Advertisement

ರಾಜ್ಯಸಭೆ ಚುನಾವಣೆಗೆ ಭರ್ಜರಿ ತಾಲೀಮು

07:30 AM Mar 02, 2018 | |

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯಸಭೆಗೆ ಖಾಲಿಯಾಗಲಿರುವ ನಾಲ್ಕು ಸ್ಥಾನಗಳನ್ನು ತುಂಬಿಕೊಳ್ಳಲು ಭರ್ಜರಿ ತಾಲೀಮು ಆರಂಭವಾಗಿದೆ. ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳನ್ನು ಪಡೆಯಲು ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ತೆರೆಮರೆ ಕಸರತ್ತು ಆರಂಭವಾಗಿದ್ದು, ಜಾತಿ ಲೆಕ್ಕಾಚಾರದ ಆಧಾರದಲ್ಲಿ ಅಭ್ಯರ್ಥಿಗಳು ಯಾರಾಗಬೇಕು ಎಂಬ ಚರ್ಚೆ ಪಕ್ಷದ ನಾಯಕರಲ್ಲಿ ನಡೆಯುತ್ತಿದೆ. ಈ ನಡುವೆ ಜೆಡಿಎಸ್‌ ಕೂಡ ಒಂದು ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರನೇ ಅಭ್ಯರ್ಥಿ ಕಣಕ್ಕಿಳಿಸದಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ
ಹೇರುತ್ತಿರುವುದು ತಾಜಾ ಬೆಳವಣಿಗೆ. ಈ ನಡುವೆ ಬಿಜೆಪಿ ಕೂಡ ತನ್ನದೇ ಕಾರ್ಯತಂತ್ರದಲ್ಲಿ ತೊಡಗಿದ್ದು, ಅಭ್ಯರ್ಥಿ ಕುರಿತು ಶುಕ್ರವಾರ ನಡೆಯಲಿರುವ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ.

Advertisement

ಕಾಂಗ್ರೆಸ್‌ ಜಾತಿ ಲೆಕ್ಕಾಚಾರ ಶುರು
ಬೆಂಗಳೂರು:
ರಾಜ್ಯಸಭೆಗೆ ಖಾಲಿಯಾಗಲಿರುವ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಪಡೆಯಲು ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ತೆರೆ ಮರೆ ಕಸರತ್ತು ಆರಂಭವಾಗಿದೆ. ಅಭ್ಯರ್ಥಿಗಳು ಯಾರಾಗಬೇಕು ಎಂಬ ಲೆಕ್ಕಾಚಾರ ಪಕ್ಷದ ನಾಯಕರಲ್ಲಿ ಆರಂಭವಾಗಿದ್ದು, ರಾಜಕೀಯ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ತಮ್ಮ ಪರವಾದ ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ವಲಯದಲ್ಲಿ ತೇಲಿ ಬಿಡುವ
ಪ್ರಯತ್ನ ಆರಂಭಿಸಿದ್ದಾರೆ.

ದಲಿತ ಕೋಟಾದಡಿಯಲ್ಲಿ ದಲಿತ ಎಡಗೈ ಪಂಗಡದ ಲೋಕಸಮಾಜಿ ಸ್ಪೀಕರ್‌ ಮೀರಾ ಕುಮಾರಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ಸಂಸದ ಕೆ.ಎಚ್‌. ಮುನಿಯಪ್ಪ ಹಾಗೂ ಸಚಿವ ಆಂಜನೇಯ ಆಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಪ್ರಯತ್ನಕ್ಕೆ ತಡೆಯೊಡ್ಡಲು ಬಲಗೈ ಪಂಗಡದ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಹನುಮಂತಪ್ಪ ಅವರ ಹೆಸರನ್ನು ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಿಟ್ಟಿದ್ದಾರೆ 
ಎಂದು ಹೇಳಲಾಗುತ್ತಿದೆ. ಇದಕ್ಕೆ ಬೆಂಬಲವಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕೂಡ ನಿಂತಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಲಿಂಗಾಯತ ಕೋಟಾದಡಿ ಮಾಜಿ ಸಿಎಂ ದಿ. ವೀರೇಂದ್ರ ಪಾಟೀಲ್‌ ಪುತ್ರ ಕೈಲಾಸ್‌ನಾಥ ಪಾಟೀಲ್‌ ಹಾಗೂ ಮಾಜಿ ಸಚಿವೆ ರಾಣಿ ಸತೀಶ್‌ ಅವರ ಹೆಸರು ಕೇಳಿ ಬರುತ್ತಿದೆ. ರಾಣಿ ಸತೀಶ್‌ ಹಳೇ ಮೈಸೂರು ಭಾಗದವರಾಗಿದ್ದು ಮುಖ್ಯಮಂತ್ರಿ ಕೂಡ ಅದೇ
ಭಾಗದವರಾಗಿರುವುದರಿಂದ ಸ್ವತಃ ಸಿದ್ದರಾಮಯ್ಯನವರೇ ರಾಣಿ ಸತೀಶ್‌ಗೆ ಟಿಕೆಟ್‌ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ  ಎನ್ನಲಾಗಿದೆ. ನಿವೃತ್ತಿಯಾಗುತ್ತಿರುವ ಕೆ.ರೆಹಮಾನ್‌ ಖಾನ್‌ ಸ್ಥಾನಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂಬ ಲೆಕ್ಕಾಚಾರ
ನಡೆಯುತ್ತಿದ್ದು, ಆ ಸ್ಥಾನಕ್ಕೆ ನಗರಾಭಿವೃದಿಟಛಿ ಸಚಿವ ರೋಷನ್‌ ಬೇಗ್‌, ಸಲೀಂ ಅಹಮದ್‌ ಹಾಗೂ ಮಾಜಿ ಸಚಿವ ನಜೀರ್‌ ಅಹಮದ್‌ ಹೆಸರುಗಳು ಮುಂಚೂಣಿಯಲ್ಲಿವೆ. ನಜೀರ್‌ ಅಹಮದ್‌ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ
ಎಂದು ತಿಳಿದು ಬಂದಿದೆ. ಖಾಲಿಯಾಗಿರುವ 4 ಸ್ಥಾನಗಳಲ್ಲಿ 2 ಸ್ಥಾನಗಳನ್ನು ಕಾಂಗ್ರೆಸ್‌ ಸುಲಭವಾಗಿ ಗೆಲ್ಲಬಹುದಾಗಿದ್ದು, 3 ನೇ ಅಭ್ಯರ್ಥಿ ಗೆಲ್ಲಲು 13 ಮತಗಳ ಕೊರತೆ ಇದೆ. ಏಳು ಜೆಡಿಎಸ್‌ ಬಂಡಾಯ ಶಾಸಕರು ಹಾಗೂ ಪಕ್ಷೇತರರ ಬೆಂಬಲ ಪಡೆದು ಗೆಲುವು
ಸಾಧಿಸಲು ಅವಕಾಶವಿದೆ. ಆದರೆ, ಪಕ್ಷೇತರ ಸದಸ್ಯರ ಮತಗಳನ್ನು ಸೆಳೆಯುವ ಶಕ್ತಿ ಇರುವ ಅಭ್ಯರ್ಥಿಗೆ ಆದ್ಯತೆ ದೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಜೆಡಿಎಸ್‌ ಕೂಡ ಒಂದು ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ಚರ್ಚೆಯಾಗಿಲ್ಲ. 

ಮುಂಚೂಣಿ ಹೆಸರುಗಳು
ಮೀರಾ ಕುಮಾರಿ: ಲೋಕಸಭೆ ಮಾಜಿ ಸ್ಪೀಕರ್‌ ದಲಿತ ಎಡಗೈ ಪಂಗಡ
ಎಚ್‌. ಹನುಮಂತಪ್ಪ: ರಾಜ್ಯಸಭೆ ಮಾಜಿ ಸದಸ್ಯ, ದಲಿತ ಬಲಗೈ ಪಂಗಡ
ರಾಣಿ ಸತೀಶ್‌: ಮಾಜಿ ಸಚಿವೆ, ಲಿಂಗಾಯತ ಸಮುದಾಯ
ಕೈಲಾಸ್‌ನಾಥ ಪಾಟೀಲ್‌: ಮಾಜಿ ಸಿಎಂ ವೀರೇಂದ್ರ ಪಾಟೀಲ್‌ ಪುತ್ರ, ಲಿಂಗಾಯತ
ಕೆ.ರೆಹಮಾನ್‌ ಖಾನ್‌: ಹಾಲಿ ರಾಜ್ಯ ಸಭಾ ಸದಸ್ಯ. ಮುಸ್ಲಿಂ ಸಮುದಾಯ
ರೋಶನ್‌ ಬೇಗ್‌: ನಗರಾಭಿವೃದ್ದಿ ಸಚಿವ, ಮುಸ್ಲಿಂ ಸಮುದಾಯ
ಸಲೀಂ ಅಹಮದ್‌: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ 2, ಮುಸ್ಲಿಂ ಸಮುದಾಯ
ನಜೀರ್‌ ಅಹ್ಮದ್‌: ಮಾಜಿ ಸಚಿವ, ಮುಸ್ಲಿಂ ಸಮುದಾಯ.

Advertisement

ರಾಜ್ಯಸಭೆ ಚುನಾವಣೆಗೆ ಒಂದು ಸೀಟು ಬಿಟ್ಟುಕೊಡುವ ಕುರಿತು ಜೆಡಿಎಸ್‌ ನೊಂದಿಗೆ ಯಾವುದೇ ಮಾತುಕತೆಯಾಗಿಲ್ಲ.
ಈ ರೀತಿಯ ಪ್ರಸ್ತಾಪ ಪಕ್ಷದ ಮುಂದಿಲ್ಲ. ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು
ತೀರ್ಮಾನ ಕೈಗೊಳ್ಳಲಾಗುತ್ತದೆ. 

● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಬಿಜೆಪಿಗೆ ಆಯ್ಕೆ ಇಕ್ಕಟ್ಟು
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನ ಮಾತ್ರ ಪಡೆಯಲು ಅವಕಾಶ ಹೊಂದಿರುವ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದೆ. ಶುಕ್ರವಾರ ನಡೆಯಲಿರುವ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸಮಸ್ಯೆ ಬಗೆಹರಿಯದಿದ್ದರೆ ಪಕ್ಷದ ವರಿಷ್ಠರಿಗೆ ಈ ವಿಚಾರ ಬಿಡಲು ಮುಖಂಡರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. 

ಸದ್ಯದಲ್ಲೇ ನಿವೃತ್ತರಾಗಲಿರುವ ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಅವರು ಪುನರಾಯ್ಕೆ ಬಯಸಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲದಿಂದಲೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇನ್ನೊಂದೆಡೆ ರಾಜ್ಯದ ಉದ್ಯಮಿ ವಿಜಯ ಸಂಕೇಶ್ವರ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂಬುದು ರಾಜ್ಯ ಬಿಜೆಪಿಯ ಒತ್ತಾಸೆ. ಈ ಮಧ್ಯೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಕೂಡ ರಾಜ್ಯದಿಂದ ರಾಜ್ಯಸಭೆಗೆ ಹೋಗುವ ಇಂಗಿತ ವ್ಯಕ್ತಪಡಿಸಿರುವುದೇ ಪಕ್ಷ ಇಕ್ಕಟ್ಟಿಗೆ ಸಿಲುಕಲು ಕಾರಣವಾಗಿದೆ.

ಸ್ಥಳೀಯ ಅಭ್ಯರ್ಥಿ ವಾದ: ಈ ಹಿಂದೆ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಈಗ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಲು ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರು ರಾಜ್ಯಸಭೆ ಸದಸ್ಯರಾಗಿ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬುದು ಒಂದು ಆರೋಪವಾದರೆ, ಸ್ಥಳೀಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಬೇಕು ಎಂಬುದು ಪ್ರಮುಖ 
ಬೇಡಿಕೆಯಾಗಿತ್ತು. ಈ ಕುರಿತು ಹೋರಾಟ ಆರಂಭವಾಗಿ ವೆಂಕಯ್ಯ ನಾಯ್ಡು ಬದಲಾಗಿ ಪ್ರಸ್ತುತ ಕೇಂದ್ರ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಒಲವಿದೆಯಾದರೂ ಮತ್ತೆ ಸ್ಥಳೀಯ ಅಭ್ಯರ್ಥಿ ಬೇಕು ಎಂಬ ಕೂಗು ಕೇಳಿಬಂದರೆ ಎಂಬ ಪ್ರಶ್ನೆ ಕಾಡುತ್ತಿದೆ. ಸದ್ಯದಲ್ಲೇ ವಿಧಾನಸಭೆ ಚುನಾವಣೆ ಇರುವುದರಿಂದ ಸ್ಥಳೀಯ ಅಭ್ಯರ್ಥಿ ಕೂಗು ಜೋರಾದರೆ ಅದು ವಿಧಾನಸಭೆ ಚುನಾವಣೆ ಮೇಲೆ
ಪ್ರತೀಕೂಲ ಪರಿಣಾಮ ಬೀರುವುದೇ ಎಂಬ ಆತಂಕ ಕಾಣಿಸಿಕೊಂಡಿದೆ. ಇನ್ನೊಂದೆಡೆ ಸದ್ಯ ನಿವೃತ್ತರಾಗಲಿರುವ ರಾಜ್ಯಸಭೆ ಸದಸ್ಯರ ಪೈಕಿ ಬಸವರಾಜ ಪಾಟೀಲ್‌ ಸೇಡಂ ಉತ್ತರ ಕರ್ನಾಟಕದವರು ಮಾತ್ರವಲ್ಲ, ವೀರಶೈವ ಲಿಂಗಾಯತ ಸಮುದಾಯದವರು. ಪ್ರಸ್ತುತ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಇರುವುದರಿಂದ ಸೇಡಂ ಅವರ ಜಾಗಕ್ಕೆ ಅವರದ್ದೇ ಧರ್ಮದ ಮತ್ತು ಭಾಗದ
ಒಬ್ಬರನ್ನು ಕಳುಹಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಪಕ್ಷದಿಂದ ದೂರವಾಗದಂತೆ ನೋಡಿಕೊಳ್ಳಬಹುದು ಎಂಬ ಚಿಂತನೆ ರಾಜ್ಯ ಬಿಜೆಪಿ ನಾಯಕರದ್ದು. ಹೀಗಾಗಿ ವಿಆರ್‌ಎಲ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ
ಸಂಕೇಶ್ವರ ಅವರ ಹೆಸರು ಪ್ರಸ್ತಾಪಿಸಿದೆ.

ಇದೆಲ್ಲದರ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಅವರು ಕೂಡ ರಾಜ್ಯಸಭೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ  ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷದ ರಾಷ್ಟ್ರೀಯ ನಾಯಕರಿಗೆ ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸಿ ಅಭ್ಯರ್ಥಿ ಆಯ್ಕೆಯನ್ನು ಅವರಿಗೇ ಬಿಟ್ಟುಕೊಡಲು ಮುಂದಾಗಿದ್ದಾರೆ. ಶುಕ್ರವಾರ ನಡೆಯುವ ಕೋರ್‌ ಕಮಿಟಿ 
ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ರಾಜ್ಯ ನಾಯಕರು ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ಸ್ಥಾನಕ್ಕೆ ಕಸರತ್ತು
ಬೆಂಗಳೂರು: ರಾಜ್ಯ ಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಂದು ಸ್ಥಾನ ದಕ್ಕಿಸಿಕೊಳ್ಳಲು ಜೆಡಿಎಸ್‌, ಕಾಂಗ್ರೆಸ್‌
ಹೈಕಮಾಂಡ್‌ ಸಂಪರ್ಕ ಮಾಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರನೇ ಅಭ್ಯರ್ಥಿ ಕಣಕ್ಕಿಳಿಸದಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಹೇರಲಾಗುತ್ತಿದೆ.

ವಿಧಾನಸಭೆ ಚುನಾವಣೆ ನಂತರ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ಬೇಕಾಗುತ್ತದೆ. ಹೀಗಾಗಿ, ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಠಿಣ ನಿಲುವು ಬೇಡ. ಜೆಡಿಎಸ್‌ ಸಹ 30 ಮತ ಹೊಂದಿರುವುದರಿಂದ ಒಂದು ಸ್ಥಾನ ಬಿಟ್ಟುಕೊಡುವುದು ಸೂಕ್ತವೆಂಬ ಅಭಿಪ್ರಾಯವನ್ನು ಖರ್ಗೆ ಹೈಕಮಾಂಡ್‌ ಮುಂದಿಟ್ಟಿದ್ದಾರೆಂದು ಹೇಳಲಾಗಿದೆ. ನಮ್ಮ ಸಂಖ್ಯಾಬಲದ ಆಧಾರದಲ್ಲಿ ಎರಡು ಅಭ್ಯರ್ಥಿಗಳು ಗೆಲ್ಲಲಿದ್ದು ಅಷ್ಟಕ್ಕೆ ತೃಪ್ತಿ ಪಡುವುದು ಒಳ್ಳೆಯದು ಎಂದೂ ಹೇಳಿದ್ದಾರೆ ಎನ್ನಲಾಗಿದೆ
ಜೆಡಿಎಸ್‌ನ ರಾಜ್ಯಸಭೆ ಸದಸ್ಯ ಹಾಗೂ ಕಾಂಗ್ರೆಸ್‌ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿರುವ ಕುಪೇಂದ್ರರೆಡ್ಡಿ ಈ
ವಿಚಾರದಲ್ಲಿ ಸಮನ್ವಯಕಾರರಾಗಿದ್ದಾರೆ. ಜತೆಗೆ, ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರು ಈ ವಿಚಾರದಲ್ಲಿ ರಂಗಪ್ರವೇಶ ಮಾಡಿದ್ದು, ದೆಹಲಿಯ ಕಾಂಗ್ರೆಸ್‌ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿರುವ  ಬಿ.ಎಂ.ಫ‌ರೂಕ್‌ ಅವರನ್ನು ಮತ್ತೆ ಕಣಕ್ಕಿಳಿಸಿ ಗೆಲ್ಲಿಸಲು ಜೆಡಿಎಸ್‌ ತೀರ್ಮಾನಿಸಿದೆ. ಜತೆಗೆ ಪಕ್ಷದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಸಹ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ಸಹಮತ ವ್ಯಕ್ತಪಡಿಸಿದರೆ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬಹುದು. ಒಂದೊಮ್ಮೆ ಕಾಂಗ್ರೆಸ್‌ ಮೂರನೇ ಅಭ್ಯರ್ಥಿ ಹಾಕಿದರೆ ಜೆಡಿಎಸ್‌ ಪಕ್ಷೇತರ ಹಾಗೂ ಕಾಂಗ್ರೆಸ್‌ನಲ್ಲೇ ಇರುವ ಕೆಲವು ಅತೃಪ್ತ ಶಾಸಕರನ್ನು ತನ್ನತ್ತ ಸೆಳೆದು ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಂಡು ಮುಯ್ಯಿ ತೀರಿಸಿಕೊಳ್ಳುವ ತಂತ್ರಗಾರಿಕೆಯನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ಡಿ.ಕುಮಾರಸ್ವಾಮಿ ರೂಪಿಸಿದ್ದಾರೆ. ಈಗಾಗಲೇ ಕೆಲವು ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯಸಭೆಯ 1 ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದೇನೆ. ತಮ್ಮದೇ ಹಠದೊಂದಿಗೆ
ಕಾಂಗ್ರೆಸ್‌ನವರು 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಮುಂದೊಂದು ದಿನ ನಮ್ಮನ್ನು ಅವಲಂಬಿಸುವ ಕಾಲ ಬಂದೀತು. ಈ ವಿಷಯದಲ್ಲಿ ಮನವಿ ಮಾಡಿದ್ದೇನೆ ವಿನಾ ಭಿಕ್ಷೆ ಕೇಳಿಲ್ಲ. ಸ್ಪಂದಿಸುವುದು ಬಿಡುವುದು ಕಾಂಗ್ರೆಸ್‌ ನಾಯಕರಿಗೆ ಬಿಟ್ಟ ವಿಚಾರ.

● ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next