ಕೊಪ್ಪಳ: ದುಡಿಮೆ ಅರಸಿ ದೂರದ ಊರುಗಳಿಗೆ ಗುಳೆ ಹೋಗಿ ಲಾಕ್‌ಡೌನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ ಜನರು ಮನೆ ಸೇರುವ ತವಕದಲ್ಲಿ ರಾತ್ರೋರಾತ್ರಿ ಸರ್ಕಾರಿ ಸಾರಿಗೆಯಲ್ಲಿ ತೆರಳಿದರೆ, ಇನ್ನೂ ಜಿಲ್ಲೆಯಲ್ಲಿ ಸಿಲುಕಿದ್ದ ದಕ್ಷಿಣ ಕನ್ನಡ ಮಂಗಳೂರು,ಉಲ್ಲಾಳದ 24 ಜನರನ್ನು ಜಿಲ್ಲಾಡಳಿತ ಸರ್ಕಾರಿ ಎಲ್ಲ ವ್ಯವಸ್ಥೆ ಮಾಡಿಸಿ ಶುಕ್ರವಾರ ರಾತ್ರಿಯೇ ಬೀಳ್ಕೊಟ್ಟಿತು.
ಹೌದು. ಕೋವಿಡ್ 19 ಉಲ್ಬಣದ ಹಿನ್ನೆಲೆಯಲ್ಲಿ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಅನ್ಯ ಕೆಲಸ ಹಾಗೂ ದುಡಿಮೆ ಅರಸಿ ಹೋಗಿದ್ದವರು ಅಲ್ಲಿಯೇ ಸಿಲುಕಿ ಹಲವು ಸಂಕಷ್ಟ ಎದುರಿಸಿದ್ದರು. ಕೆಲವರಂತೂ ನಡೆದುಕೊಂಡೇ ತಮ್ಮೂರಿಗೆ ಬಂದರು. ಕುಟುಂಬ ಸಮೇತ ತೆರಳಿದ್ದವರು ಊರಿಗೂ ಬರಲಾಗದೆ, ಅಲ್ಲೇ ಇರಲಾಗದೇ ಸಮಸ್ಯೆ ಎದುರಿಸುತ್ತಿದ್ದರು.
ಆಯಾ ಜಿಲ್ಲೆಯ ಸರ್ಕಾರಿ ನಿರಾಶ್ರಿತ ಕೇಂದ್ರ ಹಾಗೂ ವಸತಿ ನಿಲಯಗಳಲ್ಲಿ ಅವರನ್ನು ಇರಿಸಿ ಅಗತ್ಯ ಸೌಲಭ್ಯ ಕಲ್ಪಿಸಿತ್ತು. ಆದರೆ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿಕೊಡಿ, ಊರಲ್ಲೇ ಕೃಷಿಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಸರ್ಕಾರದ ಮೊರೆಯಿಟ್ಟ ಹಿನ್ನೆಲೆಯಲ್ಲಿ, ಸರ್ಕಾರವು ಮುಂಗಾರು ಹಂಗಾಮಿನಲ್ಲಿ ಕೃಷಿ ಕೆಲಸಕ್ಕೆ ತೊಂದರೆಯಾಗದಿರಲೆಂಬ ಉದ್ದೇಶದಿಂದ ಅಲ್ಲಲ್ಲಿ ಸಿಲುಕಿದ್ದ ಜನರನ್ನು ಅವರ ಸ್ವಂತ ಜಿಲ್ಲೆ, ಊರಿಗೆ ಕಳುಹಿಸಿಕೊಡಲು ಮುಂದಾಗಿದೆ.
ಜಿಲ್ಲೆಯಲ್ಲಿದ್ದರು 24 ಜನ: ಜಿಲ್ಲೆಯಲ್ಲಿ ಅನ್ಯ ಕೆಲಸ ಹಾಗೂ ದುಡಿಮೆ ಅರಸಿ ಬಂದಿದ್ದ ಮಂಗಳೂರು, ಉಲ್ಲಾಳ ಮೂಲದ 24 ಜನರು ಇಲ್ಲಿಯೇ ಸಿಲುಕಿಕೊಂಡಿದ್ದರು. ಜಿಲ್ಲಾಡಳಿತವು ಅವರನ್ನು ಕ್ವಾರಂಟೈನ್ ಮಾಡಿ ತಿಂಗಳ ಕಾಲ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿತ್ತು. ಸರ್ಕಾರದ ಆದೇಶ ಬಂದ ತಕ್ಷಣ 24 ಜನರನ್ನು ಆರೋಗ್ಯ ತಪಾಸಣೆ ಮಾಡಿಸಿ, ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ ಕೆಎಸ್ ಆರ್‌ಟಿಸಿ ಬಸ್‌ನಲ್ಲಿ ಶುಕ್ರವಾರ ರಾತ್ರಿಯೇ ಅವರ ಸ್ವಂತ ಜಿಲ್ಲೆಗೆ ಬೀಳ್ಕೊಟ್ಟಿತು.
ಅನ್ಯ ಜಿಲ್ಲೆಯಲ್ಲಿದ್ದ 482 ಜನ: ಜಿಲ್ಲಾಡಳಿತದ ಮಾಹಿತಿ ಪ್ರಕಾರ, ದುಡಿಮೆ ಹಾಗೂ ಇತರೆ ಕೆಲಸದ ನಿಮಿತ್ಯ ಅನ್ಯ ಜಿಲ್ಲೆಗಳಲ್ಲಿ 482 ಜನ ಸಿಲುಕಿದ್ದಾರೆ. ದಕ್ಷಿಣ ಕನ್ನಡದಲ್ಲಿ 338 ಜನ, ಧಾರವಾಡದಲ್ಲಿ-19, ತುಮಕೂರು-28, ಚಿಕ್ಕಮಗಳೂರು-22, ಉಡುಪಿ-13, ಬೆಂಗಳೂರು 62 ಜನ ಸೇರಿ ಒಟ್ಟು 6 ಜಿಲ್ಲೆಯಲ್ಲಿ 482 ಜನ ಸಿಲುಕಿದ್ದರು. ಇವರಲ್ಲಿ ಕೊಪ್ಪಳ-57, ಗಂಗಾವತಿ-05, ಕನಕಗಿರಿ-63, ಕಾರಟಗಿ-16, ಕುಷ್ಟಗಿ-280, ಯಲಬುರ್ಗಾ-61 ಜನರು ಸೇರಿ ಒಟ್ಟು 482 ಜನರು ಅನ್ಯ ಜಿಲ್ಲೆಗಳಲ್ಲಿ ಸಿಲುಕಿಕೊಂಡಿದ್ದರು.
200 ಜನ ಬಂದರು: ಅನ್ಯ ಜಿಲ್ಲೆಯಲ್ಲಿ ಸಿಲುಕಿದ್ದ 482 ಜನರ ಪೈಕಿ 200 ಜನರನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೊಪ್ಪಳಕ್ಕೆ ಕರೆ ತಂದಿದ್ದಾರೆ. ಪ್ರತಿ ಬಸ್‌ನಲ್ಲಿ 20ರಂತೆ 8ಕ್ಕೂ ಹೆಚ್ಚು ಬಸ್‌ಗಳು ಜಿಲ್ಲೆಗೆ ಆಗಮಿಸಿವೆ. ದಕ್ಷಿಣ ಕನ್ನಡ-153, ಧಾರವಾಡ- 19, ತುಮಕೂರು-28 ಸೇರಿ 200 ಜನ ಆಗಮಿಸಿದ್ದಾರೆ. ಬೆಳ್ತಂಗಡಿ, ಕುಕ್ಕೆಸುಬ್ರಹ್ಮಣ್ಯ ಸೇರಿ ಇತರೆ ಭಾಗದಿಂದ ಜನರು ಶುಕ್ರವಾರ ರಾತ್ರಿ ಊಟ ಮಾಡಿದ್ದು, ಬಿಟ್ಟರೆ ಕೊಪ್ಪಳದಲ್ಲಿ ಮಧ್ಯಾಹ್ನ 1ಕ್ಕೆ ಆಗಮಿಸಿದ್ದರು. ಮಕ್ಕಳು ಹಸಿವಿನಿಂದ ಬಳಲುತ್ತಿದ್ದವು. ಜಿಲ್ಲಾಡಳಿತ ಆರಂಭದಲ್ಲಿ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ದಾರಿಯಲ್ಲೂ ಊಟ ದೊರೆತಿರಲಿಲ್ಲ. ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದ ಕೆಲ ಹೊತ್ತಿನ ಬಳಿಕ ನಗರಸಭೆಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ನಂತರ ಜಿಲ್ಲಾಡಳಿತ ಅವರಿಗೆ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿತು.
–ದತ್ತು ಕಮ್ಮಾರ