ಮುಂಬಯಿ: ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ನ.8ರಂದು ಕೈಗೊಂಡಿದ್ದ ನೋಟು ನಿಷೇಧದ ಕ್ರಮವನ್ನು ವಿಶ್ವ ಬ್ಯಾಂಕ್ ಬಹುವಾಗಿ ಪ್ರಶಂಸಿಸಿದೆ.
ನೋಟು ನಿಷೇಧದ ದಿಟ್ಟ ನಿರ್ಧಾರವು ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾನ್ಮಕ ಪರಿಣಾಮ ಬೀರಲಿದೆ; ಹಾಗೆಯೇ ಭಾರತದ ಈ ಕ್ರಮವನ್ನು ಇತರ ದೇಶಗಳು ಕೂಡ ಅಧ್ಯಯನ ಮಾಡಲಿವೆ ಎಂದು ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಬಂದಿರುವ ವಿಶ್ವ ಬ್ಯಾಂಕ್ ಸಿಇಓ ಕ್ರಿಸ್ಟಿಲಿನಾ ಜಿಯೋರ್‌ಜಿವಾ ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಸಿಇಓ ಕ್ರಿಸ್ಟಾಲಿನಾ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಸಂದರ್ಭದಲ್ಲಿ ಅವರು ಇಲ್ಲಿನ ಲೋಕಲ್ ಟ್ರೈನ್‌ನಲ್ಲಿ ಸಂಚರಿಸಿದ್ದಾರೆ; ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಪಡೆದಿರುವ ನಗರ ಹೊರವಲಯದ ರೈಲ್ವೇ ಕಾರ್ಯಾಚರಣೆಯನ್ನು ಅವಲೋಕಿಸಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
“ಭಾರತವು ವಿಶ್ವ ಬ್ಯಾಂಕಿನ ಅತೀ ದೊಡ್ಡ ಮಧ್ಯಮ ವರ್ಗವನ್ನು ಹೊಂದಿರುವ ಗ್ರಾಹಕ ದೇಶವಾಗಿದೆ.ಅದರ ಆರ್ಥಿಕಾಭಿವೃದ್ಧಿಯು ಜಗತ್ತಿನ ಮೇಲೆ ಧನಾತ್ಮಕ ಪರಿಣಾಮ ಬೀರುವುದರಿಂದ ನಮಗೆ ಭಾರತವು ಮುಖ್ಯವಾಗುತ್ತದೆ. ಅಭಿವೃದ್ಧಿಯನ್ನು ಸಾಧಿಸುವ ದಿಶೆಯಲ್ಲಿ ಭಾರತ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ನಮಗೆ ಭಾರತವು ಒಂದು ಪ್ರಯೋಗಶಾಲೆಯಾಗಿದೆ; ಭಾರತದೊಂದಿಗೆ ಕೂಡಿಕೊಂಡು ಹೊಸ ಹೊಸ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ವಿಶ್ವ ಬ್ಯಾಂಕ್ ಸದಾ ಎದುರು ನೋಡುತ್ತಿರುತ್ತದೆ’ ಎಂದು ಕ್ರಿಸ್ಟಾಲಿನಾ ಹೇಳಿದರು.