Advertisement

ಇಂದು ವಿಶ್ವ ಬಿದಿರು ದಿನ: ಸಾಲಗಾರನನ್ನು ಕೋಟ್ಯಧಿಪತಿ ಮಾಡಿದ ಬಿದಿರು

11:56 PM Sep 17, 2022 | Team Udayavani |

ಬೆಳಗ್ಗೆ ಎದ್ದ ತತ್‌ಕ್ಷಣ ಹಲ್ಲುಜ್ಜಲು ಬಳಸುವ ಟೂತ್‌ ಬ್ರಶ್‌ನಿಂದ ಹಿಡಿದು, ಊಟ ತೆಗೆದುಕೊಂಡು ಹೋಗುವ ಬ್ಯಾಗ್‌ವರೆಗೆ ಎಲ್ಲದಕ್ಕೂ ಬಿದಿರು ಬಳಕೆಗೆ ಬಂದಿದೆ. ಸಂತ ಶಿಶುನಾಳಾಧೀಶರೇ “ಬಿದಿರು ನಾನಾರಿಗಲ್ಲದವಳು’ ಎನ್ನುತ್ತ ಬಿದಿರಿನ ವರ್ಣನೆ ಮಾಡಿಬಿಟ್ಟಿದ್ದಾರೆ. ಇದೇ ಬಿದಿರು, ಜೀವನದಲ್ಲಿ ಕೆಳಕ್ಕೆ ಬಿದ್ದಿದ್ದವನನ್ನು ಮೇಲಕ್ಕೆತ್ತಿದ ಕಥೆ “ವಿಶ್ವ ಬಿದಿರಿನ ದಿನ’ವಾದ ಇಂದು ನಿಮಗಾಗಿ.

Advertisement

ಅವರು ರಾಜಶೇಖರ್‌ ಪಾಟೀಲ್‌. ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ನಿಪಾಣಿ ಮೂಲದವರು. ನೀರಿಗೆ ಬರವಿದ್ದ ಕಾರಣಕ್ಕೇ ಅವರ ಊರಿಗೆ “ನಿಪಾಣಿ’ ಎಂಬ ಹೆಸರು ಬಂದಿರುವುದಂತೆ. 16 ಎಕ್ರೆ ಜಮೀನಿತ್ತಾದರೂ ರಾಜಶೇಖರ್‌ ಅವರ ತಂದೆ ಬೆಳೆಯಲ್ಲಿ ಯಶಸ್ಸು ಕಾಣಲಾಗದೆ ಸಾಲದ ಸುಳಿಗೆ ಸಿಲುಕಿದ್ದರು. ಪಾರ್ಶ್ವವಾಯುವಿನಿಂದ ಬಳಲಿದ್ದ ಅವರು ಸಾಯುವಾಗ ಇದ್ದದ್ದು ಬರೋಬ್ಬರಿ 10 ಲಕ್ಷ ರೂ. ಸಾಲದ ಹೊರೆ. ಆ ಹೊರೆಯನ್ನು ಅವರು ಪುತ್ರ ರಾಜಶೇಖರನಿಗೆ ಹೊರಿಸಿ ಹೋಗಿದ್ದರು.

1992ರಲ್ಲಿ 23 ವರ್ಷದವರಾಗಿದ್ದ ರಾಜಶೇಖರ್‌ ಪಾಟೀಲ್‌ ಕೃಷಿ ಪದವಿ ಮುಗಿಸಿದ್ದರು. ಸರಕಾರಿ ಕೆಲಸದ ಆಸೆಯಿಂದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಾರಂಭಿಸಿದರು. ಆದರೆ ಯಾವುದೂ ಕೈ ಹಿಡಿಯಲಿಲ್ಲ. ಆ ಸಮಯದಲ್ಲಿ ಅವರ ಗಮನಕ್ಕೆ ಬಂದಿದ್ದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ. ಅವರು ಕೆಲವು ಗ್ರಾಮಗಳಲ್ಲಿ ಜಲ ಸಂಪನ್ಮೂಲ ಹೆಚ್ಚಿಸುವುದಕ್ಕೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರ ಬಗ್ಗೆ ರಾಜಶೇಖರ್‌ ಅರಿತಿದ್ದರು. ಹಾಗಾಗಿ ತಿಂಗಳಿಗೆ 2,000 ರೂ. ಸಂಬಳದಂತೆ ಅಣ್ಣಾ ಅವರ ಬಳಿ ಕೆಲಸಕ್ಕೆ ಸೇರಿಕೊಂಡರು. ಬೇರೆ ಬೇರೆ ಊರುಗಳಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿಗಾಗಿ ದುಡಿಯುವುದೇ ಅವರ ಕೆಲಸವಾಗಿತ್ತು.

ಕೈ ಹಿಡಿದ ಕೃಷಿ
ರಾಜಶೇಖರ್‌ 27 ವರ್ಷಕ್ಕೆ ತಲುಪುವವರೆಗೂ ಅಣ್ಣಾ ಅವರ ಬಳಿಯೇ ಕೆಲಸ ಮಾಡಿಕೊಂಡಿದ್ದರು. ಅಷ್ಟರಲ್ಲಾ­ಗಲೇ ಮದುವೆಯ ವಯಸ್ಸು ಸಮೀಪಿಸಿದ್ದರಿಂದಾಗಿ ಕುಟುಂಬದಿಂದ ಒತ್ತಡ ಬರಲಾರಂಭಿಸಿತು. ಮನೆಗೆ ಬಂದು ಮದುವೆಯಾಗಿ, ಕೃಷಿ ಮಾಡಿಕೊಂಡಿರು ಎಂದು ತಾಯಿ ಒತ್ತಾಯಿಸಲಾರಂಭಿಸಿದರು. ಅದಕ್ಕೆ ಮಣಿದ ಅವರು ಮನೆಗೆ ಬಂದು 16 ಎಕ್ರೆ ಭೂಮಿಯಲ್ಲಿ ಕೃಷಿ ಆರಂಭಿಸಿದರು.

ತರಕಾರಿ ಬೆಳೆಯಲ್ಲಿ ಸಮಸ್ಯೆ ಜಾಸ್ತಿ, ನಿರ್ವಹಣೆಯೂ ಹೆಚ್ಚು ಎಂದು ಅರಿತಿದ್ದ ರಾಜಶೇಖರ್‌ ಹಣ್ಣಿನ ಬೆಳೆಗೆ ಮುಂದಾದರು. ತಕ್ಕ ಮಟ್ಟಿಗೆ ಲಾಭ ಬಂದು, ಸಾಲವೆಲ್ಲ ತೀರಿ, ಜೀವನ ಸುಸೂತ್ರವಾಗಿ ನಡೆಯಲಾರಂಭಿಸಿತು.
ಅದು 2002ರ ಸಮಯ. ರಾಜಶೇಖರ್‌ಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು, ಬಿದಿರಿನ ಸಸಿಯಿಂದ ಲಾಭ ಸಿಗದೆ, ತಮ್ಮ 2.5 ಎಕ್ರೆ ಜಮೀನಿನಲ್ಲಿದ್ದ ಬಿದಿರಿನ ಸಸಿಗಳನ್ನು ಬೇರೆಡೆ ಬಿಸಾಕಲು ಮುಂದಾಗಿದ್ದರು. ಆದರೆ ಯಾವುದೇ ಸಸಿಯನ್ನೂ ಹೀಗೆ ಬಿಸಾಕಬಾರದು ಎಂದು ವಾದಿಸಿದ ರಾಜಶೇಖರ್‌ ಅದನ್ನು ತಾವೇ ಖರೀದಿಸಲು ಮುಂದಾದರು. ಆ ವ್ಯಕ್ತಿ ಅದೆಷ್ಟರ ಮಟ್ಟಿಗೆ ಬಿದಿರಿನ ಸಸಿಯಿಂದ ಬೇಸರ ಗೊಂಡಿದ್ದರೆಂದರೆ, ಒಂದು ರೂಪಾಯಿಯನ್ನೂ ಪಡೆಯದೆ ಎಲ್ಲ ಸಸಿಗಳನ್ನು ಉಚಿತವಾಗಿ ರಾಜಶೇಖರ್‌ಗೆ ಕೊಟ್ಟು ಕಳುಹಿಸಿದ್ದರು.

Advertisement

ರಾಜಶೇಖರ್‌ ಬಿದಿರಿನ ಸಸಿಗಳನ್ನೇನೋ ಖರೀದಿಸಿದ್ದರು. ಆದರೆ ಅದನ್ನು ಏನು ಮಾಡಬೇಕೆನ್ನುವ ಯೋಜನೆ ಅವರ ಬಳಿ ಇರಲಿಲ್ಲ. ಆದದ್ದು ಆಗಲಿ, ನನ್ನ ಹಣ್ಣಿನ ಗಿಡಗಳಿಗೆ ನೈಸರ್ಗಿಕ ಬೇಲಿಯಂತಾದರೂ ಇರಲಿ ಎಂದು ತಮ್ಮ ಜಾಗಕ್ಕೆ ಬಿದಿರಿನ ಸಸಿಯ ಬೇಲಿ ಮಾಡಿದರು. 2005ರ ವೇಳೆಗೆ ಅವರ ಬಿದಿರಿನ ಮರಗಳಿಂದ ಇನ್ನೊಂದಿಷ್ಟು ಸಸಿಗಳು ಹುಟ್ಟಿ, ಅವು­ಗಳನ್ನು ಮಾರಾಟ ಮಾಡುವುದರ ಬಗ್ಗೆ ಜನರು ಕೇಳಲಾರಂಭಿಸಿದರು. ಬಿದಿರು ಕೂಡ ಉತ್ತಮ ಆದಾಯ ತಂದುಕೊಡಬ­ಲ್ಲ ಬೆಳೆ ಎನ್ನುವುದು ಆಗ ರಾಜಶೇಖರ್‌ ಗಮನಕ್ಕೆ ಬಂದಿತು. ಅದು ಅವರ ಕೃಷಿ ಜೀವನದ ದಿಕ್ಕನ್ನೇ ಬದಲಿಸಿತು.

ಬಿದಿರು ಸಸಿ ಮಾರಾಟ
ಬಿದಿರು ಸಸಿ ಮಾರಾಟಕ್ಕೆ ಮುಂದಾದ ರಾಜಶೇಖರ್‌ ದೇಶದ ಮೂಲೆ ಮೂಲೆಗೆ ತೆರಳಿ, ವಿವಿಧ ತಳಿಯ ಬಿದಿರನ್ನು ತರಲಾರಂಭಿಸಿದರು. ದೇಶಾದ್ಯಂತ ಸಿಕ್ಕ ಬರೋಬ್ಬರಿ 50 ತಳಿಯ ಬಿದಿರನ್ನು ತಮ್ಮ ಜಾಗಕ್ಕೆ ತಂದು, ಸಸಿ ಮಾಡಿ ಮಾರಾಟ ಮಾಡ­ಲಾರಂಭಿಸಿದರು. ಅಂದು ಆರಂಭ­ವಾದ ಸಸಿ ಮಾರಾಟ ಎಂದೂ ತಗ್ಗದೆ ಏರುಗತಿಯಲ್ಲೇ ಸಾಗಲಾರಂಭಿಸಿತು. ಸದ್ಯ 3 ಲಕ್ಷ ಬಿದಿರಿನ ಕಾಂಡ ಹಾಗೂ 1 ಕೋಟಿಗೂ ಅಧಿಕ ಬಿದಿರಿನ ಸಸಿ ರಾಜಶೇಖರ್‌ ಅವರ ಬಳಿ ಇದೆ.

ಇದರ ಮಧ್ಯದಲ್ಲಿ ಸರಕಾರ ಕೂಡ ಬಿದಿರಿನ ಬೆಳೆಗೆ ಪ್ರೋತ್ಸಾಹ ನೀಡಲಾರಂಭಿಸಿತು. 2017ರಲ್ಲಿ ಬಿದಿರನ್ನು ಮರ ಎಂದು ಗುರುತಿಸದೆ, ಹುಲ್ಲು ಎಂದು ಗುರುತಿಸ­ಲಾಯಿತು. ಆದ್ದರಿಂದಾಗಿ ಬಿದಿರನ್ನು ಸರಕಾರ ಅಥವಾ ಅರಣ್ಯ ಇಲಾಖೆಯ ಅನುಮತಿ ಪಡೆ ಯದೆಯೇ ಬೆಳೆಯುವುದಕ್ಕೆ, ಕತ್ತರಿಸಿ ಮಾರಾಟ ಮಾಡು ವುದಕ್ಕೂ ಅನುಮತಿ ಸಿಕ್ಕಿತು. ಇವೆಲ್ಲವೂ ರಾಜಶೇಖರ್‌ ಅವರಿಗೆ ಧನಾತ್ಮಕ ಪರಿಣಾಮಗಳನ್ನೇ ಬೀರುತ್ತ ಹೋಯಿತು.

ಕೇವಲ ಬಿದಿರಿನ ಸಸಿ ಮಾತ್ರವಲ್ಲದೆ, ಮಾಮೂಲಿ ಬಿದಿರಿನ ಮಾರಾಟವೂ ಉತ್ತಮ ರೀತಿಯಲ್ಲಿ ಸಾಗಲಾ­ರಂಭಿಸಿತು. ದೇಶ -ವಿದೇಶಗಳ ವ್ಯಾಪಾರಿಗಳು ಬಿದಿರಿನ ಸಸಿ ಹಾಗೂ ಬಿದಿರಿಗಾಗಿ ರಾಜಶೇಖರ್‌ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದರು. ಟೂತ್‌ಬ್ರಶ್‌ನಿಂದ ಹಿಡಿದು, ಬ್ಯಾಗ್‌ವರೆಗೆ ಎಲ್ಲ ರೀತಿಯ ಸಾಮಗ್ರಿಗಳಿಗೆ ರಾಜಶೇಖರ್‌ ಬೆಳೆದ ಬಿದಿರು ಬಳಕೆ ಯಾಗಲಾರಂಭಿಸಿತು.

ಕೋಟ್ಯಂತರ ರೂ. ಆದಾಯ
ಈಗ ರಾಜಶೇಖರ್‌ ಅವರ ಬಳಿ 54 ಎಕರೆ ಜಮೀನಿದೆ. ಎಲ್ಲವೂ ಬಿದಿರಿನಿಂದಲೇ ತುಂಬಿದೆ. ಪ್ರತೀ ವರ್ಷ 20 ಲಕ್ಷಕ್ಕೂ ಅಧಿಕ ಬಿದಿರಿನ ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. 20 ರೂ., 50 ರೂ., 100 ರೂ., ಹೀಗೆ ತಳಿಗಳನ್ನು ಆಧರಿಸಿ ಬೇರೆ ಬೇರೆ ಬೆಲೆಯಲ್ಲಿ ರೈತರಿಗೆ ಬಿದಿರಿನ ಸಸಿ ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ ಕನಿಷ್ಠವೆಂದರೂ 5ರಿಂದ 6 ಕೋಟಿ ರೂ. ಆದಾಯ ಬರುತ್ತಿದೆ. ಬಿದಿರಿಗೆ ನಿರ್ವಹಣೆ ವೆಚ್ಚ ಅತ್ಯಂತ ಕಡಿಮೆ. ನೀರೂ ಕೂಡ ಹೆಚ್ಚಾಗಿ ಬೇಕಾಗುವುದಿಲ್ಲ. ಹಾಗಿದ್ದರೂ ರಾಜಶೇಖರ್‌ ತಮ್ಮ ಜಮೀನಿನಲ್ಲಿ 100 ಮಂದಿಗೆ ಕೆಲಸ ಕೊಟ್ಟಿದ್ದಾರೆ. ಅವರ ಸಂಬಳಕ್ಕೆಂದೇ ವರ್ಷಕ್ಕೆ 40 ಲಕ್ಷ ರೂ. ವೆಚ್ಚ ಮಾಡುತ್ತಾರೆ. ತಿಂಗಳಿಗೆ 2 ಸಾವಿರ ರೂ. ದುಡಿಮೆ ಮಾಡುತ್ತಿದ್ದ ರಾಜಶೇಖರ್‌ ಇದೀಗ ಕೋಟಿಗಳ ಲೆಕ್ಕಾಚಾರ ಮಾಡುತ್ತಿದ್ದಾರೆ.

ಪ್ರಶಸ್ತಿ, ಗೌರವ
ರಾಜಶೇಖರ್‌ ಅವರ ಬಿದಿರು ಬೆಳೆ ವಿಚಾರ ಸರಕಾರದ ಮಟ್ಟದಲ್ಲೂ ದೊಡ್ಡ ಪ್ರಶಂಸೆಗೆ ಕಾರಣವಾಗಿದೆ. ರಾಜಶೇಖರ್‌ ಅವರಿಗೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಅನೇಕ ಗೌರವ, ಪ್ರಶಸ್ತಿಗಳೂ ಹರಿದುಬಂದಿದೆ. ರಾಷ್ಟ್ರೀಯ ಬಿದಿರು ಮಿಷನ್‌ಗೆ ಅವರನ್ನು ಸಲಹೆಗಾರರನ್ನಾಗಿಯೂ ನೇಮಿಸಲಾಗಿತ್ತು. ಇಂದಿಗೂ ಬಿದಿರು ಬೆಳೆಯತ್ತ ಆಸಕ್ತಿ ತೋರುವ ನೂರಾರು ಕೃಷಿಕರಿಗೆ ರಾಜಶೇಖರ್‌ ಸಲಹೆಗಳನ್ನು ನೀಡುತ್ತಿದ್ದಾರೆ.

ಬಿದಿರು ಕೃಷಿಯಲ್ಲಿ ಸಾಧನೆಯ ಮೆಟ್ಟಿಲನ್ನು ಹತ್ತಿರುವ ರಾಜಶೇಖರ್‌ ತಾವು ಅಣ್ಣಾ ಹಜಾರೆಯೊಂದಿಗೆ ಕಳೆದ ದಿನಗಳನ್ನು ಮರೆತಿಲ್ಲ. ಯುವಕರಾಗಿದ್ದಾಗ ಹಲವು ಹಳ್ಳಿಗಳಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿಗಾಗಿ ದುಡಿದಿದ್ದ ಅವರು, ಇದೀಗ ತಮ್ಮ ಗ್ರಾಮದಲ್ಲೂ ಜಲ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿ ದ್ದಾರೆ. ಗ್ರಾಮದ ಜನರು ಬೇರೆಡೆಯಿಂದ ಬರುವ ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತ ವಾಗದೇ ಇರುವಂತಹ ಜೀವನ ವನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ ತಮ್ಮ ಗ್ರಾಮ ಮಾತ್ರವಲ್ಲ, ಸುತ್ತ ಮುತ್ತಲಿನ ಒಟ್ಟು 13 ಗ್ರಾಮಗಳಿಗೆ ಅವರ ಸೇವೆಯ ಕರ ಚಾಚಿದೆ. ನೂರಾರು ಮನೆಗಳ ಜನರು ಪ್ರತಿನಿತ್ಯ ಕಡಿವಾಣ ಇಲ್ಲದೆ ನೀರನ್ನು ಬಳಕೆ ಮಾಡುವಾಗ ರಾಜಶೇಖರ್‌ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

“ಪ್ರತೀ ವರ್ಷ ಭಾರತ ಕನಿಷ್ಠ 20ರಿಂದ 30 ಸಾವಿರ ಕೋಟಿ ರೂ. ಮೌಲ್ಯದ ಬಿದಿರನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆ ಹೊರೆಯನ್ನು ತಪ್ಪಿಸಬೇಕೆಂದರೆ ನಮ್ಮ ರೈತರು ಬಿದಿರಿನ ಕೃಷಿಯತ್ತ ಮುಖ ಮಾಡಬೇಕು. ಅದರಿಂದ ದೇಶದ ಹೊರೆ ತಪ್ಪುವುದಷ್ಟೇ ಅಲ್ಲದೆ, ರೈತರಿಗೂ ಉತ್ತಮ ಆದಾಯ ಸಿಗುತ್ತದೆ. ಬೆಳೆ ಹಾನಿ ಮಾಡಿಕೊಂಡು, ಆದಾ­ಯವೂ ಇಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೂ ತಪ್ಪುತ್ತದೆ’ ಎನ್ನುತ್ತಾರೆ ರಾಜಶೇಖರ್‌ ಪಾಟೀಲ್‌.

– ಮಂದಾರ ಸಾಗರ

Advertisement

Udayavani is now on Telegram. Click here to join our channel and stay updated with the latest news.

Next