Advertisement

ಕಾರ್ಮಿಕರ ಸುರಕ್ಷತೆ ಸಂಸ್ಥೆಯ ಜವಾಬ್ದಾರಿ: ನ್ಯಾ|ಹೊಸ್ಮನಿ

05:19 PM May 05, 2019 | pallavi |

ಬ್ಯಾಡಗಿ: ಪ್ರತಿಯೊಂದು ನೋಂದಾಯಿತ ಘಟಕಗಳು ಸಂಸ್ಥೆಯ ಕಾರ್ಮಿಕರಿಗೆ ಜೀವವಿಮೆ ಮಾಡಿಸುವುದು ಕಡ್ಡಾಯ. ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕದ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನಿ ಎಚ್ಚರಿಸಿದರು.

Advertisement

ಕಾರ್ಮಿಕ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಅರಿವು ನೆರವು ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪುರಸಭೆ ಆಶ್ರಯದಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೂಲಿ ಕಾರ್ಮಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆರೋಗ್ಯ ಸುರಕ್ಷತೆ ಹಾಗೂ ನಿರ್ದಿಷ್ಟವಾದ ಕೆಲಸಕ್ಕೆ ನಿಗದಿತ ವೇತನ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರನ್ನು ಅತ್ಯಂತ ಕೀಳಾಗಿ ಕಾಣುವಂತಹ ದೃಶ್ಯಗಳು ಸಾಮಾನ್ಯವಾಗಿವೆ ಎಂದು ಹೇಳಿದರು.

ಕೂಲಿ ಕಾರ್ಮಿಕರನ್ನು ದಿನದ 8 ತಾಸುಗಳಿಗೂ ಅಧಿಕ ಸಮಯ ದುಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಅವರ ಅವಶ್ಯಕತೆಯಿದ್ದಲ್ಲಿ ಕೂಲಿ ಕಾರ್ಮಿಕನ ಅನುಮತಿಯೊಂದಿಗೆ ಕೆಲಸಕ್ಕೆ ಕರೆದುಕೊಳ್ಳಬೇಕು ಮತ್ತು ಅದಕ್ಕೆ ಪ್ರತ್ಯೇಕವಾಗಿ ಕೂಲಿ ನೀಡಬೇಕಾಗುತ್ತದೆ. ಆದರೆ, ಇಂತಹ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಕೂಲಿ ಕಾರ್ಮಿಕರೆಂದರೆ ನಮ್ಮ ಗುಲಾಮರೆಂದು ಭಾವಿಸುವುದು ಕಾನೂನಿಗೆ ವಿರುದ್ಧ ನಿಲುವು. ಅವರನ್ನೂ ಸಹ ನಮ್ಮ ಸಹದ್ಯೋಗಿ ಎಂಬ ಭಾವನೆಗಳೊಂದಿಗೆ ಪ್ರತಿಯೊಬ್ಬರೂ ಕಾಣಬೇಕು. ಆದರೆ, ಬಹುತೇಕ ಕಾರ್ಖಾನೆಗಳು ಕೋಲ್ಡ ಸ್ಟೋರೇಜ್‌ ಪೌಡರ್‌ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಸುರಕ್ಷತೆಗಾಗಿ ಜೀವವಿಮೆ ಮಾಡಿಸದೇ ಇರುವಂತಹ ಪ್ರಕರಣಗಳಿವೆ.ನಮ್ಮ ಕೆಲಸ ಮಾಡಿ ನಮಗೆ ಆದಾಯ ನೀಡುವಂತಹ ವ್ಯಕ್ತಿಗಳ ಜೀವದ ಸುರಕ್ಷತೆ ಕೂಡ ನಮ್ಮ ಜವಾಬ್ದಾರಿಯಾಗಿರಲಿ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಸಿಂಧೂ ಪೋತದಾರ, ಪುರಸಭೆ ವ್ಯವಸ್ಥಾಪಕ ಎಲ್.ಶಂಕರ, ಆರೋಗ್ಯ ನಿರೀಕ್ಷಕ ರವಿಕೀರ್ತಿ, ನ್ಯಾಯವಾದಿಗಳಾದ ಎಂ.ಕೆ.ಕೋಡಿಹಳ್ಳಿ, ಸಿ.ಪಿ,ದೊಣ್ಣೇರ, ಭಾರತಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next