ಕಲಬುರಗಿ: ನಗರದ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಬರುವ ಐದಾರು ತಿಂಗಳಲ್ಲಿ 24×7 ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ಪ್ರಾರಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಗುಬ್ಬಿ ಕಾಲೋನಿಯ ಆದರ್ಶ ಕಲ್ಯಾಣ ಮಂಟಪದ ಹತ್ತಿರ ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಶ್ವ ಬ್ಯಾಂಕ್ ಮತ್ತು ಏಶಿಯನ್ ಡೆವಲೆಪ್ ಮೆಂಟ್ ಬ್ಯಾಂಕಿನ ಆರ್ಥಿಕ ಸಹಾಯದಿಂದ ಸುಮಾರು 600 ಕೋಟಿ ರೂ. ವೆಚ್ಚದಿಂದ ಕೈಗೊಳ್ಳಲಾಗುವ ಯೋಜನೆಯ ಟೆಂಡರ್ ಪ್ರಕ್ರಿಯೆ ಕಾರ್ಯ ಪ್ರಗತಿಯಲ್ಲಿದೆ. ನಂತರ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗುವುದು.
ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರತಿಯೊಂದು ಹಳ್ಳಿಗೆ ಡಾಂಬರ್ ರಸ್ತೆ ಸೌಲಭ್ಯ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ ಎಂದರು. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಅಡಿ ಕೈಗೊಳ್ಳಲಾಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,
ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಅತೀ ಮುಖ್ಯವಾಗಿದ್ದು, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಮತ್ತು ಅಧಿಧಿಕಾರಿಗಳು ಇದಕ್ಕೆ ಆದ್ಯತೆ ನೀಡಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಜನರ ಅಪೇಕ್ಷೆಯಂತೆ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಬೇಕು.
ನಾಗರಿಕರು ಕಸವನ್ನು ಚರಂಡಿಗೆ ಹಾಕಬೇಡಿ ಹಾಗೂ ಸ್ವತ್ಛತೆಗೆ ಆದ್ಯತೆ ನೀಡಬೇಕು. ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳಿದರು. ಶಾಸಕ ಡಾ| ಖಮರುಲ್ ಇಸ್ಲಾಂ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಇಕ್ಬಾಲ್ ಅಹ್ಮದ್ ಸರಡಗಿ, ಮಹಾನಗರ ಪಾಲಿಕೆ ಮಹಾಪೌರ ಸೈಯ್ಯದ್ ಅಹ್ಮದ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್,
ಕಾಡಾ ನೀರಾವರಿ ಯೋಜನೆಗಳ ವಲಯ ಅಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ, ಉಪ ಮಹಾಪೌರ ಶರಣಮ್ಮ ಅ. ಬೆಣ್ಣೂರ, ಮಹಾನಗರಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಸದಸ್ಯರು, ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿ ಧಿಕಾರಿ ಉಜ್ವಲಕುಮಾರ ಘೋಷ್, ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಹಾಜರಿದ್ದರು.