ಕೆಜಿಎಫ್: ಬೆಮೆಲ್ ರೈಲ್ವೆ ಕೋಚ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗದಲ್ಲಿ ಕಡಿತ ಮಾಡಿ, ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಗುತ್ತಿಗೆ ನೌಕರರು ಸೋಮವಾರ ಕೆಲಸ ಬಹಿಷ್ಕರಿಸಿ, ಬೆಮೆಲ್ ಕಾರ್ಖಾನೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಆಡಳಿತ ವರ್ಗ ವಿಫಲವಾಗಿರುವುದರಿಂದ ಐದು ದಿನಗಳ ಕಾಲ ವಿವಿಧ ರೀತಿಯ ಮುಷ್ಕರ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ.
ಬೆಮೆಲ್ ರೈಲ್ವೆ ಕೋಚ್‌ನಲ್ಲಿ ಸಾಧಾರಣವಾಗಿ ಗುತ್ತಿಗೆ ನೌಕರರಿಗೆ ನೀಡುತ್ತಿದ್ದ ಕೆಲಸದ ಅವಧಿಯನ್ನು ಹನ್ನೊಂದು ದಿನಕ್ಕೆ ಇಳಿಸಲು ಆಡಳಿತ ವರ್ಗ ನಿರ್ಧರಿಸಿದ ಕಾರಣ, ಕಾರ್ಮಿಕರು ಪ್ರತಿಭಟನೆಗೆ ಮುಂದಾದರು.
ಕಾರ್ಖಾನೆಯಲ್ಲಿ ಉತ್ಪಾದನೆ ಕುಸಿತಗೊಂಡಿದೆ ಎಂಬ ಕಾರಣವೊಡ್ಡಿ, ನಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿದೆ. ಕೆಲಸವನ್ನು ನಂಬಿ ಸಂಸಾರ ಪೋಷಣೆ ಮಾಡುತ್ತಿರುವ ನಾವುಗಳು ಕೇವಲ ಹನ್ನೊಂದು ದಿನದ ಸಂಬಳದಿಂದ ಸಂಸಾರವನ್ನು ಹೇಗೆ ನಿಭಾಯಿಸುವುದು. ಬಿಜಿಎಂಎಲ್ ಮುಚ್ಚಿದಾಗ, ಅದರ ನೌಕರರ ಕುಟುಂಬದವರಿಗೆ ಆಸರೆಯಾಗಬೇಕೆಂಬ ಹಿನ್ನೆಲೆಯಲ್ಲಿ ರೈಲ್ವೆ ಕೋಚ್ 2 ರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ಆಸಡ್ಡೆಯಿಂದ ಕಾಣಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ತಿಳಿಸಿದರು.
ಗುತ್ತಿಗೆ ಕಾರ್ಮಿಕರಿಗೆ ಇಷ್ಟೆಲ್ಲಾ ತೊಂದರೆಯಾಗುತ್ತಿದ್ದರೂ ಕ್ಷೇತ್ರದ ಶಾಸಕರಾಗಲಿ, ಸಂಸದರಾಗಲಿ ಸ್ಥಳಕ್ಕೆ ಆಗಮಿಸಿ ವಿಚಾರಿಸಿಲ್ಲ. ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಿಲ್ಲ. ಜನಪ್ರತಿನಿಧಿಗಳು ಕೂಡ ನಮ್ಮ ಬಗ್ಗೆ ತಾತ್ಸಾರ ಮನೋಭಾವ ತೋರಿದ್ದಾರೆ ಎಂದು ಕಾರ್ಮಿಕರು ದೂರಿದರು.
ಶೈಕ್ಷಣಿಕ ವರ್ಷ ಇದೀಗ ಆರಂಭವಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ಮ ಮಕ್ಕಳಿಗೆ ಫೀಸ್ ಕಟ್ಟುವುದು ಹೇಗೆ. ಸಂಸಾರ ನಿಭಾಯಿಸುವುದು ಹೇಗೆ ಎಂದು ನೌಕರರು ಮುಖಂಡರನ್ನು ಪ್ರಶ್ನಿಸಿದರು. ತಕ್ಷಣ ಕಾರ್ಖಾನೆಯ ಆಡಳಿತ ವರ್ಗ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮಂಗಳವಾರದಂದು ಸಂಸಾರ ಸಮೇತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.