Advertisement

ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಣೆ; 25 ವಸತಿ ನಿಲಯಗಳಿಗಿಲ್ಲ ಸ್ವಂತ ಕಟ್ಟಡ

05:25 PM Jun 10, 2024 | |

ಉದಯವಾಣಿ ಸಮಾಚಾರ
ಗದಗ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್‌ ಪೂರ್ವ ಹಾಗೂ ನಂತರದ 62 ವಸತಿ ನಿಲಯಗಳ ಪೈಕಿ ಕೇವಲ 36 ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳಿದ್ದರೆ 25 ವಸತಿ ನಿಲಯಗಳು ಬಾಡಿಗೆ ಕಟ್ಟಡದ ಆಶ್ರಯ ಪಡೆದಿವೆ.

Advertisement

ಜಿಲ್ಲೆಯಲ್ಲಿ ಮೆಟ್ರಿಕ್‌ ಪೂರ್ವ 33 ನಿಲಯಗಳ ಪೈಕಿ 8 ವಸತಿ ನಿಲಯಗಳು ಹಾಗೂ ಮೆಟ್ರಿಕ್‌ ನಂತರದ 31 ವಸತಿ ನಿಲಯಗಳ ಪೈಕಿ 13 ವಸತಿ ನಿಲಯಗಳು ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿರುವ 25 ವಸತಿ ನಿಲಯಗಳ ಪೈಕಿ 14 ವಸತಿ ನಿಲಯಗಳು ವಿದ್ಯಾರ್ಥಿನಿಯರ ವಸತಿ ನಿಲಯಗಳಾಗಿವೆ.

ಮೆಟಿಕ್‌ ನಂತರದ ಬಾಲಕಿಯರ ವಸತಿ ನಿಲಯಗಳ ಪೈಕಿ ಗದಗ 2, ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ರೋಣ, ಬೆಳ್ಳಟ್ಟಿ ಹಾಗೂ ಹೊಂಬಳ ತಲಾ ಒಂದು ಸೇರಿ 8, ಮೆಟ್ರಿಕ್‌ ನಂತರದ ಬಾಲಕಿಯರ ಸ್ನಾತಕೋತ್ತರ ವಸತಿ ನಿಲಯ ಗದಗ ಮತ್ತು ನರಗುಂದ ಸೇರಿ 2, ಮೆಟ್ರಿಕ್‌ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯ 1 ಹಾಗೂ ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯ ಗದಗ, ಮುಂಡರಗಿ, ಶಿರಹಟ್ಟಿ ತಲಾ 3 ಸೇರಿ ಒಟ್ಟಾರೆ 14 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ
ನಿರ್ವಹಿಸುತ್ತಿವೆ.

ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ವಸತಿ ನಿಲಯಗಳ 1,325 ಬಾಲಕಿಯರು, ಮೆಟ್ರಿಕ್‌ ಪೂರ್ವ ಬಾಲಕಿಯರ  ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ 4 ವಸತಿ ನಿಲಯಗಳ ಪೈಕಿ 285 ವಿದ್ಯಾರ್ಥಿನಿಯರಿಗೆ ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.

ಬಾಡಿಗೆ ಕಟ್ಟಡಗಳಾಗಿದ್ದರಿಂದ ಭದ್ರತೆಯ ಅಭಾವ ವಿದ್ಯಾರ್ಥಿನಿಯರನ್ನು ಕಾಡುತ್ತಿರುವುದು ಮಾತ್ರ ಸುಳ್ಳಲ್ಲ. ಬಾಡಿಗೆ ಕಟ್ಟಡದಲ್ಲಿರುವ ವಸತಿ ನಿಲಯಗಳಿಗೆ ಕೆಲ ಕಡೆ ಕಾಂಪೌಂಡ್‌ ಇಲ್ಲದಿರುವುದು, ವಸತಿ ನಿಲಯಕ್ಕೆ ಅಂಟಿಕೊಂಡೇ ರಸ್ತೆ ಇದೆ. ಇಲಾಖೆಯಿಂದ ನೇಮಿಸಲ್ಪಟ್ಟ ರಾತ್ರಿ ಕಾವಲುಗಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಭದ್ರತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಜತೆಗೆ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಆದ್ಯತೆ ನೀಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಬೇಕಿದೆ.

Advertisement

ಮುಖ್ಯವಾಗಿ ಜಿಲ್ಲೆಯಲ್ಲಿ ಮೆಟ್ರಿಕ್‌ ನಂತರ, ಮೆಟ್ರಿಕ್‌ ಪೂರ್ವ ವಸತಿ ನಿಲಯಗಳ ಬಾಡಿಗೆ ಹಾಗೂ ಸ್ವಂತ ಕಟ್ಟಡಗಳ ಪೈಕಿ 33 ನಿಲಯ ಮೇಲ್ವಿಚಾರಕರು, ಕಿರಿಯ ಮೇಲ್ವಿಚಾರಕರು, 25 ಅಡುಗೆಯವರು, 99 ಅಡುಗೆ ಸಹಾಯಕರು, 25 ರಾತ್ರಿ ಕಾವಲುಗಾರರ ಕೊರತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದಷ್ಟು ಬೇಗ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳನ್ನು ಸ್ವಂತ ಕಟ್ಟಡಗಳಿಗೆ ವರ್ಗಾಯಿಸುವುದು ಸೇರಿದಂತೆ ಖಾಲಿ ಇರುವ
ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ 62 ವಸತಿ ನಿಲಯಗಳಿದ್ದು, ಆ ಪೈಕಿ 25 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕಿದೆ. ಈ
ಹಿನ್ನೆಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಕಲ್ಪಿಸುವಂತೆ ಇಲಾಖೆಗೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದ್ದ ಸಿಬ್ಬಂದಿ ಜತೆಗೆ ವಸತಿ ನಿಲಯಗಳನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ.
●ರವೀ ಗುಂಜೀಕರ್‌, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ

ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next