Advertisement

ಸೆಮಿ ನಿರೀಕ್ಷೆಯಲ್ಲಿ ಭಾರತ ಅಪಾಯದಲ್ಲಿ ವಿಂಡೀಸ್‌

09:33 AM Jun 28, 2019 | Team Udayavani |

ಮ್ಯಾಂಚೆಸ್ಟರ್‌: ಒಂದು ಕಾಲದ ದೈತ್ಯ ತಂಡ, ಮೊದಲೆರಡು ಬಾರಿಯ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ತಂಡ ಗುರುವಾರ ತನ್ನ ಮಹತ್ವದ ಪಂದ್ಯ ಆಡಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಈ ಮುಖಾಮುಖೀಯಲ್ಲಿ ಕೊಹ್ಲಿ ಪಡೆ ಗೆದ್ದರೆ ತನ್ನ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಗೊಳಿಸಿಕೊಳ್ಳುತ್ತದೆ. ವಿಂಡೀಸ್‌ ಕೂಟದಿಂದ ಗಂಟುಮೂಟೆ ಕಟ್ಟುತ್ತದೆ.

Advertisement

1983ರ ವಿಶ್ವಕಪ್‌ನಲ್ಲಿ ಯಾವಾಗ ಭಾರತದ ಕೈಯಲ್ಲಿ ಎರಡು ಬಲವಾದ ಏಟು ತಿಂದಿತೋ, ಅಲ್ಲಿಂದ ವೆಸ್ಟ್‌ ಇಂಡೀಸ್‌ ಮೇಲೆದ್ದಿಲ್ಲ. ಚಾಂಪಿಯನ್‌ ಆಗುವುದಿರಲಿ, ಪ್ರಶಸ್ತಿ ಸುತ್ತನ್ನೂ ಕಂಡಿಲ್ಲ. ಭಾರತದೆದುರು ಕಳೆದ ಮೂರೂ ವಿಶ್ವಕಪ್‌ ಪಂದ್ಯಗಳನ್ನು ಸೋತ ಸಂಕಟವೂ ಕಾಡುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಂಡು ಬಂದರೂ ಛಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಕೆರಿಬಿಯನ್‌ ಪಡೆ ಸಂಪೂರ್ಣ ಎಡವಿದೆ.

ವಿಂಡೀಸ್‌ ನಿರೀಕ್ಷೆ ಹುಸಿ
ಆರಂಭದ ಪಂದ್ಯದಲ್ಲಿ ಪಾಕಿಸ್ಥಾನವನ್ನು ಉರುಳಿಸಿದ್ದನ್ನು ಕಂಡಾಗ ಹೋಲ್ಡರ್‌ ಪಡೆಯ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಗೇಲ್‌, ಹೋಪ್‌, ಹೆಟ್‌ಮೈರ್‌, ರಸೆಲ್‌, ಬ್ರಾತ್‌ವೇಟ್‌, ಪೂರನ್‌ ಅವರಂಥ ಹಿಟ್ಟರ್‌ಗಳನ್ನು ಒಳಗೊಂಡ ತಂಡ ವಿಶ್ವಕಪ್‌ನಂಥ ಪ್ರತಿಷ್ಠಿತ ಕೂಟವನ್ನು ಇನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ದುರಂತ. ಈ ಕೆರಿಬಿಯನ್ನರಿಗೆ ಫಾರ್ಮ್ ಎಂಬುದು ಕೇವಲ ಔಪಚಾರಿಕ. ನಿರ್ದಿಷ್ಟ ದಿನದಂದು ಆವೇಶ ಬಂದವರಂತೆ ಆಡಿದರೆ ಈ ತಂಡ ಯಾವುದೇ ಎದುರಾಳಿಯನ್ನು ಹೊಡೆದುರುಳಿ ಸಬಲ್ಲದು. ಹೀಗಾಗಿ ಭಾರತ ಹೆಚ್ಚು ಎಚ್ಚರ ವಹಿಸಬೇಕಿದೆ.

ಹೊಡಿಬಡಿ ಆಟಗಾರ ಆ್ಯಂಡ್ರೆ ರಸೆಲ್‌ ವಿಶ್ವಕಪ್‌ನಿಂದ ನಿರ್ಗಮಿಸಿರುವುದು ವಿಂಡೀಸಿಗೆ ಎದುರಾಗಿರುವ ದೊಡ್ಡ ಹೊಡೆತ. ಇವರ ಬದಲು ಸುನೀಲ್‌ ಆ್ಯಂಬ್ರಿಸ್‌ ಬಂದಿದ್ದಾರೆ. ಇವರು ಗೇಲ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಅಭ್ಯಾಸ ನಡೆಸಿದ ಭುವನೇಶ್ವರ್‌
ಭಾರತದ ಪಾಲಿನ ಸದ್ಯದ ಚಿಂತೆಯೆಂದರೆ ಧೋನಿ ಬ್ಯಾಟಿಂಗ್‌ ಫಾರ್ಮ್. ಅಫ್ಘಾನ್‌ ವಿರುದ್ಧ ಧೋನಿ ಆಡಿದ ಆಮೆಗತಿಯ ಆಟಕ್ಕೆ ದೊಡ್ಡ ಮಟ್ಟದಲ್ಲೇ ಟೀಕೆ ವ್ಯಕ್ತವಾಗಿದೆ. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲು ತೆರಳಿದ ಬಳಿಕ ಮಧ್ಯಮ ಸರದಿಯ ದೌರ್ಬಲ್ಯ ಬೆಳಕಿಗೆ ಬರತೊಡಗಿದೆ.

Advertisement

ವಿಜಯ್‌ ಶಂಕರ್‌ ಇನ್ನೂ ಅನನುಭವಿ. ಪಾಕ್‌ ವಿರುದ್ಧ 2 ವಿಕೆಟ್‌ ಕಿತ್ತ ಅವರನ್ನು ಅಫ್ಘಾನ್‌ ವಿರುದ್ಧ ಬೌಲಿಂಗಿಗೇ ಇಳಿಸದಿದ್ದುದು ದೊಡ್ಡ ಅಚ್ಚರಿ. ಶಂಕರ್‌ ಅವರನ್ನು ಕೇವಲ ಬ್ಯಾಟ್ಸ್‌ಮನ್‌ ಆಗಿ ಬಳಸಿಕೊಳ್ಳುವುದು ತರವಲ್ಲ. ಹಾಗಿದ್ದರೆ ಈ ಸ್ಥಾನದಲ್ಲಿ ಕಾರ್ತಿಕ್‌ ಅಥವಾ ಪಂತ್‌ ಅವರನ್ನು ಆಡಿಸುವುದು ಸೂಕ್ತ.

ಭಾರತದ ಬೌಲಿಂಗ್‌ ಹೆಚ್ಚು ಪರಿಣಾ ಮಕಾರಿಯಾಗಿದೆ. ಅಫ್ಘಾನ್‌ ವಿರುದ್ಧ ಗೆದ್ದದ್ದೇ ಬೌಲಿಂಗ್‌ ಬಲದಿಂದ. ಶಮಿ ಅವರ ಹ್ಯಾಟ್ರಿಕ್‌ ಪರಾಕ್ರಮ ಮರೆಯುವಂತಿಲ್ಲ. ಭುವನೇಶ್ವರ್‌ ಚೇತರಿ ಸಿದ್ದು, ಅಭ್ಯಾಸ ನಡೆಸಿದ್ದಾರೆ. ಆದರೆ ಅವರ ವಿಶ್ರಾಂತಿ ಮುಂದುವರಿಯುವ ಸಾಧ್ಯತೆ ಇದೆ.

ಭಾರತಕ್ಕಿನ್ನೂ 4 ಪಂದ್ಯ
ಅಫ್ಘಾನಿಸ್ಥಾನ ವಿರುದ್ಧ ನಿರೀಕ್ಷೆಗೂ ಕೆಳ ಮಟ್ಟದ ಆಟವಾಡಿ ಸೋಲನ್ನು ತಪ್ಪಿಸಿಕೊಂಡ ಭಾರತಕ್ಕೆ ಇದೊಂದು ಪಾಠವಾಗಬೇಕಿದೆ. ಅಫ್ಘಾನ್‌ ತಂಡವನ್ನು ಹಗುರವಾಗಿ ತೆಗೆದುಕೊಂಡದ್ದು, ಅವರ ಸ್ಪಿನ್ನಿಗೆ “ಹೆಚ್ಚು ಮರ್ಯಾದೆ’ ಕೊಟ್ಟದ್ದೆಲ್ಲ ಕೊಹ್ಲಿ ಪಡೆಯ ಸಂಕಟವನ್ನು ಬಿಗಡಾಯಿಸುವಂತೆ ಮಾಡಿತ್ತು. ಆದರೆ ನಸೀಬು ಗಟ್ಟಿ ಇತ್ತು. 9 ಅಂಕಗಳನ್ನು ಹೊಂದಿರುವ ಭಾರತ ಸದ್ಯ 3ನೇ ಸ್ಥಾನದಲ್ಲಿದೆ. ಲಾಭವೆಂದರೆ, ಎಲ್ಲ ತಂಡಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಹೊಂದಿರುವುದು. ಇದೂ ಸೇರಿ ಒಟ್ಟು 4 ಪಂದ್ಯ ಆಡಬೇಕಿರುವ ಕೊಹ್ಲಿ ಪಡೆಗೆ ಇನ್ನೂ 8 ಅಂಕಗಳನ್ನು ಸಂಪಾದಿಸುವ ಅವಕಾಶವಿದೆ. ಹೀಗಾಗಿ ಒತ್ತಡವೇನಿಲ್ಲ. ಆದರೆ ಬಹಳ ಬೇಗನೇ ಗೆದ್ದು ನಾಕೌಟ್‌ ಪ್ರವೇಶಿಸುವುದು ಹೆಚ್ಚು ಸುರಕ್ಷಿತ.

ಭಾರತ
ಕೆ.ಎಲ್‌. ರಾಹುಲ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ವಿಜಯ್‌ ಶಂಕರ್‌, ಧೋನಿ, ಕೇದಾರ್‌ ಜಾಧವ್‌, ಪಾಂಡ್ಯ, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌.

ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌, ಎವಿನ್‌ ಲೂವಿಸ್‌/ಸುನೀಲ್‌ ಆ್ಯಂಬ್ರಿಸ್‌, ಶೈ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರನ್‌ ಹೆಟ್‌ಮೈರ್‌, ಜಾಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಆ್ಯಶೆÉ ನರ್ಸ್‌, ಕೆಮರ್‌ ರೋಚ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಸ್ಥಳ:ಮ್ಯಾಂಚೆಸ್ಟರ್‌
ಆರಂಭ: 3.00

Advertisement

Udayavani is now on Telegram. Click here to join our channel and stay updated with the latest news.

Next