Advertisement

ಅರಣ್ಯ ರಕ್ಷಿಸುವ ಕೆಲಸವೊಂದೇ; ಹುದ್ದೆ-ಸಂಬಳ ಬೇರೆ ಬೇರೆ !

03:45 AM Apr 05, 2017 | Harsha Rao |

ಧಾರವಾಡ: ಅರಣ್ಯ ರಕ್ಷಣೆ ಮಾಡುವ ರಕ್ಷಕರಿಗೆ ಮತ್ತು ಅರಣ್ಯ ವೀಕ್ಷಕರಿಗೆ ಯಾವ ಜಿಲ್ಲೆಯಾದರೇನು? ಕೆಲಸ ಮಾತ್ರ ಒಂದೇ, ಹಗಲು ರಾತ್ರಿ ಎನ್ನದೇ ಅರಣ್ಯ ರಕ್ಷಿಸುವುದು. ಅರಣ್ಯ ವೀಕ್ಷಕರಾಗಿ ಕೆಲಸ ಮಾಡುವವರನ್ನು ಅರಣ್ಯ
ಕಾವಲುಗಾರರು ಎಂದು ನೇಮಕಾತಿ ಮಾಡುವ ಹಿರಿಯ ಅಧಿಕಾರಿಗಳು ನಮೂದಿಸಿದ್ದರಿಂದ ಇಂದು ಈ 35 ಜನರು
ಹೆಚ್ಚಿನ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದರೂ, ಕಡಿಮೆ ಹುದ್ದೆಯ ಸಂಬಳ ಪಡೆಯುವಂತಾಗಿದೆ.

Advertisement

ರಾಜ್ಯದಲ್ಲಿ ಅಳಿದುಳಿದ ಅರಣವನ್ನು ನಿಷ್ಠೆಯಿಂದ ಹಗಲು- ರಾತ್ರಿ ಕಾಯುತ್ತಿರುವ ಅರಣ್ಯ ವೀಕ್ಷಕರು ಕಳೆದ 30 ವರ್ಷಗಳ
ಹಿಂದೆ ದಿನಗೂಲಿ ಅರಣ್ಯ ಕಾವಲುಗಾರರಾಗಿ ಸೇವೆಗೆ ಸೇರಿದ್ದರು. ಅಂದಿನಿಂದ ಅವರು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತ ಹೋರಾಟ ನಡೆಸಿದ್ದರು. ಸರ್ಕಾರ ಕೊನೆಗೆ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರ ಪಟ್ಟಿಗೆ ಸೇರಿಸಿತು. ಸೂಕ್ತ ಸಂಬಳ ಮತ್ತು ಭತ್ಯೆ ನೀಡಲು 2013ರಲ್ಲಿ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸರ್ಕಾರ ಅವರ ನೌಕರಿಯನ್ನು ಕಾಯಂಗೊಳಿಸಿತು. ಈ ಸಂದರ್ಭದಲ್ಲಿ ಇವರು ಅರಣ್ಯ ವೀಕ್ಷಕರೆಂದು ಕೆಲಸ ನಿರ್ವಹಿ, ಅವರನ್ನು ಅರಣ್ಯ ಕಾವಲುಗಾರ ಎಂದು ನೇಮಕಾತಿ ಪತ್ರದಲ್ಲಿ ನಮೂದಿಸಿದ್ದರಿಂದ ಅರಣ್ಯ ವೀಕ್ಷಕರ ಕೆಲಸ ಮಾಡುತ್ತ, ಅರಣ್ಯ ಕಾವಲುಗಾರರ ಸಂಬಳ ಪಡೆಯುವಂತಾಗಿದೆ.

ಆಗಬೇಕಾಗಿದ್ದೇನು?: ಧಾರವಾಡ ಜಿಲ್ಲೆಯ ಪಕ್ಕದ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ 2013ರಲ್ಲಿ ಇದೇ ಕೋಟಾದಡಿ
ನೇಮಕಗೊಂಡ ಅರಣ್ಯ ವೀಕ್ಷಕರಿಗೆ ಇದೀಗ ಕೈತುಂಬಾ ಸಂಬಳ, ಭತ್ಯೆ ಮತ್ತು ಉತ್ತಮ ಭಡ್ತಿ ಹೊಂದಲು ಉತ್ತಮ
ಅವಕಾಶಗಳು ಸಿಕ್ಕುತ್ತಿವೆ. ಆ ಜಿಲ್ಲೆಯಲ್ಲಿನ ಎಲ್ಲರಿಗೂ ಇಂದು 10,400 ಮೂಲ ವೇತನ ಸಿಕ್ಕುತ್ತಿದೆ. ಆದರೆ ಅದೇ ಕೆಲಸ ಮಾಡುತ್ತಿರುವ ಧಾರವಾಡ ಜಿಲ್ಲೆಯ ಅರಣ್ಯ ಸಿಬ್ಬಂದಿ ಹುದ್ದೆ ಅರಣ್ಯ ಕಾವಲುಗಾರ ಎಂದು ನಮೂದಾಗಿದ್ದರಿಂದ ಅವರಿಗೆ 9,600 ಮೂಲ ವೇತನ ಲಭಿಸುತ್ತಿದೆ. ನೇಮಕಾತಿ ವೇಳೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಂದು ನಾವು ಕಡಿಮೆ ಸಂಬಳ ಪಡೆಯುವಂತಾಗಿದ್ದು, ಸರ್ಕಾರ ಕೂಡಲೇ ಇದನ್ನು ಸರಿಮಾಡಬೇಕು ಎನ್ನುತ್ತಿದ್ದಾರೆ ನೊಂದ ಅರಣ್ಯ
ಕಾವಲುಗಾರರು.

ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವ ಕತೆಯೇ ಬೇರೆ. ದಿನಗೂಲಿಯಿಂದ ನೇಮಕಾತಿಯಾಗುವಾಗ ಸರ್ಕಾರವೇ ವೀಕ್ಷಕ ಮತ್ತು ಕಾವಲುಗಾರ ಹುದ್ದೆಗಳನ್ನು ಇಂತಿಷ್ಟು ಎಂದು ನಿಗದಿಪಡಿಸಿತ್ತು. ಅದರ ಅನ್ವಯ ಮೊದಲು ವೀಕ್ಷಕರ ಹುದ್ದೆ ತುಂಬಿ, ಉಳಿದ ಎಲ್ಲರನ್ನೂ ಕಾವಲುಗಾರ ಹುದ್ದೆಗೆ ಭರ್ತಿ ಮಾಡಲಾಗಿದೆ. ಈಗ ಅದು ಪ್ರಮಾದ ಎಂದು ಗೊತ್ತಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಿದ್ದಾರೆ.

ಕಾರ್ಯದಕ್ಷತೆ ಮೇಲೂ ಪರಿಣಾಮ: ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ, ಅರಣ್ಯ ಇರುವ ಎಲ್ಲಾ ಜಿಲ್ಲೆಗಳಲ್ಲೂ ದಶಕಗಳ ಕಾಲ ದಿನಗೂಲಿ ಅರಣ್ಯ ವೀಕ್ಷಕರಾಗಿದ್ದವರನ್ನು ಕಾಯಂಗೊಳಿಸಿ ವೀಕ್ಷಕ (ವಾಚರ್‌) ಮತ್ತು ಕಾವಲುಗಾರ (ವಾಚ್‌ಮನ್‌) ಹುದ್ದೆ ನೀಡಲಾಯಿತು. ಇಬ್ಬರ ಕೆಲಸ ಒಂದೇ ಆದರೂ ವೇತನ ತಾರತಮ್ಯವಿದೆ. ಇದು ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯದ ವೈಮನಸ್ಸಿಗೂ ಕಾರಣವಾಗುತ್ತಿದ್ದು, ಇಬ್ಬರು ನೌಕರರು ಒಂದೇ ಕೆಲಸ ಮಾಡಿ ಬೇರೆ ಬೇರೆ ವೇತನ ಪಡೆಯುತ್ತಿರುವುದು ಅವರ ಕಾರ್ಯದಕ್ಷತೆ ಮೇಲೂ ಪರಿಣಾಮ ಬಿರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next