ಗದಗ: ಮಹಾಮಾರಿ ಕೋವಿಡ್ ನಿಯಂತ್ರಣಕ್ಕಾಗಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ನಗರಸಭೆ ಪೌರ ಕಾರ್ಮಿಕರಿಗೆ ಶನಿವಾರ ಇಲ್ಲಿನ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ನಗರಸಭೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಮಧುಮೇಹ, ರಕ್ತದೊತ್ತಡ, ಎಲುಬು ಮತ್ತು ಕೀಲು ನೋವು ಸೇರಿದಂತೆ ಇನ್ನಿತರೆ ಕಾಯಿಲೆಗಳ ಬಗ್ಗೆಯೂ ತಪಾಸಣೆ ನಡೆಸಿದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸ್ಥಳದಲ್ಲೇ ಔಷಧೋಪಚಾರ ನೀಡಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಿದರು.
ಇದೇ ವೇಳೆ ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಪೌರ ಕಾರ್ಮಿಕರಿಂದ ಗಂಟಲು ದ್ರವ್ಯ ಮಾದರಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗಾಗಿ ಜಿಮ್ಸ್ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಮಹಾಮಾರಿ ಕೋವಿಡ್-19 ಸೋಂಕನ್ನು ಸರಳ ಪರಿಹಾರೋಪಾಯದ ಮೂಲಕ ತಡೆಗಟ್ಟಬಹುದು. ಕೋವಿಡ್ ಬಗ್ಗೆ ಜನರು ಹಾಗೂ ಪೌರ ಕಾರ್ಮಿಕರು ಭಯಬೀತರಾಗದೇ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೊಂಕಿನಿಂದ ಮುಕ್ತರಾಗಬೇಕು. ಅದಕ್ಕಾಗಿ ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜನ ಸಂದಣಿಯಿಂದ ದೂರವಿರಬೇಕು. ಸಾಮಾಜಿಕ ಅಂತರ ಮರೆಯಬಾರದು. ಇಂತಹ ಸಾಮಾನ್ಯ ಕಟ್ಟುಪಾಡುಗಳನ್ನು ಪಾಲಿಸಿದರೆ ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದರು.
ಎಸ್‌ಪಿ ಯತೀಶ ಎನ್. ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಪರಿಸರ ಅಭಿಯಂತರ ಗಿರೀಶ ತಳವಾರ, ವಿರೂಪಾಕ್ಷಪ್ಪ ರಾಮಗಿರಿ, ಎಂ.ಎಂ. ಮಕಾನದಾರ, ಎ.ವೈ. ದೊಡ್ಡಮನಿ, ಚಂದ್ರಶೇಖರ ಹಾದಿಮನಿ, ಕೆಂಚಪ್ಪ ಪೂಜಾರಿ, ಸಣ್ಣಪ್ಪ ಬೊಳಮ್ಮನವರ ಇದ್ದರು.