ಅಂಟಾಲ್ಯ (ಟರ್ಕಿ): ವರ್ಲ್ಡ್ ಕಪ್ ಸ್ಟೇಜ್-1 ಆರ್ಚರಿ ಪಂದ್ಯಾವಳಿಯಲ್ಲಿ ಭಾರತ ಚಿನ್ನದ ಖಾತೆ ತೆರೆ ದಿದೆ. ಜ್ಯೋತಿ ಸುರೇಖಾ ವೆನ್ನಮ್ ಅವಳಿ ಸ್ವರ್ಣಗಳಿಗೆ ಗುರಿಯಿರಿಸಿ ಸಂಭ್ರಮಿಸಿದ್ದಾರೆ.
ಶನಿವಾರ ನಡೆದ ಕಂಪೌಂಡ್ ಮಿಕ್ಸೆಡ್ ವಿಭಾಗದಲ್ಲಿ ಹಾಗೂ ಕಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಸ್ವರ್ಣ ಸಾಧನೆಗೈದರು.
ಮೊದಲು ಕಂಪೌಂಡ್ ಮಿಕ್ಸೆಡ್ ವಿಭಾಗದದಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಸ್ ದೇವತಾಲೆ ಸೇರಿಕೊಂಡು ಬಂಗಾರಕ್ಕೆ ಗುರಿ ಇರಿಸಿದರು. ಇವರಿಬ್ಬರು ಚೈನೀಸ್ ತೈಪೆಯ ಚೆನ್ ಯಿ ಸುವಾನ್-ಚೆನ್ ಚೀ ಲುನ್ ವಿರುದ್ಧ 159-154 ಅಂತರದ ಗೆಲುವು ಸಾಧಿಸಿದರು.
ಇದು ವಿಶ್ವಕಪ್ ಸ್ಪರ್ಧೆಯ ಕಂಪೌಂಡ್ ಮಿಕ್ಸೆಡ್ ವಿಭಾಗದಲ್ಲಿ ಭಾರತಕ್ಕೆ ಒಲಿದ 2ನೇ ಚಿನ್ನ. ಪ್ಯಾರಿಸ್‌ನಲ್ಲಿ ನಡೆದ ವರ್ಲ್ಸ್ ಕಪ್-3 ಪಂದ್ಯಾವಳಿಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ -ಅಭಿಷೇಕ್ ವರ್ಮ ಸೇರಿಕೊಂಡು ಸ್ವರ್ಣ ಸಾಧನೆ ಗೈದಿದ್ದರು. ಆದರೆ ಈ ಬಾರಿ ಅಭಿಷೇಕ್ ವರ್ಮ ಗೈರಲ್ಲಿ 20 ವರ್ಷದ ಓಜಸ್ ದೇವತಾಲೆ ಅವರಿಗೆ ಮೊದಲ ಅವಕಾಶ ಲಭಿಸಿತು. ಇದನ್ನು ಅವರು ಭರ್ಜರಿಯಾಗಿಯೇ ಬಾಚಿಕೊಂಡರು. ಭಾರತದ ಜೋಡಿಗೆ ಕೂಟದಲ್ಲಿ ದ್ವಿತೀಯ ಶ್ರೇಯಾಂಕ ಲಭಿಸಿತ್ತು.
ಅನಂತರ ಕಂಪೌಂಡ್ ವೈಯಕ್ತಿಕ ವಿಭಾಗದಲ್ಲೂ ಜ್ಯೋತಿ ಸುರೇಖಾ ವೆನ್ನಮ್ ಪರಾಕ್ರಮ ಮೆರೆದರು. 2021ರ ವಿಶ್ವ ಚಾಂಪಿಯನ್‌ಶಿಪ್ ರಜತ ಪದಕ ವಿಜೇತೆಯಾಗಿರುವ ವೆನ್ನಮ್, 149-146 ಅಂತರದಿಂದ ಕೊಲಂಬಿಯಾದ ಸಾರಾ ಲೋಪೆಜ್ ಅವರನ್ನು ಮಣಿಸಿದರು.