ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ರಾಜಭವನದಲ್ಲಿ ವಿಶ್ವ ಬಂಧುತ್ವ ಸಂದೇಶ ಸಾರಲಾಯಿತು. ಶ್ರೀಲಂಕಾ, ಅಫ್ಘಾನಿಸ್ತಾನ, ಭೂತಾನ್ ಹಾಗೂ ಬಾಂಗ್ಲಾ ದೇಶಗಳ ಯುವಕರು ತಮ್ಮ ದೇಶೀ ಸಂಸ್ಕೃತಿ ಸಾರುವ ನೃತ್ಯಗಳ ಮೂಲಕ ಗಾಂಧಿ ತತ್ವ ವಿಶ್ವಕ್ಕೆ ಮಾದರಿಯಾಗಿವೆ ಎನ್ನುವ ವಿಶ್ವ ಬಂಧುತ್ವ ಸಂದೇಶ ಸಾರಿದರು.
ಗಾಂಧಿ ಕುರಿತು ಮಕ್ಕಳ ಹಾಡು, ಶರಡ್ಜ್ ಗೋಡ್ಖಿಂಡಿಯ ಕೊಳಲು ವಾದನ, ಜಯತೀರ್ಥ ಮೇವುಂಡಿಯವರ ವೈಷ್ಣವ ಜನತೋ ಗಾಂಧಿ ಭಜನ್ ರಾಜಭವನದ ಗಾಜಿನ ಮನೆಯಲ್ಲಿ ಸೇರಿದ್ದ ಸಭಿಕರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ಮಹಾತ್ಮಾ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ಹೋರಾಟದಿಂದ ಪ್ರೇರಿತರಾದ 111 ದೇಶಗಳು ಸ್ವಾತಂತ್ರ್ಯ ಪಡೆದಿವೆ. ವಿಶ್ವದ 110 ದೇಶಗಳಲ್ಲಿ ಗಾಂಧೀಜಿಯ ಪ್ರತಿಮೆಗಳನ್ನು ಅಳವಡಿಸಲಾಗಿದ್ದು, ಜಗತ್ತು ಗಾಂಧಿ ತತ್ವಗಳಿಗೆ ಮಾರು ಹೋಗಿದೆ. ಆದರೆ, ಭಾರತೀಯರು ಗಾಂಧಿ ತತ್ವಗಳನ್ನು ಮರೆಯುತ್ತಿದ್ದೇವೆ ಎಂದು ಹೇಳಿದರು.
ಮಹಾತ್ಮಾ ಗಾಂಧಿ ಜೀವನದಲ್ಲಿ ಎಂದೂ ತಪ್ಪು ಮಾಡಿರಲಿಲ್ಲ. ಆ ರೀತಿಯ ಯೋಚನೆಯನ್ನೂ ಮಾಡಲಿಲ್ಲ. ಜೀವನದಲ್ಲಿ ಯಾರಿಗೂ ಹೆದರಬಾರದು ಎನ್ನುವ ತತ್ವವನ್ನು ಗಾಂಧೀಜಿ ಅಳವಡಿಸಿಕೊಂಡಿದ್ದರು. ಭಾರತ ಇಬ್ಟಾಗವಾಗುವುದು ಗಾಂಧೀಜಿಗೆ ಇಷ್ಟವಿರಲಿಲ್ಲ.
ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಒಟ್ಟಾಗಿ ಇರೋಣ ಎಂದು ಮೊಹಮದ್ ಅಲಿ ಜಿನ್ನಾ ಅವರಿಗೆ ಮನವಿ ಮಾಡಿಕೊಂಡರು. ಆದರೆ, ದೇಶ ಇಬ್ಟಾಗವಾಗುವುದನ್ನು ತಡೆಯಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಿಂದೂ. ಬೌದ್ಧ, ಕ್ರೈಸ್ತ, ಇಸ್ಲಾಂ, ಜೈನ ಧರ್ಮ ಗುರುಗಳಿಂದ ಧರ್ಮ ತತ್ವಗಳ ಬೋಧನೆ ಮಾಡಿಸಲಾಯಿತು.