Advertisement

ಮುಖ್ಯರಸ್ತೆ ಕಂಬ ತೆರವುಗೊಳಿಸದೆ ಕಾಮಗಾರಿ

11:00 AM May 03, 2022 | Team Udayavani |

ಗಂಗೊಳ್ಳಿ: ಇಲ್ಲಿನ ನೀರಿನ ಟ್ಯಾಂಕ್‌ ಬಳಿಯಿಂದ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್‌ ಕಾಮಗಾರಿ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಮನಹರಿಸದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಾಂಕ್ರೀಟ್‌ ರಸ್ತೆ

ಪ್ರಾಕೃತಿಕ ವಿಕೋಪ ನಿಧಿಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಮುಖ್ಯರಸ್ತೆ ಕಾಂಕ್ರೀಟ್‌ ಕಾಮಗಾರಿ ಆರಂಭವಾಗಿದೆ. ಕೆಲಸ ಆರಂಭಕ್ಕೂ ಮುನ್ನ ರಸ್ತೆ ಬದಿಯಲ್ಲಿರುವ ದೂರವಾಣಿ ಕಂಬ, ಲೋಕೋಪಯೋಗಿ ಇಲಾಖೆಯ ಸೂಚನಾ ಫಲಕ ಹಾಗೂ ಅತಿಕ್ರಮಣವನ್ನು ತೆರವುಗೊಳಿಸದೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮೇಲ್‌ಗ‌ಂಗೊಳ್ಳಿ ಸಮೀಪ ಮುಖ್ಯರಸ್ತೆಗೆ ತಾಗಿಕೊಂಡು ದೂರವಾಣಿ ಕಂಬ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ತೊಡಕಾಗುತ್ತಿದೆ. ಈ ಕಂಬವನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.

ಅತಿಕ್ರಮಣ

ಮುಖ್ಯರಸ್ತೆ ಸಮೀಪ ನಿರ್ದಿಷ್ಟ ಜಾಗವನ್ನು ಬಿಡದೆ ಖಾಸಗಿಯವರು ಅತಿಕ್ರಮಿಸಿ ನಿರ್ಮಿಸಿರುವ ಆವರಣ ಗೋಡೆಗಳನ್ನು ತೆರವುಗೊಳಿಸದೆ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಈ ಹಿಂದೆ ಬೇರೆ ಮುಖ್ಯ ರಸ್ತೆ ಕಾಂಕ್ರೀಟ್‌ ಕಾಮಗಾರಿ ಸಂದರ್ಭ ಸ್ಥಳೀಯಾಡಳಿತ ರಸ್ತೆಗೆ ಬೇಕಾಗುವಷ್ಟು ಜಾಗ ತೆರವು ಮಾಡಿಸಿತ್ತು. ಆದರೆ ಇಲ್ಲಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

Advertisement

ಒತ್ತಾಯ

ಅಂದಾಜುಪಟ್ಟಿಯಲ್ಲಿರುವಂತೆ 7 ಮೀಟರ್‌ ರಸ್ತೆ ಅಗಲಗೊಳ್ಳಬೇಕಿದ್ದು, ಈಗಿರುವ ರಸ್ತೆಯ ಅಗಲದಷ್ಟೇ ಕಾಂಕ್ರೀಟ್‌ ಕಾಮಗಾರಿ ನಡೆಸಲು ಗುತ್ತಿಗೆದಾರರು ಮುಂದಾಗಿದ್ದಾರೆ. ಕಂಬ ಹಾಗೂ ಸೂಚನ ಫಲಕ ಮತ್ತು ಅತಿಕ್ರಮಣವನ್ನು ತೆರವುಗೊಳಿಸಿ ಸುವ್ಯವಸ್ಥಿತ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಈಗಿರುವಷ್ಟೇ ಅಗಲದ ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೆ ಯಾವುದೇ ಪ್ರಯೋಜನವಿಲ್ಲ. ಅಂದಾಜು ಪಟ್ಟಿಯಲ್ಲಿರುವಂತೆ 7 ಮೀಟರ್‌ ರಸ್ತೆ ವಿಸ್ತರಣೆ ಮಾಡಿಕೊಂಡು ಕಾಮಗಾರಿ ನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಲಾಖೆ ಕಂಬ ಮತ್ತು ಲೋಕೋಪಯೋಗಿ ಇಲಾಖೆಯ ಸೂಚನಾ ಫಲಕ, ಇದ್ದರೂ ಅದನ್ನು ಈವರೆಗೆ ತೆರವುಗೊಳಿಸಿಲ್ಲ. ಇದು ಕಾಮಗಾರಿಗೆ ತೊಡಕಾಗುತ್ತಿದ್ದು, ರಸ್ತೆಯ ಬದಿಯಲ್ಲಿರುವ ದೂರವಾಣಿ ಇಲಾಖೆಯ ಕಂಬಗಲು ಹಾಗೂ ಸೂಚನ ಫಲಕವನ್ನು ತೆರವುಗೊಳಿಸಿ ವ್ಯವಸ್ಥಿತವಾಗಿ ಕಾಂಕ್ರೀಟ್‌ ಕಾಮಗಾರಿ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸೂಚಿಸಲಾಗಿದೆ

ಕಾಂಕ್ರೀಟ್‌ ಕಾಮಗಾರಿ ನಡೆಸಲಾಗುತ್ತಿದೆ. 7 ಮೀಟರ್‌ ಅಗಲದ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಜಾಗವನ್ನು ತೆರವುಗೊಳಿಸಿಕೊಂಡು ಕಾಮಗಾರಿಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ತಿಳಿಸಲಾಗಿದೆ. -ಶ್ರೀನಿವಾಸ ಖಾರ್ವಿ ಅಧ್ಯಕ್ಷರು, ಗಂಗೊಳ್ಳಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next