ಹುಣಸೂರು: ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯತೆ ಹಾಗೂ ವಿಜ್ಞಾನ ಕೌತುಕವನ್ನು ಬೆಳೆಸಲು ವಿಜ್ಞಾನ ಮಕ್ಕಳ ಹಬ್ಬದ ಅನುಷ್ಠಾನ ಕುರಿತು ಆಯ್ದ ಶಿಕ್ಷಕರಿಗೆ ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು. ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಜ್ಞಾನ ಬಾಲಭವನದ ಸಹಯೋಗದಲ್ಲಿ ನಡೆಸಿದ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಶಿವರಾಂ ಮಾತನಾಡಿ, ಈ ಯೋಜನೆಯನ್ನು ದೇಶದಲ್ಲೇ ಕರ್ನಾಟಕವನ್ನು, ರಾಜ್ಯದಲ್ಲಿ ಮೈಸೂರು ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಪ್ರೇರಣೆ: ಈ ಕಾರ್ಯಾಗಾರದಲ್ಲಿ ಮಕ್ಕಳು ಸುಲಭವಾಗಿ ಪಠ್ಯಾಧಾರಿತ ವಿಜ್ಞಾನ ಉಪಕರಣ ತಯಾರಿಸುವ ಬಗ್ಗೆ, ಭಾಷಾ ಕೌಶಲ್ಯತೆ ಬೆಳೆಸುವ, ಬರವಣಿಗೆ ಅಭ್ಯಾಸ ರೂಢಿಸುವ, ಕೌಶಲ್ಯತೆ, ಭಾಷಾ ಫ್ರೌಡಿಮೆ ಸೇರಿದಂತೆ ಸೃಜನಾತ್ಮಕ ಬೆಳವಣಿಗೆ, ಎಲ್ಲಾ ಚಟುವಟಿಕೆಗಳಲ್ಲೂ ಸಂತೋಷದಿಂದ ಭಾಗವಹಿಸುವಂತೆ ಪ್ರೇರೇಪಿಸುವ ಕುರಿತು ಶಿಕ್ಷಕರನ್ನು ತರಬೇತುಗೊಳಿಸಿ, ಆ ನಂತರ ಶಾಲಾ ಹಂತದಿಂದ ಹಿಡಿದು ರಾಜ್ಯಮಟ್ಟದ ಸ್ಪರ್ಧೆವರೆಗೆ ಮಕ್ಕಳನ್ನು ಅಣಿಗೊಳಿಸಿ ದೇಶದ ಆಸ್ತಿಯನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದ್ದು, ಸಮಗ್ರ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
ವಿಜ್ಞಾನ ಮೇಳ ಆಯೋಜಿಸಿ: ಬಾಲವಿಜ್ಞಾನ ಭವನದ ನೋಡೆಲ್ ಅಧಿಕಾರಿ ವಜ್ರಮುನಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುವ ಪ್ರತಿಯೊಂದು ಉದಾಹರಣೆ ಸಹಿತ ಮಾಡೆಲ್‌ಗಳನ್ನು ಶಿಕ್ಷಕರು ಮನನ ಮಾಡಿಕೊಂಡು ನಿಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ವಿಜ್ಞಾನ ಮೇಳಗಳನ್ನು ಆಯೋಜಿಸುವ ಮೂಲಕ ಮಕ್ಕಳ ಬುದ್ಧಿಮತ್ತೆಯನ್ನು ಓರೆಗೆ ಹಚ್ಚುವ, ಅವರಲ್ಲಿನ ಜ್ಞಾನವನ್ನು ಉದ್ದಿಪನ ಗೊಳಿಸುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕ್ಲಸ್ಟರ್ ನಂತರದಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಪ್ರತಿ ತಾಲೂಕಿನಿಂದ 21 ಶಿಕ್ಷಕರಂತೆ ಹುಣಸೂರು, ಕೋಟೆ, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲೂಕಿನಿಂದ ಒಟ್ಟು 85 ಶಿಕ್ಷಕರನ್ನು ಆಯ್ಕೆಮಾಡಿಕೊಂಡು ಅವರಿಗೆ ಯೋಜನೆಯ ಸಮಗ್ರ ಮಾಹಿತಿ ನೀಡಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಎಲ್ಲಾ ಬಗೆಯ ಕೌಶ್ಯಲ್ಯತೆ ಬೆಳೆಸುವ ಕುರಿತ ಈ ಕಾರ್ಯಾಗಾರದಿಂದ ಶಿಕ್ಷಕರಿಗೂ ಉಪಯುಕ್ತವಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಬಿಆರ್‌ಸಿ ಸಂತೋಷ್ ಕುಮಾರ್, ಬಸವರಾಜ್, ಎ.ಪಿ.ಸಿ.ವೆಂಕಟಾಚಲ, ಶಾಸ್ತ್ರಿ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ನಾಗರಾಜ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಶಶಿಕಲಾ, ಶರ್ಮ, ಮಧುರಾಣಿ, ಹರ್ಷ ಯೋಜನೆ ಕುರಿತು ತರಬೇತಿ ನೀಡಿದರು. ಸಿಆರ್‌ಪಿಗಳು, ಬಿಆರ್‌ಪಿ ಗಳು ಭಾಗವಹಿಸಿದ್ದರು. ತರಬೇತಿ ನಿರತ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಅತಿಥಿಗಳು ಕಾಗದದಿಂದ ತಯಾರಿಸಿದ ಟೋಪಿ ಧರಿಸಿ ಗಮನ ಸೆಳೆದರು.