ಹಂಪನಕಟ್ಟೆ: ಹಿಂದೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನರು ಸಾಯುವ ಸಂಖ್ಯೆ ಹೆಚ್ಚಿತ್ತು. ಆದರೆ ಇಂದು ಸಾಂಕ್ರಾಮಿಕ ರೋಗಗಗಳಿಗಿಂತ ಅಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ,ಪಾರ್ಶ್ವವಾಯು ಮೊದಲಾದ ಹೃದಯದ ಕಾಯಿಲೆ ಮೊದಲಾದವುಗಳಿಂದ ಜನರು ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿದೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ ಎಂದು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ| ಸದಾಶಿವ ಶಾನುಭೋಗ್
ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಎನ್‌ಸಿಡಿ ಕೋಶ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ
ದಿನ ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ವ್ಯಾಯಾಮ, ಉತ್ತಮ ಆಹಾರ ಸೇವನೆ, ಯೋಗ, ಮನಸ್ಸಿನ ಒತ್ತಡ ಕಡಿಮೆ ಮಾಡುವುದು ಮೊದಲಾದ ಆರೋಗ್ಯಕರ ಜೀವನ ಶೈಲಿ ನಮ್ಮನ್ನು ಈ ಅಸಾಂಕ್ರಾಮಿಕ ರೋಗಗಳಿಂದ ದೂರ ಇರಿಸುತ್ತದೆ. ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಆಯುಷ್ಯ ಹೆಚ್ಚಿಸಿಕೊಳ್ಳಬಹುದು. ಜತೆಗೆ ಮನೆಯವರು, ಸಮಾಜದ ಆತ್ಮವಿಶ್ವಾಸದ ಮಾತುಗಳು ಕೂಡ ರೋಗದಿಂದ ಮುಕ್ತರಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. ತಕ್ಷಣ ವೈದ್ಯರನ್ನು ಭೇಟಿಯಾಗಿ ಎರಡನೇ ಹಂತದಲ್ಲಿದ್ದ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದ ವೆನ್ಲಾಕ್‌ನ ಫಾರ್ಮಸಿ ಅಧಿಕಾರಿ ನಿರ್ಮಲಾ ಜಿ.ಪಾಯಸ್ ಅವರು ತಮ್ಮ ಅನುಭವವನ್ನು ವಿವರಿಸಿದರು. ಮಹಿಳೆಯರು 40 ವರ್ಷದ ಬಳಿಕ ತಿಂಗಳಿಗೊಮ್ಮೆ ಸ್ವ ಪರೀಕ್ಷೆ ಮಾಡಿಕೊಳ್ಳಬೇಕು. ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಭಯವನ್ನು ಮನಸ್ಸಿನಿಂದ ಹೋಗಲಾಡಿಸುವುದು ಅಗತ್ಯ ಎಂದರು.
ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ| ಸುಧಾಕರ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್ ಭಂಡಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ. ಅಧ್ಯಕ್ಷ ಡಾ| ಸಿ.ಎ.ಶಾಂತರಾಮ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯದ ಎನ್‌ಸಿಡಿ ಕ್ಲಿನಿಕ್ ವೈದ್ಯಾಧಿಕಾರಿ ಡಾ| ತಪ್ಸಿಯಾ, ವೈದ್ಯರಾದ ಡಾ|ರಾಹುಲ್, ಡಾ| ಅಶ್ವಿನ್ ಉಪಸ್ಥಿತರಿದ್ದರು.
ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿ ಡಾ| ಅಣ್ಣಯ್ಯ ಕುಲಾಲ್ ಉಳೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರೋಶನಿ ನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್ ವಿಭಾಗದ ವಿದ್ಯಾರ್ಥಿಗಳು ಕ್ಯಾನ್ಸರ್ ಜಾಗೃತಿ ಕಿರುನಾಟಕ ಪ್ರದರ್ಶಿಸಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶದ ಸಿಬಂದಿ ತಂಬಾಕು ಸೇವನೆ ಜಾಗೃತಿ ಪ್ರಮಾಣ ವಚನ ಬೋಧಿಸಿದರು.