Advertisement

ನೀರು ಹಿಡಿವುದೇ ಉದ್ಯೋಗ

12:35 PM Apr 16, 2018 | |

ಬೆಂಗಳೂರು: ಕೆಲಸಕ್ಕೆ ತಡವಾಗಿದೆ ಎಂಬ ಒತ್ತಡದ ನಡುವೆಯೂ ಅತುರ ಆತುರವಾಗಿ ನೀರು ಹಿಡಿಯುತ್ತಿರುವ ಉದ್ಯೋಗಿಗಳು, ನೀರು ಬರುವ ದಿನ ಸ್ವಲ್ಪ ಯಾಮಾರಿದರೂ ಒಂದು ವಾರ ನೀರಿಲ್ಲ ಎಂಬ ಭಯ, ದುಬಾರಿ ಬೆಲೆಗೆ ಟ್ಯಾಂಕರ್‌ ನೀರು ಖರೀದಿಸಬೇಕಾದ ಅನಿವಾರ್ಯತೆ.

Advertisement

ಗಾರ್ಮೆಂಟ್ಸ್‌ ಕಾರ್ಮಿಕರು, ಕಟ್ಟಡ ಕೆಲಸಗಾರರು ಹಾಗೂ ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೊಮ್ಮನಹಳ್ಳಿ ವಲಯದ ಹಲವಾರು ಭಾಗಗಳಲ್ಲಿ ಕಂಡುಬರುವ ದೃಶ್ಯಗಳಿವು. ಬೊಮ್ಮನಹಳ್ಳಿ ವಲಯದ ಕೆಲವೊಂದು ಪ್ರತಿಷ್ಠಿàತ ಬಡಾವಣೆಗಳನ್ನು ಹೊರತುಪಡಿಸಿ ಉಳಿದೆಲ್ಲ ಭಾಗಗಳಿಗೆ ಜಲಮಂಡಳಿಯಿಂದ ವಾರದಲ್ಲಿ ಎರಡು ಬಾರಿ ನೀರು ಹರಿಸಲಾಗುತ್ತಿದೆ.

ಅದೂ ಬೆಳಗಿನ ಹೊತ್ತು ನೀರು ಬರುವುದರಿಂದ ಕಾರ್ಮಿಕರು ಮೊದಲು ನೀರು ಹಿಡಿದು ನಂತರ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಕೆಲಸಕ್ಕೆ ತಡವಾಗಿ ಹೋದರೆ, ಕಂಪನಿಯವರು ಒಳಗೆ ಸೇರಿಸುವುದಿಲ್ಲ. ನೀರು ಹಿಡಿಯದಿದ್ದರೆ ಒಂದು ವಾರ ನೀರಿಲ್ಲದಂತಹ ಪರಿಸ್ಥಿತಿಯಿದೆ.

ಇನ್ನು ಬೇಗೂರು-ಕೊಪ್ಪ ರಸ್ತೆಯಲ್ಲಿ ಬರುವ ಅಂಬೇಡ್ಕರ್‌ ನಗರ ನಿವಾಸಿಗಳು ಪ್ರಮುಖವಾಗಿ ಕೊಳವೆಬಾವಿ ನೀರನ್ನೇ ಆಶ್ರಯಿಸಿದ್ದು, ಕೊಳವೆ ಬಾವಿಯಲ್ಲಿರುವ ನೀರು ಕುಡಿಯಲು ಯೋಗ್ಯವಾಗಿಲ್ಲವೆಂದು ಅಧಿಕಾರಿಗಳೇ ಕೆಲವು ಕಡೆ ನೀರನ್ನು ಬಳಸದಂತೆ ಫ‌ಲಕಗಳನ್ನು ಹಾಕಿದ್ದಾರೆ. ಅಂಬೇಡ್ಕರ್‌ ನಗರದ ಮೂಲಕ ಸಮೀಪದ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಹರಿಯುತ್ತಿದ್ದರೂ, ಈ ಭಾಗದ ನಿವಾಸಿಗಳಿಗೆ ಮಾತ್ರ ಕಾವೇರಿ ನೀರು ಸಿಕ್ಕಿಲ್ಲ.

ಟ್ಯಾಂಕರ್‌ಗಳದ್ದೇ ದರ್ಬಾರು: ಜಲಮಂಡಳಿಯಿಂದ ವಾರದಲ್ಲಿ ಎರಡು ದಿನ ಹರಿಸುವ ನೀರು ಸಾಕಾಗಾದ ಹಿನ್ನೆಲೆಯಲ್ಲಿ ಜನರು ಟ್ಯಾಂಕರ್‌ ನೀರಿನ ಮೊರೆ ಹೋಗಬೇಕಾಗಿದೆ. ಇದೇ ಕಾರಣಕ್ಕೆ ಟ್ಯಾಂಕರ್‌ ನೀರಿನ ಬೆಲೆ ಸಹ ಹೆಚ್ಚಾಗಿದ್ದು, ಈ ಹಿಂದೆ ಒಂದು 350 ರೂ. ಇದ್ದ ಟ್ಯಾಂಕರ್‌ ಬೆಲೆ 500 ರೂ. ಆಗಿದೆ. ಹೆಚ್ಚಿನ ಭಾಗಗಳಿಗೆ ಕಾವೇರಿ ನೀರು ಸಮರ್ಪಕವಾಗಿ ಹರಿಯದ ಹಿನ್ನೆಲೆಯಲ್ಲಿ ವಲಯದಲ್ಲಿ ಟ್ಯಾಂಕರ್‌ಗಳಿಗೆ ಭಾರಿ ಬೇಡಿಕೆಯಿದ್ದು, ಬಡಾವಣೆಯ ಎಲ್ಲ ರಸ್ತೆಗಳಲ್ಲಿ ಟ್ಯಾಂಕರ್‌ಗಳೇ ಕಾಣುತ್ತವೆ.

Advertisement

ಕ್ಯಾನ್‌ ನೀರಿಗೆ ಬಹಳ ಬೇಡಿಕೆ: ಜಲಮಂಡಳಿ ಹಾಗೂ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಕಾರಣದಿಂದ ಬೊಮ್ಮನಹಳ್ಳಿ ವಲಯದ ಬಹುತೇಕ ಭಾಗಗಳಲ್ಲಿನ ಜನರು ಕುಡಿಯುವ ನೀರಿಗಾಗಿ ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರು ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ವಾರ್ಡ್‌ಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದು, ಈ ಘಟಕಗಳ ಎದುರು ನಿತ್ಯ ಬೆಳಗ್ಗೆ ಕ್ಯಾನ್‌ ಹಿಡಿದು ಸಾಲುಗಟ್ಟಿ ನಿಲ್ಲುವ ಜನರನ್ನು ಕಾಣಬಹುದು.

ಸಮಸ್ಯೆ ಎಲ್ಲೆಲ್ಲಿ?: ಬೊಮ್ಮನಹಳ್ಳಿ ವಲಯ ವ್ಯಾಪ್ತಿಗೆ ಬರುವ ಹೊಂಗಸಂದ್ರ, ಮುನಿಸ್ವಾಮಪ್ಪ ಲೇಔಟ್‌, ವೈಶ್ಯ ಬ್ಯಾಂಕ್‌ ಕಾಲೋನಿ, ಕೆನರಾ ಬ್ಯಾಂಕ್‌ ಕಾಲೋನಿ, ಅಕ್ಷಯ ನಗರ, ಎಲೇನಹಳ್ಳಿ, ಅಂಬೇಡ್ಕರ್‌ ನಗರ, ಬೇಗೂರು, ಅಯ್ಯಪ್ಪಸ್ವಾಮಿ ದೇವಸ್ಥಾನ ಮುಖ್ಯರಸ್ತೆ, ಮಂಗಮ್ಮನಪಾಳ್ಯ, ಹೊಸಕೆರೆಹಳ್ಳಿ, ಇಟ್ಟಮಡು, ಕೂಡ್ಲು, ನಾಗನಾಥಪುರ, ಬಸವನಪುರ ಸೇರಿದಂತೆ ಪ್ರಮುಖ ಭಾಗಗಳಲ್ಲಿ ನೀರಿನ ಸಮಸ್ಯೆಯಿದೆ.

ಜಲಮಂಡಳಿಯಿಂದ ಮಂಗಳವಾರ ಹಾಗೂ ಶನಿವಾರ ನೀರು ಬಿಡುತ್ತಾರೆ. ಆದರೆ, ಕಡಿಮೆ ಪ್ರಮಾಣದ ನೀರು ಬರುತ್ತಿದ್ದು, ಟ್ಯಾಂಕರ್‌ಗಳ ಮೊರೆ ಹೋಗಬೇಕು. ಇಲ್ಲವೆ, ಕೊಳವೆಬಾವಿ ಇರುವ ನೆರೆಮನೆಯವರಿಗೆ ಹಣ ಕೊಟ್ಟು ನೀರು ಪಡೆಯಬೇಕು. 
-ದೇವಿಕಾ, ಹೊಂಗಸಂದ್ರ

ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಈ ಹಿಂದೆ à ನೀರು ಕುಡಿದು ಹಲವು ಬಾರಿ ಆರೋಗ್ಯ ಹದಗೆಟ್ಟ ಉದಾಹರಣೆಗಳಿವೆ. ಹೀಗಾಗಿ ಕುಡಿಯಲು ದುಬಾರಿ ದರದ ಕ್ಯಾನ್‌ ನೀರನ್ನು ಬಳಸುತ್ತಿದ್ದೇವೆ.
-ಯಶೋಧಾ, ಮಂಗಮ್ಮನಪಾಳ್ಯ

ಜಲಮಂಡಳಿ ಪೈಪ್‌ಲೈನ್‌ ಹಾಕಿ ಹಲವು ತಿಂಗಳಾಗಿದೆ. ಆದರೆ, ನೀರು ಹರಿಸದಿರುವ ಕಾರಣ, ಅನಿವಾರ್ಯವಾಗಿ ಟ್ಯಾಂಕರ್‌ ನೀರು ಖರೀದಿಸಬೇಕಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಟ್ಯಾಂಕರ್‌ನವರು ಕೂಡ ಬೆಲೆ ಹೆಚ್ಚಿಸಿದ್ದಾರೆ. 
-ಗಂಗಾ, ಸಿಂಗಸಂದ್ರ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next