ಮೈಸೂರು: ಪೊಲೀಸ್ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಿಬ್ಬಂದಿಗೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸಿಬ್ಬಂದಿಗೆ ಪಾಳಿಯಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆ, ಬೆಂಗಳೂರು ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸಿಬ್ಬಂದಿ, ಅಧಿಕಾರಿಗಳು ಮುಂಜಾಗ್ರತಾ ಕ್ರಮ ಅನುಸರಿಸಬೇಕು.
55 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲೇ ಕೆಲಸ ನಿರ್ವಹಿಸುವಂತೆ ಹಾಗೂ ಯುವಕರನ್ನು ಪಾಳಿಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಅಂತರ ಜಿಲ್ಲೆಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ನಿತ್ಯ 100ರಿಂದ 150 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಗಡಿ ಭಾಗದ ಗ್ರಾಮಾಂತರ ಪ್ರದೇಶಗಳ ಮೂಲಕ ನುಸುಳುತ್ತಿ ರುವುದು ಕಂಡುಬರುತ್ತಿದೆ. ಹೀಗಾಗಿ ನುಸುಳುಕೋರರ ಚಲನವಲನ ನಿಯಂತ್ರಿಸುತ್ತಿದ್ದೇವೆ ಎಂದರು.
ಕಾರ್ಖಾನೆ ತೆರೆಯಲು ಅನುಮತಿ: ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ ನೀಡಿದ್ದೇವೆ. ಜ್ಯುಬಿಲಿಯಂಟ್ ಫಾರ್ಮಾಸಿಟಿಕಲ್ ಕಂಪನಿಯಾಗಿದ್ದು, ಅದು ಬಾಗಿಲು ಹಾಕಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯಲು ಅನುಮತಿ ಕೇಳಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ವಾಗಿ ಬಂದ್ ಮಾಡಲಾಗಿತ್ತು. ತೆರೆಯುವ ಸಂದರ್ಭದಲ್ಲಿ ಹೇಗಿದೆ, ಅಲ್ಲಿನ ಪರಿಸ್ಥಿತಿ ಏನು ಎಂಬುದನ್ನು ನೋಡಬೇಕಿದೆ. ಅದನ್ನು ನೋಡಿ ಕೊಂಡು ಕಾರ್ಖಾನೆ ತೆರೆಯಲಾಗುವುದು ಎಂದರು.
ಕಾಂಗ್ರೆಸ್‌ಗೆ ಒಂದು ಪ್ರಶ್ನೆ: ಸುಪ್ರೀಂಕೋರ್ಟ್ ತೀರ್ಪಿನಿಂತೆ ನಮ್ಮ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಅದನ್ನು ವಿರೋಧ ಮಾಡುತ್ತಿದೆ. ಅವೆಲ್ಲವೂ ಕೂಡ ತನಿಖೆಯ ಭಾಗವಷ್ಟೇ. ಕಾಂಗ್ರೆಸ್‌ಗೆ ನನ್ನದೂ ಒಂದು ಪ್ರಶ್ನೆ ಇದೆ. ಕಳೆದ 15ದಿನಗಳ ಹಿಂದೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಯಾವುದೋ ಸ್ಟೇಟ್ ಮೆಂಟ್ ನೀಡಿದರು ಎಂದು ದೇಶಾದ್ಯಂತ ಅವರ ಮೇಲೆ ಹದಿನೈದು ನೂರಕ್ಕೂ ಅಧಿಕ ಎಫ್ಐಆರ್ ಹಾಕಿದ್ದೀರ ಆಗ ನಿಮಗೆ ಹೊಳೆಯಲಿಲ್ಲವೇ? ಅವರಿಗೆ ಕೇಳ್ಳೋ ಅಧಿಕಾರ ಇಲ್ಲವೆ? ಎಂದು ಪ್ರಶ್ನಿಸಿ ಈ ರೀತಿ ಏಕೆ ದ್ವಿಮುಖ ನೀತಿ ಅನುಸರಿಸುತ್ತೀರಿ ಎಂದು ಚಾಟಿ ಬೀಸಿದರು.