ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಕಾರ್ಮಿಕ ಕರಿಯಪ್ಪ ಮಾದರ್ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು.
ನಂತರ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಮೆರವಣಿಗೆ ನಡೆಸಿ ಕಾರ್ಮಿಕ ಕರಿಯಪ್ಪ ಮಾದರ್ ಸಾವಿಗೆ ನ್ಯಾಯ ಕೊಡಿಸ
ಬೇಕೆಂದು ಆಗ್ರಹಿಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಕ್ವಾರಿ ಮಾಲಿಕನನ್ನು ಬಂಧಿಸಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲಿಕ ಉಮೇಶ್‌ನನ್ನು ಬಿಟ್ಟು ಮೇಸ್ತ್ರಿ ಪ್ರದೀಪ್‌ನನ್ನು ಬಂಧಿಸಲಾಗಿದೆ. ಮಾಲಿಕ ಉಮೇಶ್‌ನನ್ನು ನಾಳೆಯೊಳಗೆ ಬಂಧಿಸಬೇಕು. ಉಮೇಶ್ ಪರವಾನಗಿ ಪಡೆಯದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದ್ದು, ಪರವಾನಗಿ ಇಲ್ಲದಿದ್ದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪರವಾನಗಿ ಇದ್ದರೆ ಅದನ್ನು ರದ್ದುಪಡಿಸಬೇಕು. ಜಿಲ್ಲಾದ್ಯಂತ ಪದೇ ಪದೆ ಜೀತ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕೂಡಲೇ ಜಾಗೃತ ದಳ ಸಮಿತಿ ರಚನೆ ಮಾಡಿ ಜಿಲ್ಲೆಯಲ್ಲಿರುವ ಕಲ್ಲು ಕ್ವಾರಿಗಳು, ತೋಟಗಳು, ಆಲೆಮನೆಗಳು, ಇಟ್ಟಿಗೆ ಕಾರ್ಖಾನೆಗಳಲ್ಲಿ ಸರ್ವೆ ನಡೆಸಿ ಜೀತದಾಳುಗಳನ್ನು ಮುಕ್ತಿಗೊಳಿಸಬೇಕು.
ಪ್ರಕರಣವನ್ನು ಶ್ರೀರಂಗಪಟ್ಟಣ ಡಿವೈಎಸ್‌ಪಿ ರವೀಂದ್ರನಾಥ್‌ಗೆ ವಹಿಸಬಾರದು. ಅವರು ಗಣಿ ಮಾಲೀಕರೊಂದಿಗೆ ಶಾಮೀಲಾಗಿರುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
15ರಂದು ಪ್ರತಿಭಟನಾ ಮೆರವಣಿಗೆ: ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ಭವನದಲ್ಲಿ ಬಹುಜನ ವಿದ್ಯಾರ್ಥಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಹಾಗೂ ಸಿಐಟಿಯುನ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅ.15ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧಾರ ಕೈಗೊಂಡರು.
ಕರಾದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಜಿಲ್ಲೆಯಲ್ಲಿ ಪದೇ ಪದೆ ಜೀತ ಪದ್ಧತಿಯ ಪ್ರಕರಣಗಳು ಮರುಕಳುಹಿಸುತ್ತಿವೆ. ಇದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಗಂಭೀರವಾಗಿ ತೆಗೆದುಕೊಂಡು ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.