ಹೊಸದಿಲ್ಲಿ: ವಿಶ್ವ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಬಾಕ್ಸರ್‌ಗಳಾದ ಎಂ.ಸಿ. ಮೇರಿ ಕೋಮ್, ಮನೀಷಾ ಮೌನ್, ಲವ್ಲಿನಾ ಬೊರ್ಗೊಹೆನ್ ಹಾಗೂ ಭಾಗ್ಯವತಿ ಕಚಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ರವಿವಾರ ನಡೆದ 48 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ಕಜಾಕ್‌ಸ್ಥಾನದ ಎ. ಕಸ್ಸೆನಯೇವಾ ವಿರುದ್ಧ 5-0 ಅಂಕಗಳಿಂದ ಜಯಿಸಿದರು. 5 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕ್ವಾರ್ಟರ್ ಫೈನಲ್‌ನಲ್ಲಿ ಚೀನದ ವು ಯು ಅವರನ್ನು ಎದುರಿಸಲಿದ್ದಾರೆ.
ಇದಕ್ಕೂ ಮುನ್ನ ನಡೆದ 54 ಕೆಜಿ ವಿಭಾಗ ಪಂದ್ಯದಲ್ಲಿ ಮನೀಷಾ ಮೌನ್ ಹಾಲಿ ವಿಶ್ವ ಚಾಂಪಿಯನ್, ಕಜಾಕ್‌ಸ್ಥಾನದ ದಿನಾ ಝಲಮನ್ ವಿರುದ್ಧ 5-0 ಅಂಕಗಳಿಂದ ಗೆದ್ದರು. ಇದು ಮನೀಷಾ ಪಾಲ್ಗೊಳ್ಳುತ್ತಿರುವ ಮೊದಲ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಆಗಿದ್ದು, ದಿನಾ ವಿರುದ್ಧ ಸಾಧಿಸಿದ 2ನೇ ಗೆಲುವಾಗಿದೆ. ಇದಕ್ಕೂ ಮುನ್ನ ಪೋಲೆಂಡ್‌ನಲ್ಲಿ ನಡೆದ ಸಿಲೆಸಿಯನ್ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದಿನಾ ವಿರುದ್ಧ ಮನೀಷಾ ಗೆದ್ದಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಮನೀಷಾ 2016ರ ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಬಲ್ಗೇರಿಯದ ಸ್ಟೋಯ್ಕ ಪೆಟ್ರೋವಾ ವಿರುದ್ಧ ಆಡಲಿದ್ದಾರೆ.
69 ಕೆಜಿ ವಿಭಾಗದ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೆನ್ 2014ರ ವಿಶ್ವ ಚಾಂಪಿಯನ್ ಚಿನ್ನದ ಪದಕ ವಿಜೇತ ಪನಾಮದ ಅತ್ಯೆನಾ ಬೈಲೊನ್ ವಿರುದ್ಧ 5-0 ಅಂಕಗಳ ಅಂತರದಿಂದ ಗೆದ್ದರೆ, 81 ಕೆಜಿ ವಿಭಾಗದ ಪಂದ್ಯದಲ್ಲಿ ಭಾಗ್ಯಭತಿ ಕಚಾರಿ 4-1 ಅಂಕಗಳಿಂದ ಜರ್ಮನಿಯ ಎರಿನಾ ನಿಕೊಲೆಟ್ಟಾ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟರು. ಲವ್ಲಿನಾ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಕಾಟ್ ಕೇ ಫ್ರಾನ್ಸೆಸ್ ವಿರುದ್ಧ ಆಡಲಿದ್ದಾರೆ.
ಹೊರಬಿದ್ದ ಸರಿತಾ: ಮಣಿಪುರದ ತಾರಾ ಆಟಗಾರ್ತಿ, 3 ಬಾರಿಯ ವಿಶ್ವ ಬಾಕ್ಸಿಂಗ್ ಪದಕ ವಿಜೇತೆ ಲೈಶ್ರಾಮ್ ಸರಿತಾದೇವಿ 60 ಕೆಜಿ ಲೈಟ್‌ವೇಟ್ ವಿಭಾಗದಲ್ಲಿ 2-3 ಅಂಕಗಳ ರೋಚಕ ಹೋರಾಟದಲ್ಲಿ ಐರ್ಲೆಂಡ್‌ನ ಕೆಲ್ಲಿ ಅನ್ನೆ ವಿರುದ್ಧ ಸೋಲು ಅನುಭವಿಸಿದರು. ಸರಿತಾ 2006ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, 2005 ಹಾಗೂ 2008ರ ವಿಶ್ವ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು.