ತಿ.ನರಸೀಪುರ: ಚುನಾಯಿತ ಪ್ರತಿನಿಧಿಗಳನ್ನು ವೇದಿಕೆಗೆ ಕರೆಯಲಿಲ್ಲ ಎಂಬ ನೆಪವೊಡ್ಡಿ ಪಟ್ಟಣದ ಕಾಲೇಜು ರಸ್ತೆಲ್ಲಿರುವ ವರುಣಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಕೆಲ ಕಾರ್ಯಕರ್ತರು ಕುರ್ಚಿಗಳನ್ನು ಮುರಿದು ಅಸಮಾಧಾನ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿರುವ ಘಟನೆ ನಡೆದಿದೆ.
ಚುನಾವಣಾ ಪ್ರಚಾರ ಕಚೇರಿಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ವೀಕ್ಷಕರು ಆಗಮಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಗುರುಮಲ್ಲಮ್ಮ ಸ್ವಾಗತಿಸುವ ವೇಳೆ ಕೆಲವು ಕಾರ್ಯಕರ್ತರು ಜಿಪಂ ಹಾಗೂ ತಾಪಂ ಚುನಾಯಿತ ಪ್ರತಿನಿಧಿಗಳನ್ನು ಸಭೆಗೆ ಕರೆದಿಲ್ಲ ಎಂದು ಪ್ರಶ್ನಿಸಿದರು. ಇದರಿಂದ ಆಗಲೇ ಸಭೆಯಲ್ಲಿ ಗದ್ದಲ ಆರಂಭವಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಭೆ ಕರೆಯುವ ವೇಳೆ ವರುಣಾ ಕ್ಷೇತ್ರದ ಎಲ್ಲಾ ಹೋಬಳಿ ಮುಖಂಡರನ್ನು ಸಭೆಗೆ ಏಕೆ ಕರೆದಿಲ್ಲ. ವಿವಿಧ ಮೋರ್ಚಾ ಪದಾಧಿಕಾರಿಗಳನ್ನು, ತಾಪಂ, ಜಿಪಂ ಪ್ರತಿನಿಧಿಗಳಿಗೆ ಪಕ್ಷದ ನಿಯಮಾನುಸಾರ ಸಭೆಯಲ್ಲಿ ಆಸನ ವ್ಯವಸ್ಥೆ ಮಾಡಿಲ್ಲ ಎಂದು ಪ್ರಶ್ನಿಸಿ, ಜತೆಗೆ ಅಭ್ಯರ್ಥಿಗೆ ಧಿಕ್ಕಾರ ಕೂಗಿ ಗಲಾಟೆ ಆರಂಭಿಸಿದರು.
ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಮೇಲೆ ಹಲ್ಲೆ ಮಾಡಲೂ ಮುಂದಾದರು. ನೀವು ಸುಮ್ಮನಿದ್ದಿದ್ದರೆ ವಿಜಯೇಂದ್ರ ಅವರಿಗೆ ಟಿಕೆಟ್ ಸಿಗುತ್ತಿತ್ತು. ನೀವು ಟಿಕೆಟ್ ಕೇಳಿದ್ದರಿಂದಲೇ ವರುಣಾದಲ್ಲಿ ಬಿಜೆಪಿ ಗೆಲ್ಲುವ ಕ್ಷೇತ್ರ ಹಾಳಾಯಿತು.
ಕಾರ್ಯಕರ್ತರ ಮನೆ ಹಾಳಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಭ್ಯರ್ಥಿ ನಿವಾಸದೆದುರು ಗಲಾಟೆ ಮಾಡಲು ಮುಂದಾದ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಆಕ್ರೋಶಭರಿತರನ್ನು ಸಮಾಧಾನಪಡಿಸಿದರೆನ್ನಲಾಗಿದೆ.
ಕೆಲವರು ಕಚೇರಿಯಲ್ಲಿ ಕುರ್ಚಿಗಳನ್ನು ಎಸೆದಿದ್ದಾರೆ. ಈ ಬಗ್ಗೆ ನಾನು ಯಾವುದೇ ದೂರು ನೀಡಿಲ್ಲ. ಪಕ್ಷದ ಕಾರ್ಯಕರ್ತರಾಗಿದ್ದಲ್ಲಿ ವರಿಷ್ಠರ ಗಮನಕ್ಕೆ ತರುತ್ತೇನೆ. ಯಾವುದೇ ರಕ್ಷಣೆಗೂ ನಾನು ಮನವಿ ಮಾಡಿಲ್ಲ. ಪಕ್ಷ ಟಿಕೆಟ್ ನೀಡಿದೆ ಅಭ್ಯರ್ಥಿಯಾಗಿ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸುತ್ತೇನೆ.
-ತೋಟದಪ್ಪ ಬಸವರಾಜು, ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ