Advertisement

ಮಿನಿ ಚುನಾವಣೆ ಗೆಲ್ಲಲು ಪಕ್ಷಗಳ ತಾಲೀಮು!

04:51 PM Aug 04, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳನ್ನು ತಮ್ಮ ಪಕ್ಷದ ಹಿಡಿತಕ್ಕೆ ಪಡೆಯಲು ಕಾಂಗ್ರೆಸ್‌-ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ತಯಾರಿ ನಡೆಸಿವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌, ಈ ಬಾರಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮಾತು ಕೇಳಿದೆಯಾದರೂ, ಇನ್ನೂ ಅಂತಿಮಗೊಂಡಿಲ್ಲ. ಆದರೂ, ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ.

Advertisement

ಬದಲಾದ ರಾಜಕೀಯ: ಕಳೆದ 2013ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಜಿಲ್ಲೆಯಲ್ಲಿದ್ದ ರಾಜಕೀಯ ವ್ಯವಸ್ಥೆ ಈಗಿಲ್ಲ. ಆಗ ಬಿಜೆಪಿ ಮೂರು ಹೋಳಾಗಿತ್ತು. ಯಡಿಯೂರಪ್ಪ ಅವರ ಕೆಜೆಪಿ, ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳಿಂದಲೂ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರು. ಇನ್ನು ಸದ್ಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಾದಾಮಿಯ ಮಹಾಂತೇಶ ಮಮದಾಪುರ, ಜೆಡಿಎಸ್‌ನಲ್ಲಿದ್ದರು. ಹೀಗಾಗಿ ಬಾದಾಮಿ ಪುರಸಭೆ ಆಡಳಿತ, ಜೆಡಿಎಸ್‌ 12 ಸ್ಥಾನಗಳೊಂದಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 

ಇನ್ನು ಸದ್ಯ ಕೆಪಿಸಿಸಿ ಕಾರ್ಯದರ್ಶಿ ಆಗಿರುವ ಬಸವಪ್ರಭು ಸರನಾಡಗೌಡ ಅವರೂ ಜೆಡಿಎಸ್‌ ನಲ್ಲಿದ್ದರು. ಆಗ ಬೀಳಗಿ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್‌ ಖಾತೆ ತೆರೆದಿತ್ತು. ಅಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ ಏಳೂ ವಿಧಾನಸಭೆ ಮತಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ, ಬಿಜೆಪಿ ಮೂರು ಭಾಗವಾಗಿದ್ದರಿಂದ 12 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 290 ವಾರ್ಡ್‌ಗಳ ಪೈಕಿ 112 ವಾರ್ಡ್‌ಗಳಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು.

ಈಗ ಜಿಲ್ಲೆಯ ಏಳು ವಿಧಾನಸಭೆ ಮತ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ, ಬಾದಾಮಿಯಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಜಮಖಂಡಿ ಕ್ಷೇತ್ರ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಉಪ ಚುನಾವಣೆಗೆ ಕಾದಿದೆ.

ಬಹುತೇಕ ಕಡೆ ಮೀಸಲಾತಿ ಪ್ರಭಾವ : 2013ರಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದರೂ, ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲು ಬರೋಬ್ಬರಿ 6 ತಿಂಗಳು ವಿಳಂಬವಾಗಿತ್ತು. ಕಾರಣ, 2013ರ ಮೇನಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ, ಹೊಸ ಸರ್ಕಾರ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟ ಮಾಡಿದ ಬಳಿಕ ಆಡಳಿತ ಅಸ್ತಿತ್ವಕ್ಕೆ ಬಂದಿದ್ದವು. 

Advertisement

ಈ ಬಾರಿಯೂ ವಿಧಾನಸಭೆ ಚುನಾವಣೆ ಮುಗಿದ ಬಳಿಕ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ 290 ಸ್ಥಾನಗಳು, ಈಗ 312 ಸ್ಥಾನಕ್ಕೇರಿವೆ. 

ಆಗ ಜಿಲ್ಲೆಯ ಕೆಲವೆಡೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡುವಾಗಲೇ ಹಲವು ರಾಜಕೀಯ ಚಾಣಾಕ್ಷ್ಯತನ ಮೆರೆಯಲಾಗಿತ್ತು. ಬಹುಮತ ಹೊಂದಿದ್ದರೂ, ಕೆಲವೆಡೆ ಬಿಜೆಪಿ ಅಧಿಕಾರಕ್ಕೆ ಬರಲಾಗಿರಲಿಲ್ಲ. ಕಾರಣ, ಬಿಜೆಪಿ ಪಕ್ಷದಲ್ಲಿರದ ಸದಸ್ಯ ಸ್ಥಾನದ ಮೀಸಲಾತಿ, ಅಧ್ಯಕ್ಷ ಇಲ್ಲವೇ ಉಪಾಧ್ಯಕ್ಷ ಸ್ಥಾನಕ್ಕೆ ಘೋಷಣೆ ಮಾಡಿಸಲಾಗಿತ್ತು ಎಂಬ ಮಾತು ಕೇಳಿ ಬಂದಿತ್ತು.

ಬಿಜೆಪಿಯ ಒಗ್ಗಟ್ಟು ಕಾಂಗ್ರೆಸ್‌ನಲ್ಲಿ ಕಾಣ್ತಿಲ್ಲ: 2013ರಲ್ಲಿ ನಡೆದ ಚುನಾವಣೆ ವೇಳೆ ಜಿಲ್ಲೆಯ ಬಹುತೇಕ ಕಾಂಗ್ರೆಸ್‌ ನಾಯಕರು ಒಗ್ಗಟ್ಟಿನಿಂದ ಇದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಆಗ ಬಿಜೆಪಿಯಲ್ಲಿದ್ದ ಭಿನ್ನಮತದ ಹಾದಿ, ಸದ್ಯ ಕಾಂಗ್ರೆಸ್‌ನಲ್ಲಿದೆ. ಆದರೂ, ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನಃ ಹಿಡಿತ ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಕಸರತ್ತು ನಡೆಸಿದ್ದಾರೆ. ಅದು ಫಲ ಕೊಡುತ್ತಾ ಕಾದು ನೋಡಬೇಕು.

ಜೆಡಿಎಸ್‌ಗೆ ಅಧಿಕಾರ ಬಲ ಸಿಗುತ್ತಾ : ಕಳೆದ ಬಾರಿ ಸರ್ಕಾರ ಇಲ್ಲದಿದ್ದರೂ ಜಿಲ್ಲೆಯ ಒಟ್ಟು 290 ವಾರ್ಡ್‌ಗಳ ಪೈಕಿ, 16 ವಾರ್ಡ್‌ಗಳಲ್ಲಿ ಗೆದ್ದಿದ್ದ ಜೆಡಿಎಸ್‌ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಸರ್ಕಾರ ಇರುವ ಬಲವಿದೆ. ಜತೆಗೆ ಹುನಗುಂದದ ಪ್ರಭಾವಿ ನಾಯಕ ಎಸ್‌.ಆರ್‌. ನವಲಿಹಿರೇಮಠ, ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದ ಬಲ, ನವಲಿಹಿರೇಮಠರ ಕ್ರಿಯಾಶೀಲತೆಗೆ ಜೆಡಿಎಸ್‌ ಸದಸ್ಯ ಬಲ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಾ ಎಂಬ ಲೆಕ್ಕಾಚಾರ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next