Advertisement

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

01:16 AM Dec 03, 2024 | Team Udayavani |

ಉಡುಪಿ: ಏಡ್ಸ್‌ ಮಾರಕ ಕಾಯಿಲೆಯಾಗಿದ್ದು, ಇದು ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಏಡ್ಸ್‌ ದಿನವನ್ನು ಆಚರಿಸಲಾಗುತ್ತಿದೆ. ಎಚ್‌ಐವಿ/ ಏಡ್ಸ್‌ ಬಗ್ಗೆ ಅರಿವು ಹೊಂದಿದಾಗ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಹೇಳಿದರು.

Advertisement

ಅಂಬಲಪಾಡಿ ಪ್ರಗತಿಸೌಧ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಡಳಿತ ಸಹಿತ ವಿವಿಧ ಇಲಾಖೆ ಮತ್ತು ಸಂಘಟನೆಗಳ ಆಶ್ರಯದಲ್ಲಿ ಜರಗಿದ ವಿಶ್ವ ಏಡ್ಸ್‌ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರಿಗೆ ನಡೆದ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್‌ಐವಿ ರೋಗಕ್ಕೆ ತುತ್ತಾದವರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕುವ ಹಕ್ಕಿದೆ. ಅಂಥವರನ್ನು ದೂರವಿಡದೆ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಜತೆಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯಬೇಕು ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್‌.ಯೋಗೇಶ್‌ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆರೋಗ್ಯವನ್ನು ಕಾಯ್ದುಕೊಳ್ಳುವ ಹಕ್ಕಿದೆ. ಎಚ್‌ಐವಿ ಜತೆಗೆ ತಮ್ಮ ಬದುಕು ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ನಿರ್ಲಕ್ಷಿಸದೆ ಉದ್ಯೋಗ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಹಕ್ಕುಗಳನ್ನು ಸಮಾನವಾಗಿ ನೀಡಿ, ಅವರ ಮನೋಸ್ಥೈರ್ಯ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.

ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಸಾಧಕರಿಗೆ ಸಮ್ಮಾನ
ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಡಿ ಗಣನೀಯ ಸೇವೆ ಸಲ್ಲಿಸಿದ ಅನುರಾಧಾ ವಿ.ಎಸ್‌., ಜಯ ಸಾಲ್ಯಾನ್‌, ನರಸಿಂಹ ಮೂರ್ತಿ ವೈ., ಶ್ರೀನಿವಾಸ ಶೆಟ್ಟಿಗಾರ್‌, ಚಂದ್ರಣ್ಣ, ಡಾ| ವ್ಯಾಸರಾಜ್‌ ತಂತ್ರಿ, ಡಾ| ವಿಮಲಾ ಚಂದ್ರಶೇಖರ್‌, ಶ್ರೀಲತಾ, ಡಾ| ನವನೀತ ಕೆ.ಪಿ. ಹಾಗೂ ಎಝಿಲ್‌ ಮೆಲ್ವಿನ್‌ ಕ್ಯಾಸ್ತಲಿನೊ ಅವರನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಐ.ಪಿ.ಗಡಾದ್‌, ಜಿಲ್ಲಾ ಸರ್ಜನ್‌ ಡಾ| ಎಚ್‌. ಅಶೋಕ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಎಸ್‌ಕೆಆರ್‌ಡಿಪಿ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್‌ ಶೆಟ್ಟಿ, ಆರೋಗ್ಯ ಇಲಾಖೆಯ ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಮೇಲ್ವಿಚಾರಕ ಮಹಾಬಲೇಶ್ವರ ಬಿ.ಎಂ. ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಬೋರ್ಡ್‌ ಹೈಸ್ಕೂಲಿನಿಂದ ಕೆ.ಎಂ. ಮಾರ್ಗವಾಗಿ ಅಂಬಲಪಾಡಿಯ ಪ್ರಗತಿ ಸೌಧದವರೆಗೆ ಏಡ್ಸ್‌ ಕುರಿತ ಜಾಗೃತಿ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next