ರಾಮನಗರ: ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಜೊತೆಗೆ ಕೈಜೋಡಿಸಿ ಪ್ರತೀ ಹಂತದಲ್ಲಿ ಗ್ರಾಪಂ ಜೊತೆಗಿದ್ದು ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಶ್ರಮಿಸಬೇಕು ಎಂದು ತಾಲೂಕಿನ ಕೈಲಾಂಚ ಗ್ರಾಪಂ ಅಧ್ಯಕ್ಷ ಆರ್. ಪಾಂಡುರಂಗ ಅಭಿಪ್ರಾಯ ಪಟ್ಟರು.
ಕೈಲಾಂಚ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಗ್ರಾಪಂ ಕರ್ನಾಟಕ ಅಭಿವೃದ್ಧಿ ಯೋಜನೆಯ (ಕೆಡಿಪಿ) ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕ ಕೆಲಸದಲ್ಲಿ ಇಚ್ಛಾಶಕ್ತಿ ಬೆಳೆಸಿಕೊಂಡಾಗ ಮಾತ್ರ ಗ್ರಾಮಾಭಿವೃದ್ಧಿ, ಸಮುದಾಯ ಕೆಲಸಗಳು, ಗ್ರಾಮೀಣ ರೈತಪರ ಯೋಜನೆಗಳು, ಸಾಕಾರ ಗೊಳ್ಳಲು ಸಾಧ್ಯ. ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದು ವಿವಿಧ ಇಲಾಖೆಗಳ ಮುಖಾಂತರ ಗ್ರಾಪಂ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದರು.
ಸಾರ್ವಜನಿಕರಿಗೆ ಕಾಲಕಾಲಕ್ಕೆ ವಿವಿಧ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ತಿಳಿವಳಿಕೆ ನೀಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರತೀ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ರೈತರ ಏಳಿಗೆಗಾಗಿ ಇರುವ ಹತ್ತು ಹಲವಾರು ಕಾರ್ಯಕ್ರಮಗಳ ಯೋಜನೆಗಳ ಸಾಕಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಜೊತೆಗೆ ಕೈಜೋಡಿಸಬೇಕು ಎಂದರು.
ಕೃಷಿ ಅಧಿಕಾರಿ ಪ್ರದೀಪ್ ಮಾತನಾಡಿ, ಕೈಲಾಂಚ ಗ್ರಾಪಂನಲ್ಲಿ ರೈತಸಿರಿ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಯಲು ಎಕರೆಗೆ 10 ಸಾವಿರ ಪ್ರೋತ್ಸಾಹ ಧನ ಸರ್ಕಾರ ನೀಡಲಿದ್ದು ಆರೂವರೆ ಎಕ್ಟೇರ್ ಪ್ರದೇಶದಲ್ಲಿ ರೈತರು ಸಿರಿಧಾನ್ಯ ಬೆಳೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಪಿ.ಎಂ. ಕಿಶಾನ್ ಯೋಜನೆಯಲ್ಲಿ 1058 ಜನ ರೈತರು ಹೆಸರು ನೊಂದಾಯಿಸಿದ್ದಾರೆ. ನರೇಗಾ ಕಾಮಗಾರಿಯಲ್ಲಿ 32 ಕಾಮಗಾರಿ ಕೈಗೊಂಡಿದ್ದು 2070 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಎಂದು ಮಾಹಿತಿ ನೀಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸತೀಶ್ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಯೋಜನೆಗಳ ಸಮರ್ಪಕ ಅನುಷ್ಠಾನ ಇಲಾಖೆಗಳ ಕಾರ್ಯ ವೈಖರಿ ಬಗ್ಗೆ ತಿಳಿಯಲು ಕೆಡಿಪಿ ಸಭೆ ನಡೆಸುವಂತೆ ಸರ್ಕಾರ ತಿಳಿಸಿದ್ದು, ಗ್ರಾಪಂನಲ್ಲಿ ಕೆಡಿಪಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಇಲಾಖಾವಾರು ಮಾಹಿತಿ, ಫಲಾನುಭವಿಗಳು, ಯೋಜನೆಗಳು, ಅಭಿವೃದ್ಧಿ ಕೆಲಸಗಳು ತಿಳಿಯುವುದರಿಂದ ಕೆಡಿಪಿ ಸಭೆ ಸಹಕಾರಿಯಾಗಿದೆ. ಗ್ರಾಮೀಣಾಭಿವೃದ್ಧಿ ಸರ್ಕಾರದ ಮೂಲ ಮಂತ್ರವಾಗಿದೆ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಪ್ರಮುಖಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಆರೋಗ್ಯ, ಕಂದಾಯ, ಬೆಸ್ಕಾಂ, ಖಾದಿ ಮತ್ತು ಗ್ರಾಮೋದ್ಯೋಗ, ಶಿಕ್ಷಣ, ಪಶುಪಾಲನೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿರುವ ಯೋಜನೆಗಳ ಪ್ರಗತಿ ಅನುಷ್ಟಾನ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಪಂ ಸದಸ್ಯ ಬೋರಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ವಡ್ಡರಹಳ್ಳಿ ವೆಂಕಟೇಶ್, ತೋಟಗಾರಿಕೆ ಅಧಿಕಾರಿ ಅನಿಲ್, ರೇಷ್ಮೆ ಅಧಿಕಾರಿ ಆನಂದ್, ಜಾನುವಾರು ಅಧಿಕಾರಿ ಕರಿಯಪ್ಪ, ರೇಷ್ಮೆ ವಿಸ್ತರಣಾಧಿಕಾರಿ ವಸಂತರಾವ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ಖಾದಿ ಗ್ರಾಮೋದ್ಯೋಗ ಇಲಾಖೆ ಅಧಿಕಾರಿ ಸಿ. ಮಂಜುಳಾದೇವಿ, ಆರೋಗ್ಯ ಇಲಾಖೆ ಶಿವರಾಮಯ್ಯ, ಮುಖ್ಯಶಿಕ್ಷಕಿ ಗಾಯತ್ರಿದೇವಿ, ಶಿಕ್ಷಕ ಪ್ರಕಾಶ್, ಬೆಸ್ಕಾಂ ನಾಗರಾಜು, ವಿಎಸ್‌ಎಸ್‌ಎನ್ ರೇಣುಕಾಮೂರ್ತಿ, ಸಾವಿತ್ರಮ್ಮ, ಕಂದಾಯ ಇಲಾಖೆ ವೆಂಕಟೇಶ್ ಇತರರು ಉಪಸ್ಥಿತರಿದ್ದರು.