ಕೋಲಾರ: ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ಕೆಜಿಎಫ್ ನಗರ ಸಭೆಗಳ ಚುನಾವಣೆಗಳು ಸುಸೂತ್ರವಾಗಿ ನಡೆಯುವಂತೆ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ಸಿದ್ಧತೆ ಮತ್ತು ರಕ್ಷಣೆ ಕುರಿತು ಚರ್ಚಿಸಲು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಗರಗಳ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು. ನಗರದ ಗಡಿಯಿಂದಾಚೆಗೆ ಮದ್ಯವನ್ನು ಸಂಗ್ರಹಿಸಿ ನಂತರ ತಂದು ಹಂಚು ಸಂಭವವಿರುತ್ತದೆ. ಈ ಸಂಬಂಧ ಅಬಕಾರಿ ಇಲಾಖೆಯು, ಸಿಬ್ಬಂದಿಗಳು ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ಚುನಾವಣೆ ನಡೆಯುವ ಪ್ರತಿ ನಗರಸಭೆಗೆ ತಲಾ 3 ಮಾದರಿ ನೀತಿ ಸಂಹಿತೆ ತಂಡಗಳನ್ನು ನೀಡಲಾಗಿದ್ದು, ಇವರು 3 ಪಾಳಿಯಲ್ಲಿ 24×7 ಕಾರ್ಯನಿರ್ವಹಿಸುವರು. ಅಭ್ಯರ್ಥಿಗಳು ಪೋಸ್ಟರ್, ಬ್ಯಾನರ್ ಬಂಟಿಂಗ್ಸ್‌ಗಳನ್ನು ಅನು ಮತಿ ಪಡೆದು ಹಾಕಬೇಕು. ಇದನ್ನು ಖರ್ಚು ವೆಚ್ಚಗಳಿಗೆ ಸೇರಿಸಲಾಗುವುದು.
ಚುನಾವಣಾ ಅಧಿಕಾರಿಗಳು ಮತ್ತು ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಭೌತಿಕವಾಗಿ ಪರಿಶೀಲಿಸಿ ಶೌಚಾಲಯ, ಪ್ಯಾನ್, ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ಕ್ರಮ ವಹಿಸಬೇಕು. ಚುನಾವಣಾ ಕರ್ತವ್ಯದಲ್ಲಿದ್ದು, ಮತದಾರ ರಾಗಿರುವ ಸಿಬ್ಬಂದಿಗಳಿಗೆ ಪೋಸ್ಟಲ್ ಬ್ಯಾಲೆಟ್ ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕ ಎಂ.ವಿ ಚಂದ್ರಕಾಂತ್, ಜಿ.ವಿ.ನಾಗರಾಜ್, ವೆಚ್ಚ ವೀಕ್ಷಕರಾದ ಎಂ.ವಿ.ಗುರುಬಸವೇಗೌಡ, ಎಸ್ಪಿ ಕಾರ್ತಿಕ್ ರೆಡ್ಡಿ, ಕೆಜಿಎಫ್ ವರಿಷ್ಠಾಧಿಕಾರಿಗಳಾದ ಮಹಮದ್ ಸುಜೀತ, ಅಪರ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.