Advertisement

ಕೇಂದ್ರದ ವಿರುದ್ಧ ಕಾರ್ಮಿಕರ ಆಕ್ರೋಶ

05:36 PM Nov 27, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರ ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿ ಕಾರ್ಮಿಕರ ವಿವಿಧ ಸಂಘಟನೆಗಳನೇತೃತ್ವದಲ್ಲಿ ಗುರುವಾರ ನಗರದಲ್ಲಿ ಬೃಹತ್‌ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಮುಷ್ಕರ ನಡೆಸಲಾಯಿತು.

Advertisement

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದವು. ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ಕಾರ್ಮಿಕ, ರೈತ, ಜನ ವಿರೋಧಿ  ನೀತಿಗಳ ವಿರುದ್ಧ ಧಿಕ್ಕಾರ ಕೂಗಿ, ಕಾರ್ಮಿಕ ಕಾನೂನು ತಿದ್ದುಪಡಿ ನಿಲ್ಲಿಸಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಾಪಸ್‌ ಪಡೆಯಿರಿ ಎಂದು ಆಗ್ರಹ ಮಾಡಲಾಯಿತು.

ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಗಳ ಮುಖಂಡರು, ಕೋವಿಡ್‌-19 ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ,ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳಲುಮುಂದಾಗಿದೆ. ಇದಕ್ಕಾಗಿ ದೇಶದ ರೈತರು, ಕಾರ್ಮಿಕರು, ನೌಕರರು ಹಾಗೂ ಸಾರ್ವಜನಿಕ ಹಿತಕ್ಕೆ ಧಕ್ಕೆ ಆಗುವಂಥ ನಿರ್ಧಾರಗಳ ಮೂಲಕ ವಿವಿಧ ಕಾನೂನುಗಳಿಗೆ ತಿದ್ದುಪಡಿ ತಂದಿದೆ. ಇದರಿಂದ ದೇಶದ ಜನರ ಹಕ್ಕುಗಳ ದಮನ ಮಾಡುವ ಕೆಲಸ ನಡೆಸಿದೆ ಎಂದು ಹರಿಹಾಯ್ದರು.

ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿ ಬಂಡವಾಳಿಗರ ಪರ ನಿರ್ಧಾರಕ್ಕೆ ಮುಂದಾಗಿ, ದೇಶದ ಸಂಪತ್ತನ್ನು ಮಾರಾಟಕ್ಕಿಟ್ಟಿದೆ. ಇದರಿಂದ ಭವಿಷ್ಯದಲ್ಲಿ ದೇಶದ ಕಾರ್ಮಿಕರ ಬದುಕು ದುರ್ಬರಗೊಳ್ಳಲಿದೆ. ದೇಶ ಕಟ್ಟುವ ಕೆಲಸ ಮಾಡುವ ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದೆ. ಸಂಪತ್ತು ಸೃಷ್ಟಿಯಲ್ಲಿ ಭಾರತದ ಕಾರ್ಮಿಕರು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಕಾರ್ಮಿಕ ವಿರೋಧಿ ನಡೆಯಿಂದ ಹಿಂದೆ ಸರಿದು, ದೇಶದ ಹಿತದೃಷ್ಟಿಯಿಂದ ಕಾರ್ಮಿಕ ಪರ ನೀತಿಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ದೇಶದ ಬಡಜನತೆಯ ಸಾರಿಗೆ ವ್ಯವಸ್ಥೆಯಾದ ರೈಲ್ವೆ, ಬ್ಯಾಂಕ್‌ ವಿಮೆಯಂತಹ ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ಮಾಡಿ ಉದ್ಯೋಗ ಕಸಿಯವ ಕೆಲಸ ನಡೆಯುತ್ತಿದೆ. ಇಂಥ ಕರಾಳ ನೀತಿಗಳ ವಿರುದ್ಧ ಹೋರಾಟ ನಡೆಸುವ ಕಾರ್ಮಿಕರ ಪ್ರತಿಭಟನಾ ಹಕ್ಕನ್ನು ದಮನ ಮಾಡಲಾಗಿದೆ. ತಮ್ಮ ದುರಾಡಳಿತ ಮುಚ್ಚಿಕೊಳ್ಳಲು ದೇಶದ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಲ್ಲದೇ ಭಾರತವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ. ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಅಗತ್ಯಶುಲ್ಕ ವಿ ಧಿಸುವ ಮೂಲಕ ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಲ್ಲದೇ ದೇಶದ ಜನರ ಮೇಲೆ ಆರ್ಥಿಕ ಹೊರೆ ಹೇರಲು ಮುಂದಾಗಿದೆ.

Advertisement

ಕೃಷಿ ಕ್ಷೇತ್ರದ ಕಾರ್ಪೊರೇಟೀಕರಣಕ್ಕೆ ಮುಕ್ತ ಅವಕಾಶ ನೀಡುತ್ತವೆ. ಕೃಷಿ ಉತ್ಪನ್ನಗಳಿಗೆ ಯಾವುದೇ ಕನಿಷ್ಠ ಬೆಂಬಲ ಬೆಲೆಯ ಖಚಿತತೆ ನೀಡದೇ ಅಗತ್ಯ ವಸ್ತುಗಳ ಕಾಯ್ದೆ ಸಹ ಮಂಡಿಸಲಾಗಿದೆ. ಮತ್ತೂಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಸಾರ್ವಜನಿಕರೂ ಪರದಾಡುವಂತೆ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಭೀಮಶಿ ಕಲಾದಗಿ, ಗ್ರಾಮೀಣ ಬ್ಯಾಂಕ್‌ ಯೂನಿಯನ್‌ ರಾಷ್ಟ್ರೀಯ ಕಾರ್ಯದರ್ಶಿ ಜಿ.ಜಿ. ಗಾಂಧಿ , ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಹಂದ್ರಾಳ, ಆರ್‌.ಕೆ.ಎಸ್‌. ಜಿಲ್ಲಾ ಸಂಚಾಲಕ ಬಾಳುಜೇವೂರ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಆಶಾ ಸಂಘಟನೆಯ ಜಯಶ್ರೀ ಕಂಬಾರ, ಬಿಸಿಯೂಟ ಸಂಘಟನೆಯಿಂದ ಸುಮಂಗಲಾ ಆನಂದಶೆಟ್ಟಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಗಂಟೆಪ್ಪಗೋಳ. ಎಸ್‌.ಆರ್‌. ನಾಯಕ, ಭಾರತಿ ದೇವಕತೆ, ಅಂಬಿಕಾ ಒಳಸಂಗ, ಲೈಲಾ ಪಠಾಣ, ಸುರೇಖಾ ರಜಪೂತ, ಈರಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next