ಮಂಡ್ಯ: ಗೆದ್ದಲು ಕಟ್ಟಿದ ಹುತ್ತಕ್ಕೆ ನಾಗರಹಾವು ಬಂದು ಸೇರಿಕೊಂಡಿದ್ದು, ಈಗ ನಮ್ಮನ್ನೇ ಕುಟುಕಲು ಮುಂದಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಜೆಡಿಎಸ್ ಬಂಡಾಯ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ವಾಗ್ಧಾಳಿ ನಡೆಸಿದರು.
ಶ್ರೀರಂಗಪಟ್ಟಣದ ಕ್ಷೇತ್ರದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಶಾಸಕ ರವೀಂದ್ರ ಶ್ರೀಕಂಠಯ್ಯ ವರ್ತನೆ ಬೇಸತ್ತು ರಾಜೀನಾಮೆ ನೀಡುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಶಾಸಕರು, ಯಾರೋ ಕಳ್ಳೆತ್ತುಗಳು ಪಕ್ಷ ಬಿಡುತ್ತಿದ್ದಾರೆ. ನಿಷ್ಠಾವಂತರು ಬಿಡುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಇಡೀ ಜೆಡಿಎಸ್ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಾಂಗ್ರೆಸ್ ನಿರ್ನಾಮಕ್ಕೆ ಶಾಸಕರೇ ಕಾರಣ: ನಿಷ್ಠಾವಂತ ಕಾರ್ಯಕರ್ತರು ಕಟ್ಟಿದ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡಿರುವ ರವೀಂದ್ರ ಶ್ರೀಕಂಠಯ್ಯ ಅವರು, ಈಗ ಕಾರ್ಯಕರ್ತರ ಬಗ್ಗೆ ಮಾತನಾಡುತ್ತಿದ್ದಾರೆ. ಇವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ನಿಷ್ಠೆಯಿಂದ ಇರಲಿಲ್ಲ. ಈಗಲೂ ಜೆಡಿಎಸ್ ಪಕ್ಷಕ್ಕೆ ನಿಷ್ಠೆ ತೋರಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬಿ ಫಾರಂ ಕೊಟ್ಟರೆ ಮಾತ್ರ ಕಾಂಗ್ರೆಸ್. ಇಲ್ಲದಿದ್ದರೆ ಬಂಡಾಯ ನಿಲ್ಲುತ್ತಿದ್ದರು. ಇವರ ತಂದೆ ಶ್ರೀಕಂಠಯ್ಯ ಕೂಡ ಇದೇ ರೀತಿ ಬಂದರು. ಅಂಬರೀಷ್ ಸ್ಪರ್ಧಿಸಿದ್ದಾಗ ಬಂಡಾಯ ನಿಲ್ಲುವ ಮೂಲಕ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು: ನಿಷ್ಠಾವಂತ ಕಾರ್ಯಕರ್ತರನ್ನು ಕಳ್ಳೆತ್ತುಗಳು ಎನ್ನುವ ಮೂಲಕ ಇಡೀ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಿಗೆ ಅವಮಾನ ಮಾಡಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ಷಮೆ ಕೇಳಬೇಕು. ಜೆಡಿಎಸ್ ವರಿಷ್ಠರು ಇವರ ಮನೆ ಬಾಗಿಲಿಗೆ ಹೋಗಿ ಟಿಕೆಟ್ ನೀಡಿದ್ದರಿಂದ ನಿಷ್ಠಾವಂತ ಕಾರ್ಯಕರ್ತರಿಂದಲೇ ಶಾಸಕರಾಗಿರುವುದು ಎಂಬುದನ್ನು ಮರೆಯಬಾರದು. ಇಂಥ ನಿಷ್ಠಾವಂತ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದವರು, ಈ ರೀತಿ ಮಾತನಾಡುತ್ತಾರೆ. ಕೂಡಲೇ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ಶಾಸಕರಿಗೆ ಬುದ್ಧಿ ಹೇಳುವ ಮೂಲಕ ಕ್ರಮ ಕೈಗೊಳ್ಳಬೇಕು. ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಅಲ್ಲದೆ, ನನ್ನ ಬಗ್ಗೆ ಶಾಸಕ, ಮಾಜಿ ಶಾಸಕ ಹಾಗೂ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅಪಪ್ರಚಾರ ಮಾಡುತ್ತಿದ್ದು, ಇಂಥ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅರಕೆರೆ ಸಿದ್ದರಾಜು, ಇಂಡುವಾಳು ಕಾಳೇಗೌಡ, ಕಾಳೇನಹಳ್ಳಿ ಗ್ರಾಪಂ ಸದಸ್ಯ ಲೋಕೇಶ್, ಯಲಿಯೂರು ಲೋಕೇಶ್, ಕಾರಸವಾಡಿ ಸುರೇಶ್, ಮಲ್ಲಿಗೆರೆ ಲೋಕೇಶ್ ಹಾಜರಿದ್ದರು.
ನಾಳೆ ಯಲಿಯೂರು ಗ್ರಾಮದಲ್ಲಿ ಕಾರ್ಯಕರ್ತರ ಸಭೆ : ನಾನು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಆದ್ದರಿಂದ ಈಗಾಗಲೇ ಕ್ಷೇತ್ರದ ಎಲ್ಲ ಹೋಬಳಿವಾರು ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು ಸಭೆಗಳನ್ನು ಮಾಡುತ್ತಿದ್ದಾರೆ. ಅದರಂತೆ ಮಾ.19 ರಂದು ಬೆಳಗ್ಗೆ 11ಕ್ಕೆ ಯಲಿಯೂರು ಗ್ರಾಮದ ಹಿರಿಯಮ್ಮದೇವಿ ದೇವಾಲಯದ ಆವರಣದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು ಆಗಮಿಸಬೇಕು ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.