Advertisement

ಉದ್ಯೋಗಸ್ಥಳೂ ಮತ್ತವಳ ಅತ್ತೆಯೂ 

07:22 PM Nov 17, 2017 | |

ಭಾಗೀರಥಿ ಊಟಕ್ಕೆ ಕರೆದರೆ ಓಡಿ ಬರ್ತಿ, ಕೆಲಸಕೆ ಕರೆದರೆ ಅಳುತಿರ್ತಿ, ಭಾಗೀರಥಿ ಭಾಗೀರಥಿ ನಿನ್ನ ಗಂಡನ ಮನೆಯಲ್ಲಿ ಹೇಗಿರುತ್ತಿ – ಎಂಬ ಪದ್ಯವನ್ನು ಬಾಲವಾಡಿಯಲ್ಲಿ  ಕಲಿತ ನೆನಪು. “”ನಮ್ಮ ಸೊಸೆ ಬೆಳಗ್ಗೆ ಏಳ್ಳೋದೇ ತಡವಾಗಿ, ಎದ್ದವಳು ತಿಂಡಿ ರೆಡಿ ಮಾಡಿಕೊಟ್ಟರೆ ತಿನ್ನುತ್ತಾಳೆ, ಇಲ್ಲವಾದರೆ ಲೇಟಾಯ್ತು ಎಂದು ಓಡುತ್ತಾಳೆ, ಸಂಜೆ ಬಂದವಳು ಸುಸ್ತಾಯ್ತು ಎಂದು ಮಲಗಿ ಅಡುಗೆ ಸಿದ್ಧವಾದ ಮೇಲೆ ಎದ್ದು ಊಟಮಾಡಿ  ಮತ್ತೆ ಮಲಗಿಕೊಳ್ಳುತ್ತಾಳೆ. ಎಲ್ಲ ಕೆಲಸ ನನ್ನ ತಲೆಯ ಮೇಲೆಯೇ, ಮೊಮ್ಮಗುವನ್ನು ನೋಡಿಕೊಳ್ಳುವ ಹೊಣೆ ಕೂಡ ನಮ್ಮದೇ”- ಎಂಬುದು ಸಾಮಾನ್ಯ ಎಲ್ಲ ಅತ್ತೆ-ಮಾವಂದಿರ ಗೋಳು.

Advertisement

ಬೆಳಿಗ್ಗೆ ಏಳೂವರೆಗೆ ಕಚೆೇರಿಯ ಬಸ್ಸನ್ನು ಏರಿ ಬೆಂಗಳೂರಿನ ಟ್ರಾಫಿಕ್‌ಗಳನ್ನು ದಾಟಿ ಒಂಬತ್ತು ಗಂಟೆಗೆ ಸೇರದಿದ್ದರೆ “ಯಾಕೆ ತಡವಾಯಿತು’ ಎಂದು ಕೇಳುವ ಮೇಲಧಿಕಾರಿಯ ಬೈಗುಳಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಬೆಳಿಗ್ಗೆ ಕೋಳಿ ಕೂಗುವ ಮೊದಲೇ  ಅಲಾರಮ… ಇಟ್ಟುಕೊಂಡು ಗೀಸರ್‌ ಸ್ವಿಚ್‌ ಹಾಕಿ, ಸ್ನಾನಕ್ಕೆ ಬಟ್ಟೆಬರೆ ಜೋಡಿಸಿಕೊಂಡು, ಹಲ್ಲುಜ್ಜುವ ಇತ್ಯಾದಿ ಕಾರ್ಯಗಳನ್ನು ಮುಗಿಸಿ ಏಳು ಹದಿನೈದಕ್ಕೆ ಮನೆ ಬಿಡಲು ತಯಾರಾಗಬೇಕು.

ಕಚೆೇರಿ ತಲುಪಿದೊಡನೆ ಮಿಂಚಂಚೆಗಳನ್ನೆಲ್ಲ ಓದಿ, ರಾತ್ರಿ ಪಾಳಿಯವರು ಉಳಿಸಿದ ಕಾರ್ಯಗಳನ್ನೂ, ಮುಗಿಸಿದ ಕಾರ್ಯಗಳ ಮಾಹಿತಿಯನ್ನು ಕಲೆಹಾಕಿ ಮುಗಿಸಿ, ಮಾಡಬೇಕಾದ ಕೆಲಸವನ್ನೆಲ್ಲ ಮುಗಿಸಿ ಮೇಲಧಿಕಾರಿಗೆ ವರದಿ ಒಪ್ಪಿಸುವಷ್ಟರಲ್ಲಿ ಹೊಟ್ಟೆ ತಾಳಹಾಕಲು ಶುರು. ಅತ್ತೆ ಹಾಕಿಕೊಟ್ಟ ಡಬ್ಬಿಯ ತಿಂಡಿ ತಿಂದು, ಚಹಾ ಕುಡಿದು ಬರಲು ಸಮಯದ ಗಡುವು ಉಂಟು. ಅರ್ಧ ಗಂಟೆಯ ಸಮಯಾವಕಾಶವಷ್ಟೇ. ಇನ್ನು ಮೇಲಧಿಕಾರಿ ವಹಿಸಿದ ಕೆಲಸಗಳನ್ನು ಮಾಡಲು ಶುರುಮಾಡಿದರೆ ಮಾಡಿದಷ್ಟು ಕೆಲಸ.

ಕೆಲಸಗಳನ್ನು ಮುಗಿಸಿ ಐದು ಗಂಟೆಗೆ ಕಚೇರಿಯ ಬಸ್ಸನ್ನು ಹತ್ತಬೇಕೆಂದರೆ ಊಟವನ್ನು ತ್ಯಾಗಮಾಡಬೇಕು. ಬಸ್ಸು ಹತ್ತಿದೊಡನೆ ಮಲಗೋಣವೆಂದರೆ, ಮತ್ತೆ ವಾಹನ ದಟ್ಟಣೆ, ಬಸ್ಸಿನಲ್ಲಿ ಹಾಕಿದ ಹಾಡು ಇತ್ಯಾದಿಗಳ ವಿಘ್ನ. ಅದರ ನಡುವೆ ವಾಟ್ಸಾಪ್‌, ಫೇಸ್‌ಬುಕ್‌ ಬೆಳಿಗ್ಗಿನಿಂದ ನೋಡದಿರುವ ತವಕದಲ್ಲಿ ಒಮ್ಮೆ ಕಣ್ಣು ಹಾಯಿಸುತ್ತ ಮನೆಗೆ ಬರುವಾಗ ಏಳು ಗಂಟೆ. ಏಳೂವರೆಯ ಕ್ಲೈಂಟ… ಕಾಲನ್ನು ತೆಗೆದುಕೊಳ್ಳಲು ಮುಖ ತೊಳೆದು ದಣಿವಾರಿಸಿಕೊಳ್ಳಲು ಸಮಯವಿಲ್ಲ. ಕರೆಯಲ್ಲಿ ಮಾತನಾಡಲು ಸ್ವಲ್ಪ$ಸಿದ್ಧತೆ ನಡೆಸಿ ಕರೆ ಮುಗಿದೊಡನೆ ಅಲ್ಲೇ ನಿದ್ರೆ ಬಂದಿರುವುದು ತಿಳಿಯುವುದಿಲ್ಲ.

 ಅತ್ತೆ ಊಟಕ್ಕೆ ಕರೆದಾಗ, ಊಟಕ್ಕೆ ಹೋಗಲು ಕೈಕಾಲು ತೊಳೆದುಕೊಂಡು ಬಟ್ಟೆ ಬದಲಾಯಿಸಿ ಊಟಮಾಡುವಷ್ಟರಲ್ಲಿ, ಹಠ ಮಾಡುವ ಮಗಳು. ಅಮ್ಮನೊಂದಿಗೆ ಬೆಳಿಗ್ಗೆಯಿಂದ ಆಡದೇ, ಆಡಲು ಬಯಸುವ ಮಗು ಮಲಗುವುದು ರಾತ್ರಿ ಒಂದು ಗಂಟೆಗೆ, ಕೆಲವೊಮ್ಮೆ 2-3 ಗಂಟೆಗೆ. ಮಗುವನ್ನು ಸ್ವಲ್ಪ$ಹೊತ್ತು ಆಡಿಸಿ ಎಂದು ಗಂಡನನ್ನು ಕೇಳಿದರೆ, “”ಸುಸ್ತಾಗಿದೆ ಕಣೆ, ನೀನೇ ಆಡಿಸು” ಎಂದು ಹೇಳುವ ಗಂಡ.ಮಗುವನ್ನು ಆಡಿಸಿ ಮಲಗಿಸಿ, ತಾನು ಮಲಗುವಾಗ ಗಂಟೆ 2-3 ಆದರೂ ಬೆಳಿಗ್ಗೆ ಏಳುವುದು ಸೂರ್ಯ ಹುಟ್ಟುವ ಮೊದಲೇ. ಇದು ನಮ್ಮ ಪಕ್ಕದ್ಮನೆ ಭಾಗೀರಥಿ ಕತೆಯಷ್ಟೇ ಅಲ್ಲ. ಅವಳು ನಮ್ಮ ನಿಮ್ಮ ಮನೆಯಲ್ಲೂ  ಇರಬಹುದು, ಒಮ್ಮೆ ಯೋಚಿಸಿ ನೋಡಿ.

Advertisement

 ತನ್ನ ಮಗುವನ್ನು ಬೆಳೆಸಿ ದೊಡ್ಡವರಾಗಿಸಿದ ಅಪ್ಪ-ಅಮ್ಮಂದಿರಿಗೆ ಈಗ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಕೆಲಸ. ಬೆಳಿಗ್ಗೆ ಎದ್ದು ಮಗ-ಸೊಸೆಯರಿಗೆ ಅಡಿಗೆ ಮಾಡಿ, ಮೊಮ್ಮಗುವನ್ನು ಶಾಲೆಗೆ ತಯಾರಿ ಮಾಡಿ ಕಳುಹಿಸಿ, ಕೆಲಸದವಳು ಮಾಡುವ ಅವಸರದ ಕೆಲಸವನ್ನು ಮಾಡಿಸಿಕೊಳ್ಳಲು ಪರದಾಡಿ, ತಾವು ತಿಂಡಿ ತಿನ್ನುವಾಗ ಹನ್ನೊಂದು-ಹನ್ನೆರಡು ಗಂಟೆ. ಒಂದು ಗಂಟೆಗೆ ಬರುವ ಮೊಮ್ಮಗುವನ್ನು ಶಾಲಾ ವಾಹನದಿಂದ ಇಳಿಸಿ ಮನೆಗೆ ಕರೆದುಕೊಂಡು ಬಂದು, ಊಟ ಮಾಡಿಸಲು ಕುಣಿದಾಡಿ, ಮಲಗಿಸಿ ನಾಲ್ಕು ಗಂಟೆಗೆ ಮಗುವನ್ನು ಪಾರ್ಕಿಗೆ ಕರೆದುಕೊಂಡು ಹೋಗಿ ಬಂದು, ಸಂಜೆ ಹಾಲು ಕುಡಿಸಿ ಸೊಸೆಯ ಕೈಗೆ ಒಪ್ಪಿಸಲು ಕಾತುರದಿಂದ ಕಾಯುತ್ತಿರುವ ಅತ್ತೆ-ಮಾವಂದಿರು. ಇದು ಕೂಡ ನಿಮ್ಮ ಮನೆಯಲ್ಲಿನ ಅಜ್ಜ-ಅಜ್ಜಿಯಂದಿರ ಕಥೆಯೇನೋ.

ಈ ಕಡೆ ಸೊಸೆಗೆ ಕಚೆೇರಿಯ ಸುಸ್ತು, ನಿದ್ರೆಯ ಕೊರತೆ ಕಂಡರೆ, ಅತ್ತಕಡೆ ಅತ್ತೆಯ ಮನೆಕೆಲಸದ ಸುಸ್ತು. ಸೊಸೆಗೆ ಅತ್ತೆ ಮನೆಯಲ್ಲಿರುತ್ತಾರೆ, ಅವರಿಗೆ ಮಧ್ಯಾಹ್ನ ಮಲಗುವ ಸಮಯವಿರಬಹುದು ಎಂಬ ಭಾವನೆ. ಅವರ ವಯಸ್ಸಿನ ಕಾರಣ ಆರೋಗ್ಯದ ಸಮಸ್ಯೆಯಿರುವುದು ಅವಳ ಸುಸ್ತಿನ ನಡುವೆ ಕಾಣುವುದಿಲ್ಲ. ಬಂದರೂ ಅವಳು ಅತ್ತೆಗೆ ಸಹಾಯ ಮಾಡುವ ಸ್ಥಿತಿಯಲ್ಲಂತೂ ಇರಲಾರಳು.

ಇತ್ತೀಚಿನ  ಗಣಕೀಕರಣದ ದಿನಗಳಲ್ಲಿ ಕಚೇರಿಗಳಲ್ಲಿ  ಗಣಕಯಂತ್ರ, ಜಂಗಮವಾಣಿಯ ನಿರಂತರ ಬಳಕೆಯಿಂದ ಬೇಗನೇ ಸುಸ್ತಾಗುತ್ತಿರುವುದು ಸುಳ್ಳಲ್ಲ. ವಾಹನ ದಟ್ಟಣೆಯ ಧೂಳು, ಆಹಾರ ಕ್ರಮ ಇತ್ಯಾದಿಗಳು ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮದ ಕಾರಣಗಳು ಮಾನಸಿಕವಾಗಿಯೂ, ದೈಹಿಕವಾಗಿಯೂ ದುರ್ಬಲರಾಗಿಸುತ್ತಿದೆ. ಇವೆಲ್ಲ ಕಾರಣದಿಂದ ಮನೆಯ ಸೊಸೆಯ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ. ಇವೆಲ್ಲ ಸಮಸ್ಯೆಗಳು ಥೈರಾಯx…, ಪಿಸಿಓಡಿ ಇತ್ಯಾದಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ.

ಮನೆಯ ಸಾಲ, ವಾಹನ ಸಾಲ, ಇತ್ತೀಚಿನ ಜೀವನಕ್ರಮದಲ್ಲಿ ದುಡಿಯುವ ಸೊಸೆಯಿದ್ದರಷ್ಟೇ, ಅವರ ಜೀವನದಲ್ಲಿ ಸಮತೋಲನ. “ನಮ್ಮ ಸೊಸೆ ಒಂದು ಮನೆಗೆಲಸವೂ ಮಾಡುವುದಿಲ್ಲ’ ಎಂದು ದೂರುವ ಅತ್ತೆಯಂದಿರು ಕೆಲವರು. “ಸೊಸೆಮನೆಗೆ ಬಂದ ನಂತರವೂ ನಾವೇ ಮಗುವನ್ನು ನೋಡಿಕೊಳ್ಳಬೇಕು’ ಎಂಬ ದೂರು ಕೆಲವರದು. “ಅತ್ತೆ ಕೈಕಾಲು ತೊಳೆದು ಚಹಾ ಕುಡಿಯಲು ಕೂಡ ಸಮಯಕೊಡದೇ ಮಗುವನ್ನು ನನ್ನ ಕೈಗೆ ನೀಡುತ್ತಾರೆ’ ಎನ್ನುವ ನನ್ನ ಗೆಳತಿಯರು. 

ಇವೆಲ್ಲ ಸನ್ನಿವೇಶಗಳಲ್ಲಿ ಯಾರ ತಪ್ಪು ಇಲ್ಲ. ತಮ್ಮ ಮಕ್ಕಳಿಗಾಗಿ ಹಗಲಿರುಳು ದುಡಿದು ಕಷ್ಟಪಟ್ಟವರು, ಈಗ ಹಾಯಾಗಿ ದೂರದರ್ಶನ, ದೇವಸ್ಥಾನ, ಭಜನೆಯೆಂದು ಕಾಲಕಳೆದು ತಮ್ಮ ನಿವೃತ್ತಿ ಜೀವನ ಅನುಭವಿಸುವ ಕಾಲದಲ್ಲಿ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಹೊರಲಾರದ ಹೊರೆಯಾಗುತ್ತಿದೆ. ಇನ್ನು ಮನೆಗೆಲಸ, ಮಕ್ಕಳ ಆರೈಕೆ, ಅತ್ತೆ-ಮಾವಂದಿರ ಆರೋಗ್ಯದ ಹೊಣೆ ಹೊರಬೇಕಾದ ಸೊಸೆಗೆ ಕಚೇರಿ ಕೆಲಸದ ಹೊಣೆಯೇ ಜಾಸ್ತಿಯಾಗುತ್ತಿದೆ. ಗಂಡ-ಹೆಂಡತಿಯರ ಸಮಾನ ದುಡಿಮೆಯ ನಡುವೆ ತಮಗೂ ಸಮಯವಿಲ್ಲ, ಹಿರಿಯ-ಕಿರಿಯರಿಗೂ ಸಮಯವಿಲ್ಲ.

ತುಂಬ ಅಗತ್ಯವಿದ್ದು ಸೊಸೆಯು ಕೆಲಸಕ್ಕೆ ಹೋಗಲೇಬೇಕಾದ ಪಕ್ಷದಲ್ಲಿ ಮೊಮ್ಮಕ್ಕಳ ಆರೈಕೆಗೆ ಮನೆಯಲ್ಲಿ ಅಜ್ಜ-ಅಜ್ಜಿಯಾಗಿರುವವರು ಮಗ-ಸೊಸೆಯೊಂದಿಗೆ ಮನಬಿಚ್ಚಿ ಮಾತನಾಡಿ ಮನೆಕೆಲಸಕ್ಕೆ ಯಾರನ್ನಾದರೂ ನೇಮಿಸಿಕೊಳ್ಳ ಬಹುದು. ನನ್ನ ಗೆಳತಿಯೊಬ್ಬಳು ಅವಳು ಕಚೇರಿಗೆ ಬರುವಾಗ ಮನೆಯಲ್ಲಿ ಅತ್ತೆಯಿದ್ದರೂ ಮಗುವನ್ನು ನೋಡಿಕೊಳ್ಳಲು ಒಬ್ಬ ಆಯಳನ್ನು ನೇಮಿಸಿಕೊಂಡಿ ¨ªಾಳೆ. “ಅತ್ತೆಗೆ ಕೂತರೆ ಏಳಲು ಕಷ್ಟ, ಪಾಪ ಅವರೊಬ್ಬರೆ ಏಕೆ ಕಷ್ಟಪಟ್ಟು ಪಾಪುವನ್ನು ನೋಡಿಕೊಳ್ಳಬೇಕು’ ಎಂದು ಅವಳ ವಾದ. ಅಜ್ಜಿಯ ಆರೈಕೆ ಪ್ರೀತಿಯೊಂದಿಗೆ, ಅಜ್ಜಿಯ ಆರೋಗ್ಯ ರಕ್ಷಣೆಯೂ ಆಯಿತು, ಸೊಸೆಗೂ ನೆಮ್ಮದಿಯಾಗಿ ಕಚೇರಿ ಕೆಲಸ ಮಾಡುವಂತಾಯಿತು.

 ಸೊಸೆಯಾಗಿರುವ ಮಹಿಳೆಯೂ ಕೆಲಸಕ್ಕೆ ಹೋಗಲೇಬೇಕಾದ ಒತ್ತಡವಿಲ್ಲದಿದ್ದರೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವೋ, ಪಾರ್ಟ್‌ಟೈಮ… ಕೆಲಸವನ್ನೋ ಮಾಡುವ ಸೌಲಭ್ಯವಿದ್ದಲ್ಲಿ ಬಳಸಿಕೊಳ್ಳಬಹುದು. ಈ ಸೌಲಭ್ಯವನ್ನು ಪಡೆಯಲು ಸಂಬಳದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ರಾಜಿ ಮಾಡಿಕೊಳ್ಳಬೇಕಾಗಬಹುದೇನೋ. ಹೀಗೆ ಮಾಡುವುದರಿಂದ ಮನೆಯವರ ಆರೋಗ್ಯವನ್ನು ವಿಚಾರಿಸಿಕೊಳ್ಳಬಹುದು, ಮಗುವಿನ ಆರೈಕೆಯೂ ಆಗುವುದು, ಕಚೇರಿ ಕೆಲಸವೂ ಆಗುತ್ತದೆ.

ಮನೆಗೆ ಸೊಸೆ ಬಂದರೆ ಗೃಹಲಕ್ಷ್ಮೀ ಬಂದಂತೆ ಎನ್ನುವರು, ಮಗು ಬಂದರೆ ಕೃಷ್ಣನೋ, ಗೌರಿಯೋ ಬಂದಂತೆ ಎನ್ನುವಾಗ ಮನೆಯ ಎಲ್ಲ ದೇವರೂ ಆರೋಗ್ಯ, ನೆಮ್ಮದಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಲ್ಲವೇ.ಮನೆಯ ಭಾಗೀರಥಿಯನ್ನು ಊಟಕ್ಕೆ ಕರೆದಾಗ ಓಡಿ ಬರುವವಳು, ಕೆಲಸಕ್ಕೆ ಕರೆದರೆ ಓಡಿಬರುವವಳು ಎನ್ನುವ ನಮ್ಮ ಮನಸ್ಸನ್ನು, ಅತ್ತೆಯು ಮನೆಯಲ್ಲೇ ಇದ್ದು ಮಗುವನ್ನು ನೋಡಿಕೊಳ್ಳಬೇಕಾದ ಕಬ್ಬಿಣದ ಕಡಲೆಯ ಪರಿಸ್ಥಿತಿಯನ್ನು, ಮನೆಯ ವಾತಾವರಣವನ್ನು ಬದಲಾಯಿಸುವ ಕಾರ್ಯಕ್ಕೆ ಸಜ್ಜಾಗೋಣ.

ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next