ಮೈಸೂರು: ಪೊಲೀಸರು ರಾಜಕೀಯ ಪ್ರಭಾವ, ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕತೆಯಿಂದ ನಾಡಿನ ಪ್ರಜೆಗಳ ರಕ್ಷಣೆಗಾಗಿ ಕಾರ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಸೋಮವಾರ ಏರ್ಪಡಿಸಿದ್ದ 41ನೇ ತಂಡದ ಆರಕ್ಷಕ ಉಪನಿರೀಕ್ಷಕರು (ಸಿವಿಲ್) ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆಗೆ ದೊಡ್ಡ ಹೆಸರು ಇದೆ. ಅನೇಕ ಹಿರಿಯ ಅಧಿಕಾರಿಗಳು ಈ ಇಲಾಖೆಗೆ ದೊಡ್ಡ ಹೆಸರು ತಂದು ಕೊಟ್ಟು ಹೋಗಿದ್ದಾರೆ. ತರಬೇತಿ ಸಂದರ್ಭದಲ್ಲಿ ಶಿಸ್ತು, ಸಂಯಮ, ನಡವಳಿಕೆ, ಆದರ್ಶಗಳನ್ನು ಹೇಳಿಕೊಡಲಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕತೆಯಿಂದ ನಾಡಿನ ಪ್ರಜೆಗಳ ರಕ್ಷಣೆಗೆ ಸಮರ್ಥವಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಕಾನೂನು ವ್ಯಾಪ್ತಿ ಮೀರಿ ಯಾವ ಕೆಲಸವನ್ನೂ ಮಾಡಬೇಡಿ, ಎಷ್ಟೇ ಪ್ರಭಾವ ಬೀರಿದರೂ ಅದನ್ನು ಧಿಕ್ಕರಿಸಿ, ದಕ್ಷತೆಯಿಂದ ಕೆಲಸ ಮಾಡಲು ಶಪಥ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಪೊಲೀಸರನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ. ಸ್ಥಳ ನಿಯುಕ್ತಿ ಮಾಡುವಾಗಲೇ ರಾಜಕೀಯ ಪ್ರಭಾವ ಬೀರಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ವೈಯಕ್ತಿಕ ಹಾಗೂ ಇಲಾಖೆಯ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿ, ಇಲಾಖೆಯಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವ ಮೂಲಕ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು. ಗೃಹ ಸಚಿವ ಎಂ.ಬಿ.ಪಾಟೀಲ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು,ತರಬೇತಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪದಮ್ ಕುಮಾರ್ ಗರ್ಗ್, ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ರವಿ ಎಸ್., ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್ ಹಾಜರಿದ್ದರು.
ಆಕರ್ಷಕ ಪಥ ಸಂಚಲನ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಶ್ವಾರೋಹಿ ಪಡೆಯೊಂದಿಗೆ ಬರಮಾಡಿಕೊಳ್ಳಲಾಯಿತು. ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಂಡಗಳ ಪರಿವೀಕ್ಷಣೆ ಮಾಡಿದರು. ಆಕರ್ಷಕ ಪಥ ಸಂಚಲನದ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು.