999ರ ಬರ್ಮಿಂಗ್‌ಹ್ಯಾಮ್‌ ಪಂದ್ಯದಲ್ಲೇ ಎಂಬುದು ಕಾಕತಾಳೀಯ. ಅಂದು ಇತ್ತಂಡಗಳು ಮೊದಲ ಸಲ ಇಂಗ್ಲೆಂಡ್‌ನ‌ಲ್ಲಿ ಮುಖಾಮುಖೀಯಾಗಿದ್ದವು.
· ನ್ಯೂಜಿಲ್ಯಾಂಡ್‌ 1983ರ ವಿಶ್ವಕಪ್‌ ಬಳಿಕ ಮೊದಲ ಸಲ ಬರ್ಮಿಂಗ್‌ಹ್ಯಾಮ್‌ನಲ್ಲಿ ಜಯ ಸಾಧಿಸಿತು. ಕಳೆದ 25 ವರ್ಷಗಳಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ 7 ಏಕದಿನ ಪಂದ್ಯಗಳನ್ನಾಡಿದ ಕಿವೀಸ್‌ ಮೂರರಲ್ಲಿ ಸೋತಿದೆ. ಉಳಿದ 4 ಪಂದ್ಯಗಳು ಫ‌ಲಿತಾಂಶ ಕಂಡಿಲ್ಲ.
· ನ್ಯೂಜಿಲ್ಯಾಂಡ್‌ ವಿಶ್ವಕಪ್‌ ಚೇಸಿಂಗ್‌ ವೇಳೆ ಸತತ 10 ಪಂದ್ಯಗಳನ್ನು ಜಯಿಸಿತು. ಇದು ಸತತ ಚೇಸಿಂಗ್‌ ಗೆಲುವಿನ 2ನೇ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯ ನಿರಂತರ 19 ಪಂದ್ಯಗಳನ್ನು ಗೆದ್ದದ್ದು ದಾಖಲೆ. ಇದೇ ಕೂಟದಲ್ಲಿ ಭಾರತ ತಂಡ ಕಾಂಗರೂಗಳ ಗೆಲುವಿನ ಸರಪಳಿಯನ್ನು ಮುರಿದಿತ್ತು.
· ಕೇನ್‌ ವಿಲಿಯಮ್ಸನ್‌ ಇಂಗ್ಲೆಂಡ್‌ನ‌ಲ್ಲಿ ಅತೀ ಕಡಿಮೆ 17 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಒಟ್ಟುಗೂಡಿಸಿದ ದಾಖಲೆ ಸ್ಥಾಪಿಸಿದರು. ರವಿವಾರವಷ್ಟೇ ರೋಹಿತ್‌ ಶರ್ಮ 18 ಇನ್ನಿಂಗ್ಸ್‌ಗಳಿಂದ ಈ ಸಾಧನೆಗೈದ ದಾಖಲೆ ಪತನಗೊಂಡಿತು. ಅಂದು ರೋಹಿತ್‌ ಶರ್ಮ ತಮ್ಮ ಜತೆಗಾರ ಶಿಖರ್‌ ಧವನ್‌ ದಾಖಲೆ ಮುರಿದಿದ್ದರು (19 ಇನ್ನಿಂಗ್ಸ್‌).
· ಕೇನ್‌ ವಿಲಿಯಮ್ಸನ್‌ ವಿಶ್ವಕಪ್‌ನಲ್ಲಿ ಮೊದಲ ಶತಕ ಬಾರಿಸಿದರು (ಅಜೇಯ 106). ಅವರು ವಿಶ್ವಕಪ್‌ ಕೂಟದ ಯಶಸ್ವಿ ಚೇಸಿಂಗ್‌ ವೇಳೆ ಶತಕ ದಾಖಲಿಸಿದ 5ನೇ ನಾಯಕ. ಉಳಿದವರೆಂದರೆ ಗ್ಲೆನ್‌ ಟರ್ನರ್‌, ಸ್ಟೀವ್‌ ವೋ, ಸೌರವ್‌ ಗಂಗೂಲಿ ಮತ್ತು ಸ್ಟೀಫ‌ನ್‌ ಫ್ಲೆಮಿಂಗ್‌ (2 ಸಲ).
· ವಿಲಿಯಮ್ಸನ್‌ ನಾಯಕನಾಗಿ 3 ಸಾವಿರ ರನ್‌ ಪೂರ್ತಿಗೊಳಿಸಿದ ವಿಶ್ವದ 21ನೇ, ನ್ಯೂಜಿಲ್ಯಾಂಡಿನ 2ನೇ ಕ್ರಿಕೆಟಿಗನೆನಿಸಿದರು. ಇದಕ್ಕಾಗಿ ಅವರು 67 ಇನ್ನಿಂಗ್ಸ್‌ ತೆಗೆದುಕೊಂಡರು. ಇನ್ನಿಂಗ್ಸ್‌ ಲೆಕ್ಕಾಚಾರದಲ್ಲಿ ಇದು 3ನೇ ಅತೀ ವೇಗದ ಸಾಧನೆ. ಮೊದಲೆರಡು ಸ್ಥಾನದಲ್ಲಿರುವವರು ವಿರಾಟ್‌ ಕೊಹ್ಲಿ (49 ಇನ್ನಿಂಗ್ಸ್‌) ಮತ್ತು ಎಬಿ ಡಿ ವಿಲಿಯರ್ (60 ಇನ್ನಿಂಗ್ಸ್‌).
· ಗಪ್ಟಿಲ್‌ ವಿಶ್ವಕಪ್‌ನಲ್ಲಿ ಹಿಟ್‌ ವಿಕೆಟ್‌ ರೂಪದಲ್ಲಿ ಔಟಾದ ನ್ಯೂಜಿಲ್ಯಾಂಡಿನ ಮೊದಲ ಹಾಗೂ ಒಟ್ಟಾರೆಯಾಗಿ 9ನೇ ಆಟಗಾರ.
· ಗಪ್ಟಿಲ್‌ ಏಕದಿನ ಇತಿಹಾಸದಲ್ಲಿ ಹಿಟ್‌ ವಿಕೆಟ್‌ ಆಗಿ ಔಟಾ ದ ನ್ಯೂಜಿಲ್ಯಾಂಡಿನ 6ನೇ ಕ್ರಿಕೆಟಿಗ. 2014ರ ವೆಸ್ಟ್‌ ಇಂಡೀಸ್‌ ಎದುರಿನ ಹ್ಯಾಮಿಲ್ಟನ್‌ ಪಂದ್ಯದಲ್ಲಿ ಲ್ಯೂಕ್‌ ರಾಂಚಿ ಔಟಾದ ಬಳಿಕ ಕಾಣಸಿಕ್ಕಿದ ನ್ಯೂಜಿಲ್ಯಾಂಡಿನ ಮೊದಲ ನಿದರ್ಶನ.
· ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಅಗ್ರ ಸರದಿಯ 3 ಆಟಗಾ ರರು ಬೌಲ್ಡ್‌ ಆಗಿ ಔಟಾದರು.
ವಿಶ್ವಕಪ್‌ನಲ್ಲಿ ಇಂಥ ನಿದರ್ಶನ ಕಂಡುಬಂದದ್ದು ಇದು 5ನೇ ಸಲ.

Advertisement

Udayavani is now on Telegram. Click here to join our channel and stay updated with the latest news.

Next