ದಾವಣಗೆರೆ: ಭಾರತದಲ್ಲಿ ಪ್ರತಿ ವರ್ಷ ತಂಬಾಕು ಸೇವನೆಯ ಅಡ್ಡ ಪರಿಣಾಮಗಳಿಂದ 1.35 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ| ಮರುಳಸಿದ್ದಯ್ಯ ಹೇಳಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಸಭಾಂಗಣದಲ್ಲಿ ಶ್ರೀಶಕ್ತಿ ಅಸೋಸಿಯೇಷನ್‌ನ ರಾಜ್ಯ ಮಟ್ಟದ ಸಮನ್ವಯ ಸಮಿತಿಯಿಂದ ಪೊಲೀಸ್ ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ನಿಯಂತ್ರಣ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈಚೆಗೆ ಕುಡಿತದ ಅಭ್ಯಾಸ ಸಾಮಾನ್ಯ ಎನ್ನುವಂತಾಗಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮದ್ಯಪಾನ ಮಾಡುವುದು ಕಂಡು ಬರುತ್ತದೆ. ಮಾದಕ ವಸ್ತುಗಳ ಬಳಕೆ ಕೂಡ ಮಿತಿ ಮೀರಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮೀಕ್ಷೆಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 15 ಮಂದಿ ಮದ್ಯಪಾನ ಮಾಡುತ್ತಾರೆ. ಅವರಲ್ಲಿ ಶೇ. 1.6ರಷ್ಟು ಮಹಿಳೆಯರು, ಶೇ. 1.3 ಮಂದಿ 18 ವರ್ಷದೊಳಗಿನ ಮಕ್ಕಳಿದ್ದಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಭಾರತದಲ್ಲಿ ಶೇ. 29 ಮಂದಿ ತಂಬಾಕು ಪದಾರ್ಥಗಳ ಸೇವನೆ ಮಾಡುತ್ತಾರೆ. ಪ್ರತಿ ವರ್ಷ ತಂಬಾಕು ಸೇವನೆಯಿಂದ 1.35 ಮಿಲಿಯನ್ ಮಂದಿ ಮರಣ ಹೊಂದುತ್ತಿದ್ದಾರೆ ಎಂದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಪಿಐ ಕಿರಣ್‌ಕುಮಾರ್ ಮಾತನಾಡಿ, ಯಾರೋ ಒತ್ತಾಯ ಮಾಡಿದರು ಎಂದು ಮದ್ಯ ಸೇವನೆ ಮತ್ತಿತರ ದುಶ್ಚಟಗಳನ್ನು ಕಲಿತೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ವ್ಯಕ್ತಿ ಹಾಳಾಗಲು ಅವನೇಕಾರಣನಾಗಿರುತ್ತಾನೆ. ಮದ್ಯಪಾನದಿಂದ ಹಾನಿಯೇ ಹೆಚ್ಚು ಎಂದು ತಿಳಿದಿದ್ದರೂ ವ್ಯಸನದ ದಾಸರಾಗಿ, ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಣಕಾಸಿನ ಸಮಸ್ಯೆಗೆ ಸಿಲುಕುತ್ತಾರೆ. ನೆಮ್ಮದಿ ಇರುವುದಿಲ್ಲ. ಸಾಮಾಜದಲ್ಲಿ ಗೌರವ ಕೂಡ ಸಿಗುವುದಿಲ್ಲವಾದರೂ ಮದ್ಯ ಸೇವನೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಮದ್ಯಪಾನ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ತಂದೆ-ತಾಯಿ, ಹೆಂಡತಿ, ಮಕ್ಕಳು ಎಲ್ಲರೂ ಮರುಗುತ್ತಾರೆ. ಅಪ್ಪನನ್ನು ನೋಡಿ ಮಕ್ಕಳೂ ದುಶ್ಚಟಗಳ ಹಾದಿ ಹಿಡಿಯುತ್ತಾರೆ. ದುಶ್ಚಟದಿಂದ ಮದ್ಯಪಾನ ಮಾಡುವ ವ್ಯಕ್ತಿ ಮಾತ್ರ ಹಾಳಾಗದೆ, ಪೀಳಿಗೆಯನ್ನೇ ಹಾಳು ಮಾಡುತ್ತದೆ. ಮನುಷ್ಯನಿಗೆ ಯಾವುದಾದರೂ ಒಂದು ಚಟ ಇರಬೇಕು ಎಂದು ಕೆಲವರು ಹೇಳುತ್ತಾರೆ. ಯಾವುದೇ ಚಟ ಇಲ್ಲದೆಯೂ ವ್ಯಕ್ತಿ ನೆಮ್ಮದಿಯಿಂದ ಜೀವಿಸಬಹುದು. ಅದಕ್ಕೆ ಮನೋಬಲ ಉತ್ತಮವಾಗಿರಬೇಕು ಎಂದು ಹೇಳಿದರು.
ತಪೋವನ ವೈದ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ| ವಿನಯ ಮಾತನಾಡಿ, ಪ್ರಸ್ತುತ ಆಧುನಿಕ ಜೀವನದಲ್ಲಿ ಮದ್ಯಪಾನ ಒಂದು ಫ್ಯಾಷನ್ ಆಗಿದೆ. ಮದ್ಯಪಾನ ಮಾಡದಿರುವ ಜನರನ್ನು ಅಪರಾಧಿಯಂತೆ ನೋಡುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಮಟ್ಟದ ಸಮನ್ವಯ ಸಂಸ್ಥೆಯ ಸಂಘಟಕಿ ಶೈಲಶ್ರೀ, ಪಿಎಸ್‌ಐ ಚನ್ನಪ್ಪ ಬಿ. ಪೂಜಾರ್, ತಪೋವನ ಸಂಸ್ಥೆಯ ಜಿ.ಎಂ. ನಾಗಪ್ಪ, ರಮೇಶ್, ನಿತಿನ್ ಇತರರು ಇದ್ದರು.