Advertisement

ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಗಮನ ನೀಡಲಿ

11:28 AM Mar 10, 2019 | Team Udayavani |

ಚಿತ್ರದುರ್ಗ: ಅಸಂಘಟಿತ ವಲಯದ ಹಮಾಲರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾಯಕ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಇಂತಹ ವರ್ಗಗಳಿಗೆ ಸರ್ಕಾರ ನೀಡಿರುವ ವಿಶೇಷ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಕರೆ ನೀಡಿದರು.

Advertisement

ಇಲ್ಲಿನ ಟೀಪು ಶಾದಿಮಹಲ್‌ನಲ್ಲಿ ಹೂವು, ಹಣ್ಣು, ತರಕಾರಿ ಹಮಾಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಮಾಲರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿವೆ. ಅವುಗಳನ್ನು ಬಳಸಿಕೊಂಡು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ಬಸವಾದಿ ಶರಣರು, ಬುದ್ಧ, ಬಸವ, ಏಸು, ಅಂಬೇಡ್ಕರ್‌, ಪೈಗಂಬರ್‌ ಕಾಯಕಕ್ಕೆ ಒತ್ತು ನೀಡಿದ್ದರು. ಅಂತಹ ಮಹಾಪುರುಷರ ಮಾರ್ಗದರ್ಶನದಲ್ಲಿ ಮುನ್ನಡೆದು ಮೋಸ, ಅನ್ಯಾಯ ಮಾಡದೆ, ಬೇರೆಯವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳದೆ ಕಾಯಕ ಮಾಡುವಂತೆ ತಿಳಿಸಿದರು. 

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹಮಾಲರಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರಗಳ ಸೌಲಭ್ಯ ಪಡೆಯಬೇಕಾದರೆ ಗುರುತಿನ ಚೀಟಿ ಇರಬೇಕು. ಪುಟ್‌ಪಾತ್‌ ವ್ಯಾಪಾರಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಂಡು ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದರು.

Advertisement

ಅಸಂಘಟಿತ ವಲಯದ 144 ವಿವಿಧ ರೀತಿಯ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.  ಕಾರ್ಮಿಕರ ಎಂಟು ಸಾವಿರ ಕೋಟಿ ರೂ. ಸೆಸ್‌ ಸರ್ಕಾರದಲ್ಲಿದ್ದು, ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸೆಸ್‌ ಹಣವನ್ನು ಕಾರ್ಮಿಕರಿಗೆ ನೀಡುವಂತೆ ಸರ್ಕಾರದ ಮೇಲೆ ಒತ್ತಡವಿದೆ. ಬಡ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಿಲ್ಲ ಎಂದು ಕೊರಗುವ ಕಾಲ ದೂರವಾಗಿದೆ. ಹತ್ತಿಪ್ಪತ್ತು ಲಕ್ಷ ರೂ.ಗಳನ್ನು ಉನ್ನತ ಶಿಕ್ಷಣಕ್ಕಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಗಾಂಧಿ ವೃತ್ತದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ನಗರಸಭೆಯವರು ಕೆಡವಿದ್ದಾರೆ. ಅಲ್ಲಿ ವ್ಯವಸ್ಥಿತವಾಗಿ ಸೂಪರ್‌ ಮಾರುಕಟ್ಟೆ ನಿರ್ಮಿಸಿ ಕೊಡುತ್ತೇವೆ. ರಸ್ತೆ ಅಗಲೀಕರಣಕ್ಕೆ ಮೂರು ಕೋಟಿ ರೂ.ಗಳನ್ನು ನೀಡಲಾಗಿದೆ. ಕೆಲವೊಮ್ಮೆ ಬಡವರಿಗೆ ಅವಕಾಶ ಸಿಗುವುದಿಲ್ಲ. ಸ್ಥಿತಿವಂತರೇ ಸರ್ಕಾರದ ಸವಲತ್ತುಗಳನ್ನು ಬಾಚಿಕೊಳ್ಳುತ್ತಾರೆ. ಕ್ರಮೇಣ ಎಲ್ಲವನ್ನೂ ಸರಿಪಡಿಸಿ ಅರ್ಹ ಬಡವರಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

ವಯಸ್ಸಾದವರು, ವಿಧವೆಯರನ್ನು ಮಕ್ಕಳು ನೋಡಿಕೊಳ್ಳದೆ ಮನೆಯಿಂದ ಹೊರ ಬಂದವರು ಹೀಗೆ ಅನೇಕರು ರಸ್ತೆ ಬದಿ ಕುಳಿತು ಹೂವು ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂಥವರಿಗೆ ಮಳಿಗೆ ನೀಡಬೇಕಾಗಿದೆ. ದುಡಿದು ತಿನ್ನಲು ಎಲ್ಲರಿಗೂ ಅವಕಾಶ ಮಾಡಿಕೊಡೋಣ. ಗುರುತಿನ ಚೀಟಿ ಇಲ್ಲದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿ ವರ್ಷ ನಗರಕ್ಕೆ ಮೂರರಿಂದ ನಾಲ್ಕು ಸಾವಿರ ಬಡವರು ಬರುತ್ತಾರೆ. ಹಾಗಾಗಿ ಮನೆಗಳ ಸಮಸ್ಯೆಯನ್ನು ಬಗೆಹರಿಸಲು ಆಗುತ್ತಿಲ್ಲ. ಎಲ್ಲಿಯೂ ಜಾಗ ಇಲ್ಲ. ಹೊಸದಾಗಿ ಖರೀ ದಿಸಬೇಕಿದೆ. ಅಂಬೇಡ್ಕರ್‌, ವಾಜಪೇಯಿ ಹೆಸರಿನ ಮೇಲೆ ಮನೆಗಳನ್ನು ನೀಡುತ್ತೇವೆ, ಹಳೆ ಮನೆ ಹಾಗೂ ನಿವೇಶನವಿದ್ದವರಿಗೆ ಮನೆ ಕಟ್ಟಿಕೊಳ್ಳಲು ಸಾಮಾನ್ಯ ವರ್ಗದವರಿಗೆ ಮೂರು ಲಕ್ಷ ರೂ., ಪರಿಶಿಷ್ಟ ಜಾತಿಗೆ ಮೂರೂವರೆ ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಮಹಮ್ಮದ್‌ ಅಹಮ್ಮದ್‌ ಪಾಷ, ನಗರಸಭೆ ಸದಸ್ಯರಾದ ಹರೀಶ್‌, ದಾವೂದ್‌, ಹಜರತ್‌ ಗರೀಬ್‌ ಷಾ ವಲಿ ದರ್ಗಾ ಕಮಿಟಿ ಆಡಳಿತಾಧಿಕಾರಿ ಸೈಯ್ಯದ್‌ ಅಫಾಖ್‌ ಅಹಮ್ಮದ್‌, ನಗರಸಭೆ ಮಾಜಿ ಸದಸ್ಯ ಅಶ್ಪಾಕ್‌ ಅಹಮ್ಮದ್‌, ಸಮಾಜಸೇವಕ ದಾದಾಪೀರ್‌, ಜಾನಪದ ಹಾಡುಗಾರ ಚಂದ್ರಪ್ಪ ಕಾಲ್ಕೆರೆ, ಹೂವು, ಹಣ್ಣು, ತರಕಾರಿ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸನಾವುಲ್ಲಾ ಇದ್ದರು. ಶ್ರೀನಿವಾಸ್‌ ಮಳಲಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next