Advertisement

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

02:46 PM Jul 31, 2019 | Suhan S |

ತುಮಕೂರು: ಸಾರ್ವಜನಿಕ ವಲಯದ ರೈಲು, ಭದ್ರಾವತಿ ಉಕ್ಕು ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಹಾಗೂ ಕಾರ್ಮಿಕರಿಗೆ ಕನಿಷ್ಟ ಕೂಲಿ 24,000 ರೂ. ನಿಗದಿ, ಸ್ಕೀಂ ನೌಕರರ ಸೇವೆ ಕಾಯಂಗೆ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾರ್ಮಿಕ ಕಾನೂನುಗಳನ್ನು ಸಂಹಿತೆಗಳಾಗಿ ಪರಿವರ್ತಿಸುವುದು ಸಾಮಾಜಿಕ, ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ದೂರಿದರು.

ಖಾಸಗೀಕರಣ ನಿಲ್ಲಿಸಿ: ದೇಶದ ಜನರ ಶ್ರಮದ ದುಡ್ಡಿನಲ್ಲಿ ಕಟ್ಟಿದ ಸಾರ್ವಜನಿಕ ವಲಯದ ರೈಲ್ವೆ, ಬಿಎಸ್‌ಎನ್‌ಎಲ್, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಖಾಸಗೀಕರಣ ಮಾಡು ವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿ ರಕ್ಷಿಸಿ: ಎಲ್ಲಾ ಕಾರ್ಮಿಕರಿಗೆ ಕಡ್ಡಾಯ ಖಾತ್ರಿ ಪಿಂಚಣಿ ಯೋಜನೆ ರೂಪಿಸಬೇಕು. ಕನಿಷ್ಟ ಪಿಂಚಣಿ ಮಾಸಿಕ 6000 ರೂ.ನಿಗದಿಗೊಳಿಸಬೇಕು. ಬೀಡಿ, ಗಣಿ, ಸಿನಿಮಾ, ಮತ್ತಿತರೆ ಕಾರ್ಮಿಕರ ಸಂರಕ್ಷಣೆಗೆ ಇದ್ದ ಕಲ್ಯಾಣ ಮಂಡಳಿಯನ್ನು ನಾಶ ಮಾಡಲು ಹೊರಟಿರುವ ಕೇಂದ್ರದ ಕ್ರಮ ಖಂಡನೀಯ ಎಂದರು.

ಸೌಲಭ್ಯ ನೀಡಿ: ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲಾ ಮಾತನಾಡಿ, ಸ್ಕೀಂ ನೌಕರರಾದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತೆಯರನ್ನು ಕನಿಷ್ಟವೇತನ ವ್ಯಾಪ್ತಿಗೆ ತರದೆ ಸರ್ಕಾರ ವಂಚಿಸುತ್ತಿದೆ. ಸರ್ಕಾರ ಎಲ್ಲಾ ಸ್ಕೀಂ ನೌಕರರ ಸೇವೆ ಕಾಯಂ ಮಾಡುವ ಜೊತೆಗೆ ಅಗತ್ಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

Advertisement

ಕಾರ್ಮಿಕರಿಗೆ ರಕ್ಷಣೆ ನೀಡಿ: ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಹ್ಮಣ್ಯ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ 1996ರಲ್ಲಿ ಜಾರಿಯಾದ ಕಾರ್ಮಿಕ ಕಾನೂನು ಹಾಗೂ ಸೆಸ್‌ ಕಾಯ್ದೆಗಳನ್ನು ಹೊಸ ಕೋಡ್‌ಗಳಲ್ಲಿ ದುರ್ಬಲಗೊಳಿಸದೆ ಮತ್ತಷ್ಟು ಬಲಯುತಗೊಂಡು ನೋಂದಣಿಯಾಗಿರುವ 4 ಕೋಟಿ ಕಾರ್ಮಿಕರಿಗೆ ರಕ್ಷಣೆ ನೀಡಿ ಸಾಮಾಜಿಕ ಭದ್ರತೆ ಒದಗಿಸಬೇಕೆಂದರು. ಗ್ರಾಮ ಪಂಚಾಯ್ತಿ ನೌಕರರಿಗೆ ಸರ್ಕಾರ ನಿಗದಿ ಪಡಿಸಿರುವ ಕನಿಷ್ಟ ವೇತನ ನೀಡುತ್ತಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮನವಿ ಪತ್ರವನ್ನು ಅಪರ ಜಿಲ್ಲಾಧಿ ಕಾರಿ ಚನ್ನಬಸವಯ್ಯ ಅವರ ಮೂಲಕ ರಾಷ್ಟ್ರಪತಿ ಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್‌, ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಪಾರ್ವತಮ್ಮ, ಸುಜಿತ್‌ ನಾಯಕ್‌, ತುಮಕೂರು ತಾಲೂಕು ಸಿಐಟಿಯು ಕಾರ್ಯದರ್ಶಿ ರಂಗಧಾಮಯ್ಯ, ಶಿರಾ ಬೀಡಿ ಕಾರ್ಮಿಕರ ಸಂಘದ ನಿಸಾರ್‌ ಅಹಮದ್‌, ತಿಮ್ಮೇಗೌಡ, ಮಂಜಮ್ಮ, ಗುಬ್ಬಿ ಅನಸೂಯ, ಕುಣಿಗಲ್ನ ಶಾಂತಾಕುಮಾರಿ, ಬಿ.ಎಸ್‌.ಅನಸೂಯ, ಎಂಎಚ್ಐಎನ್‌ ರಘು, ಕಾಳೇಶ್ವರಿ ಕಾರ್ಮಿಕ ಸಂಘದ ಮುತ್ತುರಾಜು, ಲಕ್ಷ್ಮೀಕಾಂತ್‌, ಸಿದ್ದರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next