Advertisement

ಸಂಜು ಸ್ಯಾಮ್ಸನ್‌ ದ್ವಿಶತಕ ದಾಖಲೆ

10:44 PM Oct 12, 2019 | Team Udayavani |

ಆಲೂರು: ಕೇರಳದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಗೋವಾ ಎದುರಿನ “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿ ಅನೇಕ ಹೊಸ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

Advertisement

ಶನಿವಾರ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್‌ಸಿಎ (2) ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್‌ ಅಜೇಯ 212 ರನ್‌ ಬಾರಿಸಿ ಮೆರೆದರು. ಇದು “ಲಿಸ್ಟ್‌ ಎ’ ಕ್ರಿಕೆಟ್‌ ಇತಿಹಾಸದಲ್ಲಿ ವಿಕೆಟ್‌ ಕೀಪರ್‌ ಓರ್ವ ಬಾರಿಸಿದ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. ಕಳೆದ ವರ್ಷವಷ್ಟೇ ಪಾಕಿಸ್ಥಾನಿ ಏಕದಿನ ದೇಶಿ ಕ್ರಿಕೆಟ್‌ನಲ್ಲಿ ಅಬಿದ್‌ ಅಲಿ 208 ರನ್‌ ಹೊಡೆದ ದಾಖಲೆ ಪತನಗೊಂಡಿತು. ಭಾರತದ ಪರ ಈ ದಾಖಲೆ ಮಹೇಂದ್ರ ಸಿಂಗ್‌ ಧೋನಿ ಹೆಸರಲ್ಲಿತ್ತು (ಅಜೇಯ 183).

ಸರ್ವಾಧಿಕ ವೈಯಕ್ತಿಕ ಗಳಿಕೆ
ಸ್ಯಾಮ್ಸನ್‌ ಅವರ 212 ರನ್‌ ಭಾರತದ ಏಕದಿನ ದೇಶಿ ಕ್ರಿಕೆಟ್‌ ಪಂದ್ಯದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. ಹಿಂದಿನ ದಾಖಲೆ ಉತ್ತರಾಖಂಡ್‌ನ‌ ಕೆ.ವಿ. ಕೌಶಲ್‌ ಹೆಸರಲ್ಲಿತ್ತು. ಅವರು ಸಿಕ್ಕಿಂ ವಿರುದ್ಧ 202 ರನ್‌ ಹೊಡೆದಿದ್ದರು.

ಕಡಿಮೆ ಎಸೆತಗಳಲ್ಲಿ ದ್ವಿಶತಕ
ಸಂಜು ಸ್ಯಾಮ್ಸನ್‌ ಕೇವಲ 129 ಎಸೆತಗಳಿಂದ 212 ರನ್‌ ಬಾರಿಸಿದರು. ಇದರಲ್ಲಿ 21 ಬೌಂಡರಿ, 10 ಸಿಕ್ಸರ್‌ ಸೇರಿತ್ತು. ದ್ವಿಶತಕಕ್ಕೆ ಇವರು ಎದುರಿಸಿದ್ದು ಕೇವಲ 125 ಎಸೆತ. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಭಾರತೀಯ ದಾಖಲೆಯಾಗಿದೆ. ಶಿಖರ್‌ ಧವನ್‌ 132 ಎಸೆತಗಳಿಂದ ಡಬಲ್‌ ಸೆಂಚುರಿ ಬಾರಿಸಿದ ದಾಖಲೆಯನ್ನು ಸ್ಯಾಮ್ಸನ್‌ ಅಳಿಸಿ ಹಾಕಿದರು.

ಸಂಜು ಸ್ಯಾಮ್ಸನ್‌ ಅವರಿಗೆ ಸಚಿನ್‌ ಬೇಬಿ ಅವರಿಂದ ಉತ್ತಮ ಬೆಂಬಲ ಲಭಿಸಿತು. ಬೇಬಿ 127 ರನ್‌ ಹೊಡೆದರು. ಕೇರಳ 3 ವಿಕೆಟಿಗೆ 377 ರನ್‌ ಪೇರಿಸಿತು. ಜವಾಬಿತ್ತ ಗೋವಾ 8 ವಿಕೆಟಿಗೆ 273 ರನ್‌ ಗಳಿಸಿ 104 ರನ್‌ ಅಂತರದಿಂದ ಸೋತಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next