ಬೆಳಗಾವಿ: ಸರ್ಕಾರದ ಕೆಲಸ ಎಂದರೆ ದೇವರ ಕೆಲಸ. ನಾವೆಲ್ಲರೂ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಕರ್ತವ್ಯನಿರ್ವಹಿಸಿದಲ್ಲಿ ಮಾತ್ರ ಸಮಾಜದಲ್ಲಿಕಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದು ಬೆಳಗಾವಿ ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.
ನಗರದ ಸುವರ್ಣ ವಿಧಾನಸೌಧದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ನಮಗೆ ಜನ ಸೇವೆ ಮಾಡಲು ಜವಾಬ್ದಾರಿ ನೀಡಿದೆ. ಹೀಗಾಗಿ ಸರ್ಕಾ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಮಾಡಿದರೆ ಮಾತ್ರ ಸರ್ಕಾರದಯೋಜನೆಗಳು ಸಮಾಜದ ಕಟ್ಟಕಡೆಯವ್ಯಕ್ತಿಗೂ ತಲುಪುತ್ತವೆ ಎಂದರು.
ಪ್ರತಿಯೊಬ್ಬ ಸಾರ್ವಜನಿಕ ನೌಕರನು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು. ಸರ್ಕಾರ ನೀಡಿರುವ ಕೆಲಸದ ಜತೆಗೆ ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಬೇಕು. ದುರಾಸೆಯಿಂದ ಹಣ ಹಾಗೂ ಆಸ್ತಿ ಗಳಿಕೆ ಮಾಡಿದರೆ ಒಂದಿಲ್ಲ ಒಂದು ದಿನ ಅದಕ್ಕೆ ತಕ್ಕ ಬೆಲೆ ಕಟ್ಟಲೇಬೇಕಾಗುತ್ತದೆ. ಅಕ್ರಮ ಸಂಭಾವನೆಗೆ ಆಸೆಪಟ್ಟರೆ ಆಗಬಹುದಾದ ತೊಂದರೆಗಳ ಬಗ್ಗೆ ತಿಳಿ ಹೇಳಿದ ಅವರು, ನಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು ಎಂದರು.
ಮಾಹಿತಿ ಹಕ್ಕು ಆಯೋಗದ ಆಯುಕ್ತೆ ಬಿ.ವಿ. ಗೀತಾ ಮಾತನಾಡಿ, ಕೇಂದ್ರ ಜಾಗೃತ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಹಾಗೂ ಲೋಕಪಾಲ್ ಮಸೂದೆ ಬಗ್ಗೆ ಸಾರ್ವಜನಿಕ ನೌಕರರು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಅಲ್ಲದೇ ಈ ಬಗ್ಗೆ ಎಲ್ಲರಿಗೂತಿಳಿವಳಿಕೆ ನೀಡುವಂತೆ ಕರೆ ನೀಡಿದರು.ನಾಲ್ಕನೇ ಅಧಿಕ ಜಿಲ್ಲಾ ಹಾಗೂ ವಿಶೇಷ ನ್ಯಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರವೀಣ ಅಗಸಗಿ ಮಾತನಾಡಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಕ್ಕೂ ಮತ್ತು ಜಾಗೃತಿ ಅರಿವು ಸಪ್ತಾಹಕ್ಕೂ ಇರುವ ಸಂಬಂಧವನ್ನು ವಿವರಿಸಿದರು.
ಸುವರ್ಣಸೌಧದಲ್ಲಿ ಇರುವ ಎಲ್ಲ 22 ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಎಲ್ಲ ನೌಕರರಿಗೆಡಿಎಸ್‌ಪಿ ಜೆ. ರಘು ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಎಂ.ಎಸ್. ತೀರ್ಥ ನಿರೂಪಿಸಿದರು.
ಉದಯ ಪ್ರಾರ್ಥಿಸಿದರು. ಡಿಎಸ್‌ಪಿ ಬಿ.ಎಸ್. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ಸಪೆಕ್ಟರ್ ರಫೀಕ್ ತಹಶೀಲ್ದಾರ ವಂದಿಸಿದರು.