ಯಾದಗಿರಿ: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಕೋವಿಡ್ ಅಟ್ಟಹಾಸದಮಧ್ಯೆಯೇ ಗಡಿ ಜಿಲ್ಲೆ ಯಾದಗಿರಿಯಿಂದ ಜನರು ಕೂಲಿ ಕೆಲಸ ಅರಿಸಿ ನಿತ್ಯ ಐದು ನೂರಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೋವಿಡ್ ಆತಂಕ ಮತ್ತು ಕೆಲಸಗಳಿಲ್ಲದೇ ಬೆಂಗಳೂರು, ಪುಣೆ, ಹೈದರಾಬಾದ್, ಮುಂಬೈಯಿಂದ ಜಿಲ್ಲೆಗೆ ಸುಮಾರು 40 ಸಾವಿರದಷ್ಟು ಜನರು ಮರಳಿ ಗ್ರಾಮಗಳಿಗೆ ಸೇರಿದ್ದರು. ಪಡಿತರ ಚೀಟಿದಾರರಿಗೆ ಸರ್ಕಾರ ಉಚಿತ ಪಡಿತರ ಧಾನ್ಯಗಳನ್ನೇನೋ ನೀಡುತ್ತಿದೆ. ಆದರೆ ಕೈಯಲ್ಲಿ ಕೆಲಸವೂ ಇಲ್ಲ,ಸಮರ್ಪಕ ಕೂಲಿಯೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಗ್ರಾಮಗಳಿಂದ ಮತ್ತೆ ಮಹಾನಗರಗಳತ್ತ ಜನ ಮುಖ ಮಾಡುತ್ತಿದ್ದಾರೆ.
ಕೋವಿಡ್ ವೈರಸ್ ರುದ್ರನರ್ತನ ಮುಂದುವರಿಸಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ಬೆಂಗಳೂರು ವ್ಯಾಪ್ತಿಯಲ್ಲಿಯೇನಿತ್ಯ ಸಾವಿರಾರು ಪ್ರಕರಣಗಳು ಪತ್ತೆಯಾಗುತ್ತಿದ್ದುಇದ್ಯಾವುದನ್ನು ಲೆಕ್ಕಿಸದ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಪ್ರಸ್ತುತ ರೈಲು ಸಂಚಾರ ವಿರಳವಾಗಿದ್ದು, ಸುಮಾರು ಒಂದು ತಿಂಗಳಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ ಜನರು ತಮ್ಮ ಚಿಕ್ಕ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದಾರೆ. ಜಿಲ್ಲೆಯಿಂದ ನಿತ್ಯ ಅಂದಾಜು 20ರಿಂದ 22 ವಾಹನಗಳು ಸಂಚರಿಸುತ್ತಿರುವ ಕುರಿತು ಸಾರಿಗೆ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮೀಣ ಜನರು ಸ್ಥಳೀಯವಾಗಿಯೇ ಇದ್ದು ಕೆಲಸ ಮಾಡಲು ಖಾತ್ರಿ ಯೋಜನೆಯಡಿ ಮಾನವ ದಿನ ಸೃಷ್ಟಿಸಿ ಕೆಲಸ ನೀಡಲು ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತದ ಉನ್ನತ ಅಧಿಕಾರಿಗಳೂ ಗ್ರಾಮೀಣ ಜನರಿಗೆ ಇದ್ದಲ್ಲಿಯೇ ಕೆಲಸ ಕಲ್ಪಿಸಿ ಅನುಕೂಲ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಜನರು ಮಾತ್ರ ತಮಗೆ ಕೆಲಸ ಸಿಗುತ್ತಿಲ್ಲ ಎಂದು ಕೋವಿಡ್ ಸಂಕಷ್ಟದಲ್ಲಿಯೂ ಕೆಲಸ ಅರಿಸಿ ಗುಳೆ ಹೋಗುತ್ತಿರುವುದು ತಪ್ಪಿಲ್ಲ.
ಖಾತ್ರಿಯಲ್ಲಿ 18 ಲಕ್ಷ ಮಾನವ ದಿನ : ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಕಲ್ಯಾಣ ಪುನಶ್ಚೇತನ, ಬದು ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಸೆ.8ರ ವರೆಗೆ ಜಿಲ್ಲೆಯಲ್ಲಿ 18.38 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ಕೆಲಸ ನೀಡಲಾಗಿದ್ದು, 13312 ಜನ ಇಂದು ಕೂಲಿ ಕೆಲಸ ನಿರ್ವಹಿಸಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಜನರಿಗೆ ಇಲ್ಲಿಯೇ ಕೆಲಸ ನೀಡಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ಕೊರೊನಾ ಹಬ್ಬುತ್ತಿರುವ ಕಾಲದಲ್ಲಿ ಜನರು ಊರಲ್ಲಿಯೇ ಇದ್ದು ಕೆಲಸಮಾಡಲು ಅನುಕೂಲವಿದೆ. ಗ್ರಾಮೀಣ ಭಾಗದಲ್ಲಿಸೂಕ್ತ ಜಾಗೃತಿ ಮೂಡಿಸಿ ಜನರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸುವ ಕುರಿತು ಅಗತ್ಯ ಕ್ರಮವಹಿಸುವ ಬಗ್ಗೆ ಜಿಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
-ಡಾ. ರಾಗಪ್ರೀಯಾ ಆರ್. ಜಿಲ್ಲಾಧಿಕಾರಿ
ಇಲ್ಲಿದ್ದು ಏನ್ ಮಾಡೋದ್ರಿ,ಸರಿಯಾಗಿ ಕೂಲಿ ಸಿಗಲ್ಲ, ಬೆಂಗಳೂರಿನಲ್ಲಿ ದಿನಕ್ಕೆ 500ರಿಂದ 700 ಕೂಲಿ ಸಿಗುತ್ತದೆ. ಕೊರೊನಾ ಭಯವೂ ಇದೆ. ಆದರೆ ಹೊಟ್ಟೆ ಸುಮ್ಮನಿರಲ್ಲ ಅಲ್ವಾ, ಬೆಂಗಳೂರಿನಿಂದ ಬಂದು 3 ತಿಂಗಳಾಯಿತು. ಈಗ ಮತ್ತೆ ಕೆಲಸ ಸಿಗುವ ನಿರೀಕ್ಷೆಯಲ್ಲಿ ಹೊರಟಿದ್ದೇನೆ
-ಬಸವರಾಜ, ಕೂಲಿ ಕಾರ್ಮಿಕ
-ಅನೀಲ ಬಸೂದೆ