Advertisement

ಸುಳ್ಳು ಆರೋಪದಲ್ಲಿ ಕಾರ್ಮಿಕರ ಸಸ್ಪೆಂಡ್‌-ವಿಚಾರಣೆ: ವಿಜಯಭಾಸ್ಕರ್‌

05:21 PM Mar 17, 2022 | Shwetha M |

ವಿಜಯಪುರ: ಸುಳ್ಳು ಹಾಗೂ ಕ್ಷುಲ್ಲಕ ಆರೋಪ ಹೊರಿಸಿ ಅಲ್‌ ಅಮೀನ್‌ ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ 11 ನೌಕರರನ್ನು ಸಸ್ಪೆಂಡ್‌ ಮಾಡಿ ವಿಚಾರಣೆಗೆ ಆದೇಶಿಸಿದೆ. ಕಾಲೇಜು ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಾ. 28ರಂದು ಕಾಲೇಜು ಎದುರು ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿವಿಸಿ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್‌ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ನೀಡಿದ ಕಾರ್ಮಿಕರ ವಿರುದ್ಧ ಸುಳ್ಳು ಆರೋಪದ ಮೂಲಕ ಅಲ್‌ ಅಮೀನ್‌ ಮೆಡಿಕಲ್‌ ಕಾಲೇಜಿನ ಆಡಳಿತ ಮಂಡಳಿ ಕಳೆದ ಕೆಲ ತಿಂಗಳಿಂದ ಕಿರುಕುಳ ನೀಡುತ್ತದೆ. ಇದೀಗ ಕಾರ್ಮಿಕರನ್ನು ಸಸ್ಪೆಂಡ್‌ ಮಾಡಿದ್ದರಿಂದ ಅವರ ಕುಟುಂಬಕ್ಕೆ ಸಮಸ್ಯೆ ತಂದೊಡ್ಡಿದೆ. ಇದರೊಂದಿಗೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಏಪ್ರಿಲ್‌ನಿಂದ ವೇತನ ಹೆಚ್ಚಳದ ಬೇಡಿಕೆ ಇರಿಸಿರುವ ಕಾರಣ ಎಐಟಿಯುಸಿ ಸೇರಿರುವ ಅಲ್‌-ಅಮೀನ್‌ ಮೆಡಿಕಲ್‌ ಕಾಲೇಜು ಬೋಧಕೇತರ ನೌಕರರ ಸಂಘವನ್ನು ನಾಶ ಮಾಡುವ ದುರುದ್ದೇಶದಿಂದ ಆಡಳಿತ ಮಂಡಳಿ ಕಾರ್ಮಿಕ ವಿರೋಧ ಕ್ರಮಕ್ಕೆ ಮುಂದಾಗಿದೆ. ಕೂಡಲೇ ಕಾರ್ಮಿಕರನ್ನು ಸೇವೆಗೆ ಮರು ಸೇರ್ಪಡೆ ಮಾಡಿಕೊಂಡು ವಿಚಾರಣೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಹೊಸ ಕಾಯ್ದೆಯಂತೆ 300 ಜನ ಕಾರ್ಮಿಕರಿರುವ ಕಂಪನಿ ಆರ್ಥಿಕ ನಷ್ಟದಲ್ಲಿದ್ದರೆ ಮಾಲೀಕರು ಸಂಸ್ಥೆಯನ್ನು ಬಂದ್‌ ಮಾಡುವ ಅವಕಾಶ ನೀಡುವ ಮೂಲಕ ಕಾರ್ಪೋರೇಟ್‌ಗೆ ಮಣೆ ಹಾಕಿದ್ದು, ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ. ದೇಶದಲ್ಲಿ ಸಣ್ಣ ಉದ್ದಿಮೆಗಳಲ್ಲಿ ಸೇವೆ ಸಲ್ಲಿಸುವ ಶೇ. 80 ಕಾರ್ಮಿಕರನ್ನು ಬೀದಿಗೆ ತಳ್ಳಲು ಕಂಪನಿಗಳ ಮಾಲೀಕರು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ದೂರಿದರು.

16 ಸಾವಿರ ಸಣ್ಣ ಉದ್ದಿಮೆಗಳ ಮಾಲೀಕರು ತಮ್ಮ ಕಂಪನಿ ಬಂದ್‌ ಮಾಡುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Advertisement

ಅಲ್‌ ಅಮೀನ್‌ ಎನ್‌ಟಿಎಸ್‌ ಕಾರ್ಮಿಕ ಸಂಘದ ಅಧ್ಯಕ್ಷ ಮುಜಾಹಿದ್‌ ಅವಟಿ ಮಾತನಾಡಿ, ಅಲ್‌ ಅಮೀನ್‌ ಮೆಡಿಕಲ್‌ ಕಾಲೇಜು ಆಡಳಿತ ಮಂಡಳಿ ಪ್ರತಿ 2 ವರ್ಷಕ್ಕೆ ವೇತನ ಹೆಚ್ಚಳ ಮಾಡುತ್ತಿತ್ತು. ಕಾರ್ಮಿಕ ಮುಖಂಡರನ್ನು ಸಸ್ಪೆಂಡ್‌ ಮಾಡಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲದೇ ನಮ್ಮ 11 ಜನ ಮುಖಂಡರನ್ನು ಮರಳಿ ಸೇವೆಗೆ ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಕೆಎಸ್‌ಆರ್‌ಟಿಸಿ ನೌಕರರ ಸಂಘದ ಗೌರವಾಧ್ಯಕ್ಷ ಐ.ಎಂ. ಮುಷರೀಫ್‌, ಎಐಟಿವಿಸಿ ಕರ್ನಾಟಕ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರಕಾಶ ಹಿಟ್ಟಿನಹಳ್ಳಿ, ಅಲ್‌ ಅಮೀನ್‌ ಎನ್‌ಟಿಎಸ್‌ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಹಮದ್‌ ಅಶ್ರಫ್‌, ಕೆಎಸ್‌ಆರ್‌ ಟಿಸಿ ನೌಕರರ ಸಂಘದ ಅಧ್ಯಕ್ಷ ಅರುಣಕುಮಾರ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next