Advertisement
ಕೂಲಿ ಕಾರ್ಮಿಕರಿಗೆ ಸರ್ಕಾರಿ ಬಸ್‌ಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಉಚಿತವಾಗಿ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಿದ್ದರ ಪರಿಣಾಮ ಬೆಂಗಳೂರು ಭಾನುವಾರ ಮತ್ತೂಂದು ವಲಸೆಗೆ ಸಜ್ಜಾಯಿತು. ಅದಕ್ಕೆ ಕೇಂದ್ರಬಿಂದುವಾಗಿದ್ದು ಮೆಜೆಸ್ಟಿಕ್. ಇದರಿಂದ ಲಾಕ್ ಡೌನ್ ಇಲ್ಲದ ಸಂದರ್ಭದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಹೇಗೆ ಇರುತ್ತದೋ, ಅದೇ ರೀತಿಯ ಜನಜಂಗುಳಿ, ನೂಕುನುಗ್ಗಲು ಕಂಡುಬಂತು.
Related Articles
Advertisement
ಕೆಎಸ್‌ಆರ್ಟಿಸಿಯ ಮೇಲಾಧಿಕಾರಿಗಳು ನೀಡಿದ ಸೂಚನೆಯನ್ನು ಪಾಲನೆ ಮಾಡುತ್ತಿದ್ದೇವೆ. ನಮ್ಮದು ಮಸ್ಕಿ ಡಿಪೋ ಬಸ್, ಬೆಳಗ್ಗೆಯೇ ಇಲ್ಲಿಗೆ ಬಂದಿದ್ದೇವು. ಮಕ್ಕಳು ಸೇರಿ 32 ಪ್ರಯಾಣಿಕರೊಂದಿಗೆ ಹೋಗುತ್ತಿದ್ದೇವೆ. ಸಾಮಾ ಜಿಕ ಅಂತರ ಹಾಗೂ ಇನ್ನಿತರೆ ಎಲ್ಲ ಸುರಕ್ಷತಾ ಕ್ರಮವನ್ನು ಅಧಿಕಾರಿಗಳ ಸೂಚನೆಯಂತೆ ಪಾಲನೆ ಮಾಡುತ್ತೇವೆ ಎಂದು ಚಾಲಕ ಅನಿಲ್ ಕುಮಾರ್ ಹೇಳಿದರು.
8 ಸಾವಿರ ಕೂಲಿ ಕಾರ್ಮಿಕರು ತವರಿಗೆ: ಸಾಮಾಜಿಕ ಅಂತರದ ನಿಯಮದಡಿ ಒಂದು ಬಸ್ಸಲ್ಲಿ ಮಕ್ಕಳು ಸಹಿತವಾಗಿ 25ರಿಂದ 30 ಜನರಿಗೆ ಅವಕಾಶ ನೀಡಲಾಗಿದೆ. ಒಂದೇ ಕುಟುಂಬದ ಸದಸ್ಯರು ಇದ್ದ ಸಂದರ್ಭದಲ್ಲಿ ಸಾಮಾಜಿಕ ಅಂತರದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಮೂವರು ಕುಳಿತುಕೊಳ್ಳಬಹುದಾದ ಸೀಟಿನಲ್ಲಿ ಇಬ್ಬರಿಗೆ ಮತ್ತು ಇಬ್ಬರು ಕುಳಿತುಕೊಳ್ಳ ಬಹುದಾದ ಸೀಟಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಒಂದೇ ಕುಟುಂಬದವರು ಮೂವರಿದ್ದರೆ ಒಂದೇ ಸೀಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕುರಿಸಲು ಸಾಧ್ಯವಿಲ್ಲ. ಹೀಗಾಗಿ ಕೆಲವೊಂದು ಜಿಲ್ಲೆಯ ಬಸ್ ಗಳಲ್ಲಿ ಸ್ವಲ್ಪ ಮಟ್ಟಿನ ಹೊಂದಾಣಿಕೆ ಮಾಡಬೇಕಾಗಿದೆ. ಸರಿ ಸುಮಾರು ಎಂಟು ಸಾವಿರ ಮಂದಿ ಒಂದೇ ದಿನ ಪ್ರಯಾಣ ಬೆಳೆಸಿದ್ದಾರೆ. ದಾರಿಮಧ್ಯೆ ಎಲ್ಲಿಯೂ ಬಸ್ ನಿಲ್ಲಿಸುವುದಿಲ್ಲ ( ತುರ್ತು ಕರೆ ಹೊರತುಪಡಿಸಿ) ಎಂದು ಪೊಲೀಸ್ ಅಧಿಕಾರಿ ಎಚ್. ಎನ್.ಧರ್ಮೇಂದ್ರ ಅವರು ಮಾಹಿತಿ ನೀಡಿದರು. ಸಂಸದ ತೇಜಸ್ವಿ ಸೂರ್ಯ ತಮ್ಮ ಬೆಂಬಲಿಗರೊಂದಿಗೆ ಮೆಜೆಸ್ಟಿಕ್‌ಗೆ ಬಂದು ಕೂಲಿ ಕಾರ್ಮಿಕರಿಗೆ ಊಟದ ಪೊಟ್ಟಣ ವಿತರಿಸಿದರು. ಅದೇ ರೀತಿ ವಿವಿಧ ಸಂಘ-ಸಂಸ್ಥೆಗಳೂ ಊಟ, ನೀರಿನ ಬಾಟಲಿ ಹಾಗೂ ಹಣ್ಣುಗಳನ್ನು ವಿತರಣೆ ಮಾಡಿದರು.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿದ್ದೆ. ಕೆಎಸ್‌ಆರ್ಟಿಸಿ, ಪೊಲೀಸ್, ಕಾರ್ಮಿಕ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಓಡಾಡಿ ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಬಸ್ ಸೇವೆ ಪ್ರಾರಂಭವಾಗಲಿದೆ. – ಎಸ್. ಸುರೇಶ್ ಕುಮಾರ್, ಸಚಿವರು.