ಮುದ್ದೇಬಿಹಾಳ: ಮಹಾತ್ಮಾ ಗಾಂ ಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಹೆಚ್ಚು ಕೆಲಸ ಸೃಷ್ಟಿಸಿ ಗುಳೆ ಹೋಗುವ ಕೃಷಿ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಗ್ರಾಪಂಗಳ ಪಿಡಿಒಗಳು ಆಡಳಿತ ಮಂಡಳಿ ಸಹಕಾರದೊಂದಿಗೆ ಯೋಜನೆ ರೂಪಿಸಬೇಕು ಎಂದು ತಾಪಂನ ನರೇಗಾ ಸಹಾಯಕ ನಿರ್ದೇಶಕ ಬಸವರಾಜ ತಾಳಿಕೋಟಿ ಸಲಹೆ ನೀಡಿದರು.
ಕೋಳೂರು ಗ್ರಾಮದ ಗ್ರಾಪಂ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರೋಜಗಾರ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಗಾದಡಿ ನಡೆಯುವ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆಗೆ ಅವಕಾಶ ನೀಡದೆ ನೇರವಾಗಿ ಕೂಲಿಕಾರರಿಗೆ ಕೆಲಸ ನೀಡಬೇಕು. ಇದು ಆರ್ಥಿಕ ಪ್ರಗತಿಗೆ ಅಗತ್ಯವಾಗಿದೆ ಎಂದರು. ಈಗಾಗಲೇ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ, ಬದು ನಿರ್ಮಾಣ, ಕೃಷಿ ಹೊಂಡ ಸೇರಿ ಹಲವು ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕೂಲಿಕಾರರು ಸ್ವಯಂ ಪ್ರೇರಿತರಾಗಿ ದುಡಿಯಲು ಮುಂದೆ ಬರುತ್ತಿದ್ದಾರೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಯೋಜನೆ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು.
ಬಡ ಕುಟುಂಬಗಳಿಗೆ ಸ್ಥಳೀಯವಾಗಿ ಕೆಲಸ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನರೇಗಾ ಅಡಿ ದುಡಿಯುವ ಕೂಲಿ ಕಾರ್ಮಿಕರಿಗೆ ಕುಟುಂಬಕ್ಕೆ ಪಡಿತರ ಚೀಟಿ ಎಷ್ಟು ಅಗತ್ಯವೊ ಹಾಗೇ ಉದ್ಯೋಗ ಚೀಟಿಯೂ ಅಗತ್ಯವಾಗಿರುತ್ತದೆ. ಪ್ರತಿ ಕುಟುಂಬವು ಕಡ್ಡಾಯವಾಗಿ ಜಾಬ್ ಕಾರ್ಡ್ ಪಡೆಯಬೇಕು. ದನದ ದೊಡ್ಡಿ, ಕುರಿದೊಡ್ಡಿ, ಬಚ್ಚಲು ಗುಂಡಿ, ಕೃಷಿ ಹೊಂಡ, ಬದು ನಿರ್ಮಾಣ ಕಾಮಗಾರಿಗಳನ್ನು ಮಾಡಿಕೊಂಡು ನಿಮ್ಮ ಆಸ್ತಿಗಳನ್ನು ಸೃಜನೆ ಮಾಡಿ ಎಂದರು. ನರೇಗಾ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ ಮಾತನಾಡಿ, ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಕೆಲಸ ಕೊಡುವುದು ಕಡ್ಡಾಯವಾಗಿದೆ. ಪ್ರತಿ ಕುಟುಂಬ ಪಂಚಾಯತಿಯಲ್ಲಿ ಉದ್ಯೋಗ ಚೀಟಿ ಪಡೆದು ಕೆಲಸಕ್ಕೆ ಅರ್ಜಿ ಸಲ್ಲಿಸಬೇಕು. 15 ದಿನದೊಳಗೆ ನಿಮಗೆ ಕೆಲಸ ಒದಗಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ.
ಕೂಲಿಕಾರರ ದುಡಿಮೆಯ ಹಣವನ್ನು ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವುದರಿಂದ ಈ ಯೋಜನೆ ಅನುಕೂಲಕರವಾಗಿದೆ. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮೀಣ ಮಹಿಳೆಯರು ಯೋಜನೆ ಬಗ್ಗೆ ಗ್ರಾಮೀಣರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಕಾಯಕಬಂಧುಗಳಾಗಿ ಮಹಿಳೆಯರಿಗೆ ಹೆಚ್ಚು ಕೆಲಸ ಕೊಡಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದರು. ಪಿಡಿಒ ಆನಂದ ಹಿರೇಮಠ, ತಾಲೂಕು ತಾಂತ್ರಿಕ ಸಂಯೋಜಕ ಶಂಕರಗೌಡ, ಗ್ರಾಪಂ ಕಾರ್ಯದರ್ಶಿ ರಂಗರಾಜು ಬಿ.ಆರ್., ಗ್ರಾಪಂ ಸದಸ್ಯರಾದ ರಮೇಶ ಇಂಗಳಗಿ, ಪ್ರಶಾಂತ ತಾರನಾಳ, ಗ್ರಾಮಸ್ಥರಾದ ಲಕ್ಷ್ಮಣ ಬಿಜೂjರ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.