Advertisement

IT ದಿನಕ್ಕೆ 14 ತಾಸು ಕೆಲಸ? ಐಟಿ ಉದ್ಯೋಗಿಗಳಿಗೆ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವ

12:46 AM Jul 22, 2024 | Team Udayavani |

ಬೆಂಗಳೂರು: ಐಟಿ ಉದ್ಯೋಗಿಗಳ ಕೆಲಸದ ಅವಧಿಯನ್ನು ಈಗಿರುವ ದಿನಕ್ಕೆ 9-10 ತಾಸುಗಳಿಂದ ಗರಿಷ್ಠ 14 ತಾಸಿಗೆ ಹೆಚ್ಚಿಸುವ ಪ್ರಸ್ತಾವ ರಾಜ್ಯ ಸರಕಾರದ ಮುಂದಿದೆ.

Advertisement

ಈ ಸಂಬಂಧ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಸರಕಾರದಲ್ಲಿ ಚಿಂತನೆ ಆರಂಭಗೊಂಡಿದೆ. ಆದರೆ ಈ ಬಗ್ಗೆ ಐಟಿ ಉದ್ಯೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ತೀರ್ಮಾನವು ಐಟಿ ಕ್ಷೇತ್ರದಲ್ಲಿ ನಿರುದ್ಯೋಗಕ್ಕೆ ನಾಂದಿ ಹಾಡಲಿದೆ ಎಂಬ ಆತಂಕವನ್ನೂ ಹೊರಹಾಕಿದ್ದಾರೆ.

ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಇತ್ತೀಚೆಗಷ್ಟೇ ವಾರದಲ್ಲಿ 70 ತಾಸು ಕರ್ತವ್ಯ ನಿರ್ವಹಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಇದರಿಂದ ಬಲ ಬರಲಿದೆ. ಆದರೆ ನಾರಾಯಣ ಮೂರ್ತಿ ಹೇಳಿಕೆಗೆ ಐಟಿಯವರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ವಿಷಯ ತಣ್ಣಗಾಗಿದೆ ಅಂದುಕೊಳ್ಳುತ್ತಿರು ವಾಗಲೇ ಸದ್ದಿಲ್ಲದೆ ಇದರ ಜಾರಿಗೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.

ಒಂದು ವೇಳೆ ಸರಕಾರ ಈ ಸಂಬಂಧ “ಕರ್ನಾಟಕ ಶಾಪ್ಸ್‌ ಮತ್ತು ಕಮರ್ಷಿಯಲ್‌ ಎಸ್ಟಾಬ್ಲಿಶ್‌ಮೆಂಟ್‌ ಕಾಯ್ದೆ’ಗೆ ತಿದ್ದುಪಡಿ ತಂದದ್ದೇ ಆದಲ್ಲಿ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಈ ಹಿಂದೆ ಹೇಳಿದ್ದಂತೆ ವಾರಕ್ಕೆ 70 ತಾಸು ಕೆಲಸ ಮಾಡಬೇಕಾಗುತ್ತದೆ.

ಸರಕಾರದಲ್ಲಿ ಚಿಂತನೆ ಆರಂಭ ರಾಜ್ಯದಲ್ಲಿ ಐಟಿ ಉದ್ಯೋಗಿಗಳನ್ನು ದಿನಕ್ಕೆ 14 ಗಂಟೆ ದುಡಿಸಿಕೊಳ್ಳಲು ಅನುವಾಗುವಂತೆ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಸರಕಾರದಲ್ಲಿ ಚಿಂತನೆ ಆರಂಭಗೊಂಡಿದೆ. ನವಂಬರ್‌ನ ಬೆಂಗಳೂರು ಟೆಕ್‌ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಇತ್ತೀಚೆಗೆ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಉದ್ದಿಮೆದಾರರೊಂದಿಗೆ ನಡೆಸಿದ ಸಂವಾದದಲ್ಲಿ ಕೆಲವು ಉದ್ಯಮಿಗಳು ಪ್ರಸ್ತುತ ಇರುವ 10 ತಾಸುಗಳ ಸಾಮಾನ್ಯ ಕೆಲಸದ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Advertisement

ಹೌದು ಎಂದ ಕಾರ್ಮಿಕ ಇಲಾಖೆ!
ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಕಾರ್ಮಿಕ ಇಲಾಖೆಯ ಮುಂದೆ ಕೆಲಸದ ಅವಧಿಯನ್ನು ದಿನಕ್ಕೆ 14 ತಾಸುಗಳಿಗೆ ವಿಸ್ತರಿಸುವ ಪ್ರಸ್ತಾವ ಇದೆ’ ಎಂದು ಒಪ್ಪಿಕೊಂಡಿದ್ದಾರೆ. ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯಬೇಕಿದೆ. ಆದ್ದರಿಂದ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ.

ಸಚಿವ ಲಾಡ್‌ ಸಭೆ
ಈ ಮಧ್ಯೆ ಐಟಿ ಉದ್ಯೋಗಿಗಳ ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ ನಡೆಸಿದ್ದಾರೆ. ಅದರಲ್ಲಿ ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಭಾಗಿಯಾಗಿದ್ದರು ಎನ್ನಲಾಗಿದೆ.
ನಿರುದ್ಯೋಗಕ್ಕೆ ನಾಂದಿ: ಕೆಐಟಿಯು ರಾಜ್ಯದ ಐಟಿ ಉದ್ಯೋಗಿಗಳ ಸಂಘಟನೆ (ಕೆಐಟಿಯು) ಕಾರ್ಮಿಕ ಸಚಿವರನ್ನು ಭೇಟಿಯಾಗಿ ಸಭೆ ನಡೆಸಿ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿದೆ. ಐಟಿ ಉದ್ಯಮಿಗಳ ಪ್ರಸ್ತಾವನೆ ಒಪ್ಪಿಕೊಂಡರೆ ಈಗಿರುವ 3 ಪಾಳಿಗಳ ಪದ್ಧತಿ 2 ಪಾಳಿಗಳಿಗೆ ಬದಲಾಗಲಿದೆ. ಇದು ಐಟಿ ಉದ್ಯಮದಲ್ಲಿ ನಿರುದ್ಯೋಗಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಜತೆಗೆ ದೀರ್ಘ‌ ಕೆಲಸದ ಅವಧಿ ಉದ್ಯೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕೆಐಟಿಯು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next