ನೆಲಮಂಗಲ: ರಾಜ್ಯದಲ್ಲಿ ಗುತ್ತಿಗೆ ಪದ್ಧತಿಯಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವ ಜತೆ ನೇರ ವೇತನ ವ್ಯವಸ್ಥೆ ಕಲ್ಪಿ ಸಲು ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುತ್ತಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಶೀಘ್ರದಲ್ಲಿ ನ್ಯಾಯ ದೊರಕಿಸಿ ಕೊಡಬೇಕು ಎಂದು ರಾಜ್ಯ ಪೌರಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಅಂಕಯ್ಯ ಮನವಿ ಮಾಡಿದರು.
ಪಟ್ಟಣದ ನಗರಸಭೆ ಕಚೇರಿಯ ಆವರಣದಲ್ಲಿ ರಾಜ್ಯ ನಗರಸಭೆ, ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಲಾಗುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಕನಸು ಸ್ವತ್ಛ ಭಾರತದಂತೆ ಪೌರಕಾರ್ಮಿಕರು ದುಡಿದರೂ, ನಮಗೆ ನೇಮಕಾತಿ ಭಾಗ್ಯವಿಲ್ಲ, ಪ್ರತಿನಿತ್ಯ ನಾವು ಬೀದಿಗಳನ್ನು ಸ್ವಚ್ಛತೆ ಮಾಡಿ ನಮ್ಮ ಮನೆಯಲ್ಲಿ ನೀರು ಇರದಿದ್ದರೂ, ಜನರ ಮನೆಗಳಿಗೆ ನೀರಿನ ಸಮಸ್ಯೆ ಬರ ದಂತೆ ದಿನಪೂರ್ತಿ ಕೆಲಸ ಮಾಡಿದರೂ ನಮಗೆ ಭದ್ರತೆ ಇಲ್ಲದಂತಾಗಿದೆ ಎಂದರು.
ನಮ್ಮ ಮಕ್ಕಳಿಗೆ ಉದ್ಯೋಗದ ಖಾತರಿ ಇಲ್ಲ. ನಾವು ಗುತ್ತಿಗೆ ಪೌರಕಾರ್ಮಿಕರಾಗಿಯೇ ಸಾಯುವ ಸ್ಥಿತಿ ಬಂದಿದ್ದು, ತಕ್ಷಣ ರಾಜ್ಯದಲ್ಲಿರುವ ಪ್ರತಿಯೊಬ್ಬ ಗುತ್ತಿಗೆ ನೌಕರನಿಗೆ ನೇಮಕಾತಿ ಮಾಡಬೇಕು ಅವರ ಕುಟುಂಬದ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳ ಬೇಕು ಎಂದು ಆಗ್ರಹಿಸಿದರು.
ಪೊಲೀಸರಿಂದ ಹಲ್ಲೆ ಆರೋಪ: ಗುತ್ತಿಗೆ ಪೌರಕಾರ್ಮಿಕರ ನೌಕರರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಲು ಮುಂದಾದಾಗ ಮನವಿಯನ್ನು ಸ್ವೀಕರಿಸದ ಪೊಲೀಸರು, ಗುತ್ತಿಗೆ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಕೆಲವರ ಕುತ್ತಿಗೆ ಪಟ್ಟಿಗೆ ಕೈ ಹಾಕಿ ಎಳೆ ದುಕೊಂಡು ಹೋಗಿದ್ದು, ನಮ್ಮ ಮೇಲೆ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದಾರೆ. ಇವರ ಮನೆಗಳ ಬೀದಿ ಸ್ವಚ್ಛ ಮಾಡಲು ನಾವು ಬೇಕು. ಇವರ ಮನೆಗಳಿಗೆ ನೀರು ಬಿಡಲು ನಾವು ಬೇಕು. ನಮ್ಮ ಸಂಕಷ್ಟದ ಮನವಿ ಸ್ವೀಕರಿಸಲು ಮಾತ್ರ ನಾವು ಬೇಡ. ನ್ಯಾಯಕ್ಕಾಗಿ ಪೊಲೀಸರ ಬಳಿ ಹೋದರೆ ನಮ್ಮ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷಮೆಯಾಚನೆ: ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ಗುತ್ತಿಗೆ ಪೌರಕಾರ್ಮಿಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವುದಲ್ಲದೆ, ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲು ಮುಂದಾದಾಗ ನಗರ ಪೊಲೀಸ್ ಇನ್ ಸ್ಪೆಕ್ಟರ್ ಎ.ವಿ ಕುಮಾರ್ ಪೌರಕಾರ್ಮಿಕ ಬಳಿ ಕ್ಷಮೆ ಯಾಚನೆ ಮಾಡಿದ್ದು, ಮುಂದೆ ಈ ರೀತಿಯ ಘಟ ನೆಯಾಗದಂತೆ ಹಾಗೂ ಜೊತೆ ನಿಂತು ಬೆಂಬಲ ನೀಡುವಂತೆ ತಿಳಿಸಿದ್ದು, ಪೊಲೀಸರ ಕ್ಷಮೆಯಾಚನೆಯಿಂದ ಪೌರಕಾರ್ಮಿಕರು ಶಾಂತವಾಗಿದ್ದಾರೆ.
ಮನವಿ ಸಲ್ಲಿಕೆ: ಕಾಯಂ ನೇಮಕಾತಿ ಮಾಡುವಂತೆ 100ಕ್ಕೂ ಹೆಚ್ಚು ಗುತ್ತಿಗೆ ನೌಕರರು ನಗರಸಭೆ ಆಯುಕ್ತ ರಾಜಶೇಖರ್‌ಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಆಯುಕ್ತರು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಗುತ್ತಿಗೆ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಮನೋಜ್, ಪೌರಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರು, ನಿರ್ದೇಶಕ ಮಂಜುನಾಥ್, ರಾಜು, ಪ್ರೇಮ, ಮಹೇಶ್ ಮತ್ತಿತರರಿದ್ದರು.