Advertisement

ವರ್ಲ್ಡ್ ಬಾಕ್ಸಿಂಗ್‌: ಅಮಿತ್‌, ಮನೀಷ್‌ಗೆ ಪದಕ ಖಾತ್ರಿ

11:45 PM Sep 18, 2019 | Sriram |

ಎಕಟೆರಿನ್‌ಬರ್ಗ್‌ (ರಶ್ಯ): ಏಶ್ಯನ್‌ ಗೇಮ್ಸ್‌ನಲ್ಲಿ ಬಂಗಾರ ಪದಕ ಜಯಿಸಿದ್ದ ಭಾರತದ ಅಮಿತ್‌ ಪಂಘಲ್‌ ಮತ್ತು ಇದೇ ಮೊದಲ ಸಲ ಕಣಕ್ಕಿಳಿದ ಮನೀಷ್‌ ಕೌಶಿಕ್‌ “ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಪದಕವೊಂದನ್ನು ಖಚಿತಪಡಿಸಿದ್ದಾರೆ.

Advertisement

ಆದರೆ ಸಂಜೀತ್‌ ಕುಮಾರ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡು ಪದಕ ಸ್ಪರ್ಧೆಯಿಂದ ಹೊರಬಿದ್ದರು.ಅಮಿತ್‌ ಪಂಘಲ್‌ 52 ಕೆಜಿ ವಿಭಾಗದಲ್ಲಿ ಮತ್ತು ಮನೀಷ್‌ 63 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕವನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ. ಆಗ ಇದು ಇವರಿಬ್ಬರ ಪಾಲಾಗಲಿರುವ ಮೊದಲ ವಿಶ್ವಕಪ್‌ ಪದಕವಾಗಲಿದೆ.

ಅಮಿತ್‌ಗೆ 4-1 ಗೆಲುವು
ಬುಧವಾರದ ಕ್ವಾರ್ಟರ್‌ ಫೈನಲ್‌ ಹಣಾ ಹಣಿಯಲ್ಲಿ ಹಾಲಿ ಏಶ್ಯನ್‌ ಚಾಂಪಿಯನ್‌ ಕೂಡ ಆಗಿರುವ, ದ್ವಿತೀಯ ಶ್ರೇಯಾಂಕದ ಅಮಿತ್‌ ಪಂಘಲ್‌ ಫಿಲಿಪ್ಪೀನ್ಸ್‌ನ ಕಾರ್ಲೊ ಪಾಲಮ್‌ ಅವರನ್ನು 4-1 ಅಂತರದಿಂದ ಹಿಮ್ಮೆಟ್ಟಿಸಿದರು. ಕಳೆದ ವರ್ಷದ ಏಶ್ಯನ್‌ ಗೇಮ್ಸ್‌ ಸೆಮಿಫೈನಲ್‌ನಲ್ಲೂ ಪಾಲಮ್‌ ಅವರನ್ನು ಪಂಘಲ್‌ ಪರಾಭವಗೊಳಿಸಿದ್ದರು.

ಅಮಿತ್‌ ಪಂಘಲ್‌ ಅವರ ಸೆಮಿಫೈನಲ್‌ ಎದುರಾಳಿ ಕಜಾಕ್‌ಸ್ಥಾನದ ಸಾಕೆನ್‌ ಬಿಬೊಸ್ಸಿನೋವ್‌. ಅವರು ಅರ್ಮೇನಿಯಾದ ಆರ್ಥರ್‌ ಹೋವನ್ನಿಸ್ಯಾನ್‌ ವಿರುದ್ಧ ಮೇಲುಗೈ ಸಾಧಿಸಿದರು. ಪರಾಜಿತ ಹೋವನ್ನಿಸ್ಯಾನ್‌ ಯುರೋಪಿಯನ್‌ ಬಾಕ್ಸಿಂಗ್‌ ಕೂಟದ ಸ್ವರ್ಣ ಪದಕ ವಿಜೇತರಾಗಿದ್ದು, 6ನೇ ಶ್ರೇಯಾಂಕ ಹೊಂದಿದ್ದಾರೆ.

ಕಳೆದ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್‌ ಪಂಘಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಹಸನ್‌ಬಾಯ್‌ ದುಸ್ಮತೋವ್‌ ಕೈಯಲ್ಲಿ ಸೋಲನುಭವಿಸಿದ್ದರು. ಅಂದು ಅಮಿತ್‌ 49 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದರು.

Advertisement

ಮನೀಷ್‌ಗೆ ಭರ್ಜರಿ ಜಯ
63 ಕೆಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮನೀಷ್‌ ಬ್ರಝಿಲ್‌ನ ವಾಂಡರ್ಸನ್‌ ಡಿ ಒಲಿವೆರ ಅವರನ್ನು 5-0 ಅಂತರದಿಂದ ಉರುಳಿಸಿದರು. 91 ಕೆಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸಂಜೀತ್‌ ಕುಮಾರ್‌ ಅವರನ್ನು ಈಕ್ವಡರ್‌ನ ಜೂಲಿಯೊ ಸೆಸ ಕ್ಯಾಸ್ಟಿಲ್ಲೊ ಟೊರೆಸ್‌ 4-1ರಿಂದ ಪರಾಭವಗೊಳಿಸಿದರು.

ಮನೀಷ್‌ ಕೌಶಿಕ್‌ ಅವರಿನ್ನು ಕ್ಯೂಬಾದ ಅಗ್ರ ಶ್ರೇಯಾಂಕಿತ ಆ್ಯಂಡಿ ಗೋಮೆಜ್‌ ಕ್ರುಝ್ ವಿರುದ್ಧ ಸೆಣಸಲಿದ್ದಾರೆ. 2017ರ ಕೂಟದಲ್ಲಿ ಕ್ರುಝ್ 64 ಕೆಜಿ ವಿಭಾಗದಲ್ಲಿ ಚಿನ್ನ, ಪಾನ್‌ ಅಮೆರಿಕನ್‌ ಗೇಮ್ಸ್‌ನಲ್ಲಿ ಅವಳಿ ಚಿನ್ನ ಗೆದ್ದ ಸಾಧನೆಗೈದಿದ್ದಾರೆ.

ಈ ವರೆಗೆ ನಾಲ್ಕೇ ಕಂಚು
ಭಾರತ ಈ ವರೆಗೆ ವಿಶ್ವಕಪ್‌ ಬಾಕ್ಸಿಂಗ್‌ ಆವೃತ್ತಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದದ್ದಿಲ್ಲ. ಈವರಗೆ 4 ಕೂಟಗಳಲ್ಲಿ 4 ಪದಕ ಜಯಿಸಿದ್ದು, ಎಲ್ಲವೂ ಕಂಚಿನ ಪದಕಗಳಾಗಿವೆ. 2009ರಲ್ಲಿ ವಿಜೇಂದರ್‌ ಸಿಂಗ್‌, 2011ರಲ್ಲಿ ವಿಕಾಸ್‌ ಕೃಷ್ಣನ್‌, 2015ರಲ್ಲಿ ಶಿವ ಥಾಪ ಮತ್ತು 2017ರಲ್ಲಿ ಗೌರವ್‌ ಬಿಧುರಿ ಈ ಸಾಧನೆ ಮಾಡಿದ್ದರು. ಈ ಬಾರಿ ಭಾರತದಿಂದ ನೂತನ ದಾಖಲೆ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next