ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಮಾದಕ ವಸ್ತು ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಅಮೆಜಾನ್ ಕಂಪನಿ ನೌಕರನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ರಾಹುಲ್ ( 28) ಬಂಧಿತ. ಆರೋಪಿಯಿಂದ 10 ಲಕ್ಷ ರೂ. ಮೌ ಲ್ಯದ 200 ಗ್ರಾಂ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಕೇರಳದಿಂದ ಬಂದಿದ್ದ ರಾಹುಲ್ ಪರಪ್ಪನ ಅಗ್ರಹಾರದ ರಾಯಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅಮೆಜಾನ್ ಕಂಪನಿಯಲ್ಲಿ ಫುಡ್ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ರಜಾ ದಿನಗಳಲ್ಲಿ ವಾರಕ್ಕೊಮ್ಮೆ ವಿಶಾಖಪಟ್ಟಣಂಕ್ಕೆ ಹೋಗಿ ಕಡಿಮೆ ಬೆಲೆ ಹ್ಯಾಶಿಸ್ ಆಯಿಲ್ ಖರೀದಿಸಿ ನಗರಕ್ಕೆ ತರುತ್ತಿದ್ದ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ರೀತಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡು ತ್ತಿದ್ದ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ವಿಧಾನ ಪರಿಷತ್- ರಾಜ್ಯಸಭೆ ಚುನಾವಣೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ; ಸಿಎಂ ಬೊಮ್ಮಾಯಿ
ಆರೋಪಿ ಮೇ 10ರಂದು ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾಲಿಂಗೇಶ್ವರಬಂಡೆಯ ಮೂರನೇ ಅಡ್ಡ ರಸ್ತೆಯಲ್ಲಿ ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿ ಮಾದಕ ವಸ್ತು ವ್ಯಸನಿಗಳಿಗೆ ಹ್ಯಾಶಿಸ್ ಆಯಿಲ್ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.