ಅಳ್ನಾವರ: ನಮ್ಮನ್ನ ಇಲ್ಲೇ ಇಟ್ಕೊಂಡಾರ, ನಮ್ಮ ಮಕ್ಳು ಊರಾದ ಕಂಡ ಕಂಡ ಮಂದಿ ಮನ್ಯಾಗ ಬೇಡಕೊಂಡು ಉಣ್ಣಕತ್ತಾವು. ಒಮ್ಮೊಮ್ಮೆ ಉಣ್ಣಾಕ ಇಲ್ದ ಉಪವಾಸಬೀಳಾಕತ್ತಾವು. ನಾವು ಹ್ಯಾಂಗರ ಬದುಕತೀವಿ, ಅವ್ರ ಗತಿ ಏನು?ನಮ್ಮನ್ನು ನಮ್ಮೂರಿಗೆ ಕಳಿಸಿಕೊಟ್ಟು ಪುಣ್ಯಾ ಕಟ್ಟಕೊಳ್ರಿ..
ಇದು ಗೋವಾಕ್ಕೆ ದುಡಿಯಲಿಕ್ಕೆ ಹೋಗಿ ಮರಳಿ ತಮ್ಮೂರುಗಳಿಗೆ ತೆರಳುವ ಸಂದರ್ಭದಲ್ಲಿ ಅಳ್ನಾವರ ಚೆಕ್ ಪೋಸ್ಟ್ ದಲ್ಲಿ ತಡೆದು ಅಳ್ನಾವರ ವಸತಿ ನಿಲಯದಲ್ಲಿ ಕ್ವಾರಂಟೈನ್‌ದಲ್ಲಿರುವ ಕಾರ್ಮಿಕರ ಒಡಲಾಳದ ಮಾತುಗಳಿವು.
ಕಳೆದ ತಿಂಗಳು ಲಾಕ್‌ಡೌನ್ ಘೋಷಣೆ ಮಾಡಿದ ನಂತರ ಗೋವಾದಲ್ಲಿ ಕೆಲಸ ಬಂದ್ ಆಯ್ತು.ಉಪಜೀವನ ಸಾಗಿಸುವುದು ಕಠಿಣವಾಯ್ತು.ಊರಿಗೆ ಬರಬೇಕೆಂದರೆ ಯಾವುದೇ ಗಾಡಿಗಳ ವ್ಯವಸ್ಥೆಯಿರಲಿಲ್ಲ. ಹಿಂಗಾಗಿಗೋವಾದಿಂದಲೇ ನಡೆದುಕೊಂಡು ಬಂದಿದ್ದೇವೆ. ಇಲ್ಲಿಯ ವಸತಿ ನಿಲಯದಲ್ಲಿ ನಮ್ಮನ್ನಿಟ್ಟು ಹದಿನಾಲ್ಕು ದಿವಸಗಳಾಯ್ತು. ನಮ್ಮನ್ನುನಮ್ಮೂರುಗಳಿಗೆ ಕಳುಹಿಸುವಂತೆ ಕೇಳಿಕೊಂಡರೂ ಬಿಡುತ್ತಿಲ್ಲ. ದಿನಾಲು ದುಡಿದು ಹೊಟ್ಟೆ ತುಂಬಾ ಉಂಡು ಆರಾಮವಾಗಿ ನಿದ್ದೆ ಮಾಡುವ ನಮಗೆ ಇಲ್ಲಿ ಕಟ್ಟಿ ಹಾಕಿದಂತಾಗಿದೆ.
ಉಂಡ ಊಟವೂ ರುಚಿಸುತ್ತಿಲ್ಲಾ. ಮಲಗಿದರೆನಿದ್ದೆ ಬರುತ್ತಿಲ್ಲ. ಕಣ್ಣು ಮುಚ್ಚಿದ್ರೆ ಮನೆಯ ಸಣ್ಣ ಸಣ್ಣ ಮಕ್ಕಳು ಕಣ್ಣ ಮುಂದೆ ಬರ್ತಾವು. ಒಂದಿಷ್ಟು ನಿದ್ದೆಯ ಗುಳಿಗೆಯನ್ನಾದರೂ ಕೊಟ್ಟರೆ ನುಂಗಿ ನಿದ್ದೆ ಮಾಡ್ತೀವಿ ಎನ್ನುವ ಅವರ ಮಾತುಗಳಲ್ಲಿ ನೋವಿತ್ತು. ತಮ್ಮ ತಮ್ಮ ಊರುಗಳಿಗೆ ಹೋಗಬೇಕೆನ್ನು ತವಕವಿತ್ತು. ಮಕ್ಕಳನ್ನು ಹಾಸ್ಟೆಲ್‌ಗಳಲ್ಲಿ ಇಟ್ಟು ಗೋವಾಕ್ಕೆ ದುಡಿಯಲು ಹೋಗುವ ನಾವು ಪ್ರತಿವರ್ಷ ಮಕ್ಕಳ ರಜಾ ಅವಧಿಯಲ್ಲಿ ಮರಳಿ ಊರಿಗೆ ಬರುತ್ತೇವೆ. ಆದರೆ ಈ ಸಲ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ದೊಡ್ಡವರೆನ್ನುವರು ಯಾರೂ ಇಲ್ಲ. ಅವರು ಊಟಕ್ಕ ಅಕ್ಕಪಕ್ಕದ ಮನೆಯವರನ್ನೇ ಬೇಡುವಂತಾಗಿದೆ. ಅವರ ಊಟ-ನಿದ್ದೆಯ ಚಿಂತೆ ನಮಗೆ ಕಾಡುತ್ತಿದೆ. ಸಾಲಿಯೊಳಗ ಇದ್ರ ಚಿಂತಿ ಇರಂಗಿಲ್ಲ. ಈಗ ಸಾಲಿನೂ ಇಲ್ಲ ಮನ್ಯಾಗಮಂದಿನೂ ಇಲ್ಲ, ಹಡದ ಮಕ್ಕಳು ಏನ್‌ಮಾಡ್ಬೇಕು. ನಡು ನೀರಾಗ ನಿಂತಂಗ ಆಗೈತಿ. ನಮ್ಮ ಊರಿಗೆ ಕಳಸಿದ್ರ ಪುಣ್ಯಾ ಬರತೈತಿ ಎಂದುಈ ಗುಂಪಿನಲ್ಲಿರುವ ವಿಧವೆಯೊಬ್ಬಳು ಹೇಳುವ ಮಾತಿನಲ್ಲಿ ನೋವಿತ್ತು, ಅವಳ ಕಣ್ಣುಗಳುತೇವಗೊಂಡಿದ್ದವು.
ಈ ರೋಗ ಎಲ್ಲಿಂದರ ಬಂದೈತೋ ಎಪ್ಪಾ.. ನಾವೇನ ಪಾಪಾ ಮಾಡಿದೆವೆಯೋ..ನಮಗ ಇಲ್ಲಿ ತಂದ ಇಟ್ಟಾರ. ನಮಗ ಜೈಲಿನಲ್ಲಿ ಹಾಕಿದಂತಾಗೈತಿ. ಹೊರಗೆ ಹೋಗಿ ಅಡ್ಡಾಡಬೇಕಂದ್ರ ಪೊಲೀಸರು ಬಿಡುತ್ತಿಲ್ಲ. ರೊಟ್ಟಿ-ಖಾರಾ ತಿಂದುಂಡು ಓಡಾಡಿಕೊಂಡಿರುವ ನಮಗ ಇಲ್ಲಿನ ಊಟ ಊಂಡ ನಮ್ಮ ಕಸುವು ಕಡಿಮೆ ಆಗೈತಿ. ಯಾವಾಗ ಮನಿಗೇ ಹೋಗತೆವೋ ಅನ್ನೋ ಹಂಗ ಆಗೈತಿ. ನಮಗ ಇಲ್ಲಿಂದ್ರ ಬಿಟ್ರ ಸಾಕಾಗೈತಿ ಅನ್ನೋ ಅವರ ಮಾತುಗಳು ಅವರ ಕಷ್ಟವನ್ನು ತೋರ್ಪಡಿಸಿದವು.
-ಎಸ್.ಗೀತಾ