ಬೀದರ: ಜೈವಿಕ ಇಂಧನ ಪರಿಸರ ಸ್ನೇಹಿಯಾಗಿದೆ. ನವೀಕರಿಸಬಹುದಾದ ಇಂಧನ ಮತ್ತು ಬಳಕೆಯಲ್ಲಿರುವ ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿದೆ. ರೈತರು ಜೈವಿಕ ಇಂಧನಕ್ಕೆ ಅನುಕೂಲವಾಗುವ ಕೃಷಿಯತ್ತ ಒಲವು ತೋರಿಸಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾ ಪಂಡಿರತಾವ್ ಚಿದ್ರಿ ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಪಂ, ಸಾಮಾಜಿಕ ಅರಣ್ಯ ವಿಭಾಗ ಮತ್ತು ಬೀದರ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಬುಧವಾರ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೈವಿಕ ಇಂಧನ ನೀಡುವ ಪ್ರಭೇದಗಳಾದ ಬೇವು, ಹೊಂಗೆ, ಹಿಪ್ಪೆ, ಸೀಮಾರೂಬಾ, ಕಾಡು ಔಡಲ ಸಸಿಗಳನ್ನು ರೈತರು ತಮ್ಮ ಜಮೀನುಗಳ ಬದುಗಳ ಮೇಲೆ, ಮಿಶ್ರಬೆಳೆಯಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ನೆಟ್ಟು ಬೆಳೆಸಿ ಬೀಜಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಪಡೆಯಬಹುದು. ಈ ಪ್ರಭೇದಗಳ ಬೀಜದಿಂದ ಜೈವಿಕ ಇಂಧನ ತಯಾರಿಸಲಾಗುತ್ತ್ತದೆ. ಹೆಚ್ಚು ಜೈವಿಕ ಇಂಧನ ಬಳಸುವುದರಿಂದ ದೇಶದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗುತ್ತದೆ. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಪಂ ಮಟ್ಟದಲ್ಲಿಯೂ ಏರ್ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಾಮನಗಟ್ಟಿ ಮಾತನಾಡಿ, ಜೈವಿಕ ಇಂಧನ ದಿನಾಚರಣೆ ಮಹತ್ವ, ಉದ್ದೇಶಗಳ ಕುರಿತು ವಿವರಣೆ ನೀಡಿದರು. ಅರಣ್ಯ ಇಲಾಖೆ ಬೆಳೆಸಿರುವ ಹೊಂಗೆ, ಹಿಪ್ಪೆ, ಸೀಮಾರೂಬಾ ಝಟ್ರೂಫಾ ನೆಡುತೋಪುಗಳು ಮತ್ತು ಸಸ್ಯಕ್ಷೇತ್ರ ಚಟುವಟಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಬರಡುಭೂಮಿಯಲ್ಲಿ ಜೈವಿಕ ಇಂಧನ ಗಿಡಗಳನ್ನು ಬೆಳೆಸುವ ಬರಡು ಬಂಗಾರ ಮತ್ತು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಜೈವಿಕ ಇಂಧನ ಗಿಡಗಳನ್ನು ಬೆಳೆಸುವ ಹಸಿರು ಹೂನ್ನು ಕಾರ್ಯಕ್ರಮಗಳನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಜಾರಿಗೂಳಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದರು.
ಬೀದರ ಕೃಷಿ-ವಿಜ್ಞಾನ ಕೇಂದ್ರದ ವೈಜ್ಞಾನಿಕ ಸಹಾಯಕ ರೋಹಿತ ಬಿರಾದಾರ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಎಸ್. ಸೂರ್ಯಕಾಂತ, ಜಿಪಂ ಯೋಜನಾ ನಿರ್ದೇಶಕ ವಿಜಯಕುಮಾರ ಮಡ್ಡೆ, ಸಹಾಯಕ ಯೋಜನಾಧಿಕಾರಿ ಬಸವರಾಜ ಬಬಚೇಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ರವಿ ದೇಶಮುಖ, ಮಕರಂದ ಕುಲಕರ್ಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ. ರಾಜೇಂದ್ರ, ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.