ಮಂಡ್ಯ: ಕಾಯಂ ನೌಕರರಿಗೆ ನೀಡುವ ವೇತನಶ್ರೇಣಿಯನ್ನು ಗುತ್ತಿಗೆ ನೌಕರರಿಗೂ ನೀಡುವಂತೆ ಸರ್ವೋತ್ಛ ನ್ಯಾಯಾಲಯ ಪಂಜಾಬ್ ಸರ್ಕಾರಕ್ಕೆ ತೀರ್ಪು ನೀಡಿರುವಂತೆ ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ಮಹಾ ಮಂಡಲದ ಜಿಲ್ಲಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಒತ್ತಾಯಿಸಿದರು.
ನಗರದ ಸೇವಾಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಂಡ್ಯ ಜಿಲ್ಲಾ ಘಟಕ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು. ಎಲ್ಲಾ ಇಲಾಖೆಗಳಲ್ಲಿ ಸರಿ ಸಮಾನವಾಗಿ ವೇತನ ಪಾವತಿಸಬೇಕು. ಇಎಸ್‌ಐ, ಪಿಎಫ್‌ಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲೇ ಎರಡೂವರೆ ಲಕ್ಷ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ನೌಕರರಿಗೂ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಮೂರು ವರ್ಗದಲ್ಲಿ ನೌಕರರು ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಕನಿಷ್ಟ ವೇತನ ನೀಡಲಾಗುತ್ತಿದೆ. ನಮ್ಮಲ್ಲಿರುವ ಹೊರ ಗುತ್ತಿಗೆ ನೌಕರರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಆಗ ಮಾತ್ರ ಹೋರಾಟಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಮೂರು ಹಂತಗಳಲ್ಲಿ ನೌಕರರ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದು, ದಿನಗೂಲಿ ನೌಕರರು ಭಾಗವಹಿಸುತ್ತಿದ್ದಾರೆ. ಕಾವೇರಿ ನೀರಾವರಿ ನಿಗಮ, ಸಣ್ಣ ನೀರಾವರಿ, ಪಶು ಸಂಗೋಪನೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷ ಸುರೇಶ್‌ಕುಮಾರ್, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ನರಸೇಗೌಡ, ಮೈಸೂರು ಜಿಲ್ಲಾಧ್ಯಕ್ಷ ಗಂಗಾಧರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಜೈಶಂಕರ್, ಟಾಸ್ಕ್ವರ್ಕ್ ನೌಕರರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕೆ.ಆರ್. ಪೇಟೆ ಅಧ್ಯಕ್ಷ ಕೃಷ್ಣ, ಜಿಲ್ಲಾ ಸಂಚಾಲಕ ಗ್ರಂಥಾಲಯ ಇಲಾಖೆ ಮಹ ದೇವು, ನೌಕರರ ಪ್ರತಿನಿಧಿಗಳಾದ ನಾಗೇಶ್, ಕೃಷ್ಣ ಮೂರ್ತಿ, ವಕೀಲ ಗುರುಪ್ರಸಾದ್ ಇದ್ದರು.