Advertisement

ಆಧುನಿಕ ಗೋಡ್ಸೆಗಳಿಂದ ಗಾಂಧಿ ಮೌಲ್ಯಗಳ ಹತ್ತಿಕ್ಕುವ ಕೆಲಸ

11:52 AM Feb 01, 2019 | |

ಸಾಗರ: ಗಾಂಧಿಯವರ ಮೌಲ್ಯಗಳನ್ನು ಆಧುನಿಕ ಗೋಡ್ಸೆಗಳು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಈ ಕಾಲದ ದೊಡ್ಡ ದುರಂತವಾಗಿದೆ ಎಂದು ಅಖೀಲ ಭಾರತ ವಿಚಾರವಾದಿಗಳ ಸಂಸ್ಥೆಯ ಅಧ್ಯಕ್ಷ ಮಂಗಳೂರಿನ ಪ್ರೊ| ನರೇಂದ್ರ ನಾಯಕ್‌ ಹೇಳಿದರು.

Advertisement

ನ‌ಗರದ ಶಂಕರ ಮಠದ ಸಭಾಭವನದಲ್ಲಿ ಸ್ಪಂದನ ರಂಗ ತಂಡ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯಕ್ಕಾಗಿ ಹೋರಾಡುವುದು, ಪ್ರಾಮಾಣಿಕವಾಗಿರುವುದು, ಜಾತ್ಯತೀತ ಮನೋಭಾವ ಹೊಂದಿರುವುದು ಇವೇ ಕೆಲವು ಗಾಂಧಿ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ವ್ಯಕ್ತಿಗಳನ್ನು ಹಿಟ್ಲಿಸ್ಟ್‌, ವೇಯಿrಂಗ್‌ ಲಿಸ್ಟ್‌ ಮಾಡಿಕೊಂಡು ಹತ್ಯೆ ಮಾಡಲಾಗುತ್ತಿದೆ. ತಮ್ಮ ಮತ್ತು ಅಧಿಕಾರದ ಮಧ್ಯೆ ಇರುವವರನ್ನು ಆಧುನಿಕ ಗೋಡ್ಸೆಗಳು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಎಂದರು.

ಅಖೀಲ ಭಾರತದ ವಿಚಾರವಾದಿಗಳ ಸಂಸ್ಥೆಯ ಉಪಾಧ್ಯಕ್ಷ ಡಾ| ನರೇಂದ್ರ ದಾಬೋಲ್ಕರ್‌, ಪನ್ಸಾರೆ ಮತ್ತು ಡಾ| ಎಂ.ಎಂ.ಕಲ್ಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ. ಡಾ| ಗಿರೀಶ್‌ ಕಾರ್ನಾಡ್‌, ಭಗವಾನ್‌, ನಿಡುಮಾಮಿಡಿಯ ಸ್ವಾಮಿ ಮತ್ತು ನಾನು ಅವರ ಪಟ್ಟಿಯಲ್ಲಿದ್ದೇವೆ. ಮೌಡ್ಯಗಳ ಅಪಾಯದ ಬಗ್ಗೆ ಮಾತನಾಡುತ್ತೇನೆ. ಆದರೆ ಗೋಡ್ಸೆಯ ಹೊಸ ಸಂತಾನದವರು ನನ್ನಂಥವನನ್ನು ಸಾಯಿಸುವ ಯತ್ನ ಮಾಡುತ್ತಾರೆ ಎಂದರು.

ಗಾಂಧಿಯವರು ಬೋಧಿಸಿದ್ದ ತತ್ವಾದರ್ಶಗಳನ್ನು ಅವರೇ ಹುಟ್ಟುಹಾಕಿದ್ದಲ್ಲ. ಅವರೇ ಹೇಳಿಕೊಂಡ ಹಾಗೇ ಅವರು ಪ್ರತಿಪಾದಿಸಿದ ಸಿದ್ಧಾಂತಗಳು ಬೆಟ್ಟಗುಡ್ಡಗಳಷ್ಟು ಹಳೆಯವು. ಆ ಎಲ್ಲ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಗುಣಗಳನ್ನು ಅಳವಡಿಸಿಕೊಳ್ಳುವ ಯತ್ನ ಅಗತ್ಯ ಎಂದರು.

Advertisement

ಕವಯಿತ್ರಿ ಮಾಧವಿ ಭಂಡಾರಿ ಕೆರೆಕೋಣ ಮಾತನಾಡಿ, ಪ್ರಚಾರಕ್ಕಾಗಿ ಇಂದು ಗಾಂಧಿಯವರ ದುರುಪಯೋಗವಾಗುತ್ತಿದೆ. ಗಾಂಧಿಯ ಹುಟ್ಟು ಮತ್ತು ಸಾವು ಸತತವಾಗಿ ನಡೆಯುತ್ತಿರುವ ಕ್ರಿಯೆಗಳಾಗಿವೆ. ಗಾಂಧಿ ಮೇಲು ನೋಟಕ್ಕೆ ಸರಳ. ಆದರೆ ಗಾಂಧಿಯಾಗುವುದು ಸರಳ ಸುಲಭವಲ್ಲ ಎಂದರು. ನಾಟಕ ಅಕಾಡೆಮಿಯ ಸದಸ್ಯೆ ಎಂ.ವಿ. ಪ್ರತಿಭಾ ರಾಘವೇಂದ್ರ ನಿರೂಪಿಸಿದರು. ನಂತರ ಸಹಜ ಶಿಕ್ಷಣ ರಂಗದವರಿಂದ ಡಾ| ಆರ್‌.ವಿ.ಭಂಡಾರಿ ರಚಿತ ‘ನಾನೂ ಗಾಂಧೀ ಆಗ್ತೀನೆ’ ಎಂಬ ನಾಟಕವನ್ನು ಆರ್‌. ಸಿದ್ಧಾರ್ಥ, ಶ್ರಾವ್ಯ, ಶ್ರೀಲಕ್ಷ್ಮಿ, ಅನ್ವಿತ, ಸೂಫಿಯಾ, ತಮನ್ನ, ಸಮೀರ್‌, ವೃಷಭ್‌ ಗೌತಮಿ ಮುಂತಾದ ಪುಟ್ಟ ಮಕ್ಕಳು ಅಭಿನಯಿಸಿದರು. ಸತೀಶ್‌ ಶೆಣೈ ಬೆಳಕಿನ ನಿರ್ವಹಣೆ ಮಾಡಿದರು. ಶಿವಕುಮಾರ ಉಳವಿ, ರಾಘವೇಂದ್ರ ಶೆಟ್ಟಿ, ಗುರುಮೂರ್ತಿ ವರದಾಮೂಲ, ಎಂ. ರಾಘವೇಂದ್ರ, ಅನಿತ ಇದ್ದರು.

ಚಿತ್ರಸಿರಿಯಲ್ಲಿ ಉಪನ್ಯಾಸ
ತಾಲೂಕಿನ ಸಿರಿವಂತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಚಿತ್ರಸಿರಿ’ ಸಂಸ್ಥೆಯ ವತಿಯಿಂದ ಗುರುವಾರ ಆಯೋಜಿಸಿದ್ದ ವೈಜ್ಞಾನಿಕ ಚಿಂತನೆ ವಿಕಸನ ಕಾರ್ಯಕ್ರಮದಲ್ಲಿ ಪ್ರೊ| ನರೇಂದ್ರ ನಾಯಕ್‌ ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಶ್ನಿಸದೇ ಇದ್ದರೆ ಮೌಡ್ಯ, ಮೂಢನಂಬಿಕೆಗಳಿಂದ ನಾವು ಯಾವಾಗಲೂ ವಂಚನೆಗೊಳಗಾಗುತ್ತಲೇ ಇರುತ್ತೇವೆ. ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಯತ್ನಿಸಬೇಕೇ ಹೊರತು ಮಾಟ ಮಂತ್ರ, ಪವಾಡಗಳ ಬೆನ್ನತ್ತಿ ಹೋಗಬಾರದು. ಅದರಲ್ಲ್ಲಿಯೂ ವಿದ್ಯಾರ್ಥಿ ಸಮೂಹ ಮೂಢನಂಬಿಕೆಗಳನ್ನು ಪ್ರಶ್ನಿಸುವ ವೈಚಾರಿಕತೆ ಬೆಳೆಸಿಕೊಳ್ಳಬೇಕು. ನಕಲಿ ಪವಾಡಗಳನ್ನು ವೈಜ್ಞಾನಿಕವಾಗಿ ಬಯಲಿಗೆಳೆಯಲು ಸಾಧ್ಯ ಎಂದರು. ಪ್ರಭಾರ ಮುಖ್ಯ ಶಿಕ್ಷಕಿ ಜ್ಯೂಲಿಯಟ್ ಫರ್ನಾಂಡಿಸ್‌ ‘ಚಿತ್ರಸಿರಿ’ಯ ಚಂದ್ರಶೇಖರ್‌, ಶಿಕ್ಷಕರಾದ ಕೆ.ಬಿ. ನಾಯ್ಕ, ಮಂಗಳಾನಾಯ್ಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next