Advertisement

ಉಡುಪಿಯಿಂದ ಮಧ್ಯಪ್ರದೇಶಕ್ಕೆ ಕಾರ್ಮಿಕರ ನಡಿಗೆ…!

09:38 PM Apr 30, 2020 | Sriram |

ಕುಂದಾಪುರ: ರೈಲ್ವೇ ಹಳಿ ಜೋಡಣೆಯ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಈಗ ಕೆಲಸವೂ ಇಲ್ಲದೆ, ಇರಲು ಸೂಕ್ತ ವ್ಯವಸ್ಥೆ, ಆಹಾರವಿಲ್ಲದ ಕಾರಣ ಉಡುಪಿಯಿಂದ ಸುಮಾರು 1,600 ಕಿ.ಮೀ. ಗೂ ಅಧಿಕ ದೂರದ ತನ್ನ ಊರಾದ ಮಧ್ಯಪ್ರದೇಶಕ್ಕೆ ನಡೆದುಕೊಂಡೇ ಹೋಗಲು ಮುಂದಾಗಿದ್ದಾರೆ. ಈ ವಿಚಾರವನ್ನು ಕುಂದಾಪುರ ಎಸಿ ಹಾಗೂ ಎಎಸ್‌ಪಿ ಗಮನಕ್ಕೆ ತಂದಿದ್ದು, ಅವರು ಸದ್ಯಕ್ಕೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

Advertisement

ಮಧ್ಯಪ್ರದೇಶ ಮೂಲದ 9 ಮಂದಿ ಕಾರ್ಮಿಕರು ಗುರುವಾರ ಉಡುಪಿಯಿಂದ ಹೊರಟಿದ್ದಾರೆ. ಕುಂದಾಪುರ ಮೂಲಕವಾಗಿ ನಡೆದುಕೊಂಡು ಹೋಗುತ್ತಿದ್ದ ಇವರನ್ನು ಹೆಮ್ಮಾಡಿಯಿಂದ ಮುಂದಕ್ಕೆ ಅರಾಟೆ ಸೇತುವೆ ಬಳಿ ಮಾತನಾಡಿಸಿದಾಗ ವಿಚಾರ ತಿಳಿಯಿತು.

“ನಾವು ರೈಲ್ವೇ ಹಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದು, ನಮ್ಮನ್ನು ಕೆಲಸಕ್ಕೆ ಕರೆಸಿಕೊಂಡ ಗುತ್ತಿಗೆದಾರ ಕಾನ್ಪುರದವನಾಗಿದ್ದು, ಅವನು ಈಗ ಊರಿಗೆ ಪರಾರಿಯಾಗಿದ್ದಾನೆ. ನಮಗೆ ಕಳೆದ ಒಂದು ತಿಂಗಳಿನಿಂದ ಕೆಲಸವಿಲ್ಲ. ಇರಲು ಸರಿಯಾದ ವ್ಯವಸ್ಥೆಯೂ ಇಲ್ಲ. ಊಟಕ್ಕೂ ಸಮಸ್ಯೆಯಾಗುತ್ತಿದೆ. ಬೇರೆ ದಾರಿ ಕಾಣದೇ ಈಗ ಊರಿಗೆ ಹೋಗಲು ನಿರ್ಧರಿಸಿದ್ದು, ನಡೆದುಕೊಂಡೇ ಹೋಗುತ್ತಿದ್ದೇವೆ’ ಎನ್ನುವುದಾಗಿ ಹೇಳುತ್ತಾರೆ ಕಾರ್ಮಿಕರು.

ಸ್ಪಂದಿಸಿದ ಎಸಿ, ಎಎಸ್‌ಪಿ
ಈ ವೇಳೆ ನೀವು ನಡೆದುಕೊಂಡು ಹೋದರೂ, ಶಿರೂರು ಚೆಕ್‌ ಪೋಸ್ಟ್‌ನಲ್ಲಿ ನಿಮ್ಮನ್ನು ಗಡಿ ದಾಟಲು ಬಿಡುವುದಿಲ್ಲ. ಅಲ್ಲಿ ತಪಾಸಣೆ ಮಾಡುತ್ತಾರೆ. ಹೋಗಬೇಡಿ ಎಂದು ಹೇಳಿದರೂ, ಕೇಳಲಿಲ್ಲ. ಈ ವಿಚಾರವನ್ನು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹಾಗೂ ಕುಂದಾಪುರ ಉಪ ವಿಭಾಗದ ಎಎಸ್‌ಪಿ ಹರಿರಾಂ ಶಂಕರ್‌ ಅವರ ಗಮನಕ್ಕೆ ತರಲಾಯಿತು.

ಎಎಸ್‌ಪಿ ಹರಿರಾಂ ಶಂಕರ್‌ ಅವರು ಕೂಡ ಎಸಿಯವರ ಗಮನಕ್ಕೆ ತಂದಿದ್ದು, ಜತೆಗೆ ಬೈಂದೂರು ಎಸ್‌ಐ ಸಂಗೀತಾ ಅವರಿಗೂ ಕರೆ ಮಾಡಿ ತಿಳಿಸಿದ್ದಾರೆ.

Advertisement

ದಿನಸಿ ಕಿಟ್‌ ನೆರವು
ಈ ಮಧ್ಯಪ್ರದೇಶ ಮೂಲದ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದುದು ನೋಡಿ, ಅವರನ್ನು ವಿಚಾರಿಸಿದ ಒಂದಿಬ್ಬರು ತಮ್ಮ ಬಳಿಯಿದ್ದ ಅಗತ್ಯದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ನೀಡಿದರು. ಇದೇ ವೇಳೆ ಅಲ್ಲಿಗೆ ಬಂದ ಪೊಲೀಸರು ಕೂಡ ತಮ್ಮ ಬಳಿಯಿದ್ದ ಆಹಾರದ ಪೊಟ್ಟಣವನ್ನು ನೀಡಿ ಸಹಕರಿಸಿದರು.

ಬಾರ್ಕೂರಿನಲ್ಲಿ ವ್ಯವಸ್ಥೆ
ಕುಂದಾಪುರದ ಎಸಿಯವರು ಮಧ್ಯಪ್ರದೇಶದ ಕಾರ್ಮಿಕರಿಗೆ ಬೈಂದೂರಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ತಹಶೀಲ್ದಾರ್‌ ಸೂಚಿಸಿದರೂ, ನಮ್ಮಲ್ಲಿನ ಕಾರ್ಮಿಕರ ಕ್ಯಾಂಪನ್ನು ಸ್ಥಗಿತಗೊಳಿಸಲಾಗುತ್ತಿದ್ದು ಇಲ್ಲಿ ವ್ಯವಸ್ಥೆ ಮಾಡುವುದು ಕಷ್ಟವೆಂದು ತಹಹಶೀಲ್ದಾರ್‌ ಬಿ.ಪಿ ಪೂಜಾರ್‌ ಜಾರಿಕೊಂಡಿದ್ದಾರೆ. ಬಳಿಕ ಬೈಂದೂರು ಎಸ್‌ಐ ಸಂಗೀತಾ ಅವರು ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಿ ಬಾರ್ಕೂರಿನಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next